ADVERTISEMENT

ಹಿಜಾಬ್ ವಿವಾದ: ಆರ್‌ಎಸ್ಎಸ್ ತಾಳಕ್ಕೆ ಕುಣಿಯುತ್ತಿರುವ ಸಿಎಂ -ಪ್ರಿಯಾಂಕ್ ಖರ್ಗೆ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2022, 8:35 IST
Last Updated 12 ಫೆಬ್ರುವರಿ 2022, 8:35 IST
ಪ್ರಿಯಾಂಕ್ ಖರ್ಗೆ
ಪ್ರಿಯಾಂಕ್ ಖರ್ಗೆ   

ಚಿತ್ತಾಪುರ (ಕಲಬುರಗಿ): ಬೇರೆ ಜಿಲ್ಲೆಗಳಿಗೆ ಹಾಗೂ ರಾಜ್ಯಗಳಿಗೆ ಹಿಜಾಬ್ ವಿವಾದ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಹಬ್ಬಿದ್ದು, ಹೀಗೆ ಹರಿಬಿಟ್ಟಿದ್ದು ಯಾರು? ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿ ಕುರ್ಚಿ ಉಳಿಸಿಕೊಳ್ಳಲು ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದಾರೆ ಎಂದು ಶಾಸಕ ಹಾಗೂ‌ ಕೆಪಿಸಿಸಿ‌ ವಕ್ತಾರ ಪ್ರಿಯಾಂಕ್ ಖರ್ಗೆ ಟೀಕಿಸಿದ್ದಾರೆ.

ಪಟ್ಟಣದಲ್ಲಿ ಶನಿವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ‘ಕೋವಿಡ್‌ನಿಂದಾಗಿ ಶಾಲೆಗಳು ಬಂದ್ ಆಗಿ ಶಿಕ್ಷಣ ವ್ಯವಸ್ಥೆ ಹಾಳಾಗಿದೆ. ಆದರೂ ಈಗ ಎದ್ದಿರುವ ವಿವಾದದಿಂದಾಗಿ ಶಾಲೆ ಬಂದ್ ಮಾಡುವ ನಿರ್ಧಾರವನ್ನ ಶಾಲಾ ಸಮಿತಿಗೆ ಬಿಡಲಾಗಿದೆ. ಅನಗತ್ಯ ಗೊಂದಲ ಸೃಷ್ಟಿಸಲಾಗುತ್ತಿದೆ. ಮಕ್ಕಳ ಶಿಕ್ಷಣದ ಬಗ್ಗೆ ಗಾಂಭೀರ್ಯತೆ ಇಲ್ಲದ ಸರ್ಕಾರ ಕತ್ತೆ ಕಾಯುತ್ತಿದೆಯಾ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ರಾಜ್ಯದಲ್ಲಿ ಗುಪ್ತಚರ ಇಲಾಖೆ ಏನು ಮಾಡುತ್ತಿದೆ. ಕೇಸರಿ ಶಾಲು ಹಂಚುತ್ತಿರುವುದು ಯಾರು? ರಾಷ್ಟ್ರ ಧ್ವಜದ ಸ್ಥಂಭದಲ್ಲಿ ಕೇಸರಿ ಧ್ಚಜ ಹಾರಿಸಿದ್ದು ಯಾರು? ಈ ಬಗ್ಗೆ ಮಾಹಿತಿ‌ ಇಲ್ಲವೇ? ಗೃಹ ಸಚಿವರು ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ವಿಫಲವಾಗಿದ್ದಾರೆ‌. ಗೃಹ ಇಲಾಖೆಯಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದೆ ಎಂದು ಅವರೇ ಹೇಳಿದ್ದಾರೆ. ಹೀಗಿರುವಾಗ ಕಾನೂನು ಸುವ್ಯವಸ್ಥೆ ಕುಸಿಯುತ್ತದೆ’ ಎಂದರು.

ADVERTISEMENT

‘ಕೇರಳ ಹೈಕೋರ್ಟ್ ಹಾಗೂ ಸುಪ್ರಿಂ ಕೋರ್ಟ್ ಧಾರ್ಮಿಕ ವಿಚಾರದ ಬಗ್ಗೆ ಸ್ಪಷ್ಟವಾಗಿ ತಿಳಿಸಿವೆ. ಕೈಬಳೆ, ಕುಂಕುಮ, ತಾಯತ, ಹಿಜಾಬ್‌ಗಳು ಹಾಗೂ ಸಿಖ್ಖರ ಪೇಟ ಆಯಾ ಧರ್ಮದ ಸಂಪ್ರದಾಯಗಳು ಎಂದು ಹೇಳಿವೆ. ಆದರೆ ಕೇಸರಿ‌ಶಾಲು ಏನು? ಇದು ಯಾವ ಧರ್ಮದ ಸಂಕೇತ?’ ಎಂದು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.