ADVERTISEMENT

ಸಂಘಟನೆಯ ಜೊತೆಗೆ ಹೋರಾಟವೂ ನಡೆಸಿ: ಡಿ.ಕೆ.ಶಿವಕುಮಾರ್

ಕಲಬುರ್ಗಿ ವಿಭಾಗ ಮಟ್ಟದ ಸಂಕಲ್ಪ ಸಮಾವೇಶಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಚಾಲನೆ

​ಪ್ರಜಾವಾಣಿ ವಾರ್ತೆ
Published 18 ಜನವರಿ 2021, 10:12 IST
Last Updated 18 ಜನವರಿ 2021, 10:12 IST
ಸಂಕಲ್ಪ ಸಮಾವೇಶದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್
ಸಂಕಲ್ಪ ಸಮಾವೇಶದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್   

ಕಲಬುರ್ಗಿ: ಕಾಂಗ್ರೆಸ್ ಪಕ್ಷವು 2021ನ್ನು ಸಂಘಟನೆ ಹಾಗೂ ಹೋರಾಟದ ವರ್ಷವನ್ನಾಗಿ ಪರಿಗಣಿಸಿದ್ದು, ಮುಂಬರುವ ವಿಧಾನಸಭಾ ಚುನಾವಣೆವರೆಗೂ ಪಕ್ಷವನ್ನು ತಳಮಟ್ಟದಿಂದ ಸಂಘಟಿಸಬೇಕು. ಜೊತೆಗೆ ಬಿಜೆಪಿ ನೇತೃತ್ವದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವೈಫಲ್ಯವನ್ನು ಜನರ ಮುಂದಿಡಲು ಹೋರಾಟ ರೂಪಿಸಬೇಕು ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕಾರ್ಯಕರ್ತರಿಗೆ ಸಲಹೆ ನೀಡಿದರು.

ನಗರದಲ್ಲಿ ಸೋಮವಾರ ಆಯೋಜಿಸಿದ್ದ ಪಕ್ಷದ ವಿಭಾಗ ಮಟ್ಟದ ಸಂಕಲ್ಪ ಸಮಾವೇಶಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಎರಡೂ ಸರ್ಕಾರಗಳು ಪ್ರಕೃತಿ ವಿಕೋಪ ಪರಿಹಾರ ನಿಧಿಯನ್ನು ಸರಿಯಾಗಿ ಜನರಿಗೆ ತಲುಪಿಸಿಲ್ಲ. ಆಟೊ ಚಾಲಕರಿಗೆ ಕೋವಿಡ್‌ ಸಂದರ್ಭದಲ್ಲಿ ತಲಾ ₹ 5 ಸಾವಿರ ನೀಡುವುದಾಗಿ ಸರ್ಕಾರ ಹೇಳಿತ್ತು. ತಮಗೆ ಇನ್ನೂ ಆ ಹಣ ಬಂದಿಲ್ಲ ಎಂದು ಆಟೊ ಚಾಲಕರಿಗೆ ಇತ್ತೀಚೆಗೆ ನನ್ನನ್ನು ಭೇಟಿ ಮಾಡಿ ಬೇಸರ ವ್ಯಕ್ತಪಡಿಸಿದರು. ಜನಗಳಿಗೆ ಯಾವ ನೆರವನ್ನೂ ನೀಡದ ಸರ್ಕಾರಗಳನ್ನು ಉರುಳಿಸಿ ಮತ್ತೆ ಕೇಂದ್ರ ಹಾಗೂ ರಾಜ್ಯದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವ ಸಂಕಲ್ಪ ಮಾಡಬೇಕಿದೆ ಎಂದರು.

ಎಲ್ಲರೂ ಕಾರ್ಯಕರ್ತರೇ: ‘ಪಕ್ಷದ ಎಲ್ಲ ಹಂತಗಳಲ್ಲಿರುವ ಎಲ್ಲರೂ ಕಾರ್ಯಕರ್ತರು. ಎಲ್ಲರೂ ನಾಯಕರು. ಪ್ರತಿ ಬಾರಿ ಕಾಂಗ್ರೆಸ್ ಕಾರ್ಯಕ್ರಮಗಳು ನಡೆದ ಸಂದರ್ಭದಲ್ಲಿ ವೇದಿಕೆಯ ಮೇಲೆ ಹತ್ತಲು ಸಾಕಷ್ಟು ಪೈಪೋಟಿ ಕಾಣಿಸಿಕೊಳ್ಳುತ್ತಿತ್ತು. ಹಳ್ಳಿಗಳಲ್ಲಿ ಜನರನ್ನು ಸಂಘಟಿಸಿದವರು ಕೆಳಗೆ ಕುಳಿತಿದ್ದರೆ ಯಾವ ಶ್ರಮವನ್ನೂ ಹಾಕದೇ ಕಾರ್ಯಕ್ರಮ ನಡೆಯುವ ಸಂದರ್ಭದಲ್ಲಿ ಮಾತ್ರ ವೇದಿಕೆಗೆ ಬರುವವರೂ ಇದ್ದಾರೆ. ಇವರನ್ನು ತಡೆಗಟ್ಟಲು ಹಾಗೂ ವೇದಿಕೆ ಮೇಲೆ ಏರುವ ರೂಢಿಯನ್ನು ತಪ್ಪಿಸಲು ಮೊದಲ ಬಾರಿಗೆ ಯಾರನ್ನೂ ವೇದಿಕೆಯ ಮೇಲೆ ಕರೆಯುತ್ತಿಲ್ಲ. ಬದಲಾಗಿ ಯಾರು ಮಾತನಾಡುವವರು ಇದ್ದಾರೋ ಅವರು ಮಾತ್ರ ವೇದಿಕೆಯ ಮೇಲೆ ತೆರಳಿ ತಮ್ಮ ಮಾತು ಮುಗಿದ ಬಳಿಕ ಕೆಳಗೆ ಬರಬೇಕು. ‍ಪಕ್ಷದ ರಾಷ್ಟ್ರೀಯ ಮುಖಂಡರು ಹಾಗೂ ರಾಜ್ಯದ 50 ಪ್ರಮುಖ ಮುಖಂಡರೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ಈ ತೀರ್ಮಾನವನ್ನು ಕೈಗೊಂಡಿದ್ದೇನೆ’ ಎಂದು ಹೇಳಿದರು.

ADVERTISEMENT

ಹಲವು ಸಮಿತಿಗಳಲ್ಲಿ ಇರುವಂತಿಲ್ಲ: ಬ್ಲಾಕ್ ಕಾಂಗ್ರೆಸ್, ಜಿಲ್ಲಾ ಕಾಂಗ್ರೆಸ್ ಅಥವಾ ರಾಜ್ಯ ಕಾಂಗ್ರೆಸ್‌ನ ವಿವಿಧ ಸಮಿತಿಗಳಲ್ಲಿ ಒಬ್ಬ ಮುಖಂಡರು ಎರಡು ಮೂರು ಸಮಿತಿಗಳಲ್ಲಿ ಇರುವಂತಿಲ್ಲ. ಒಬ್ಬರಿಗೆ ಒಂದು ಸ್ಥಾನವನ್ನು ಮಾತ್ರ ನೀಡಲಾಗುವುದು. ಇದರಿಂದ ಪಕ್ಷಕ್ಕಾಗಿ ಕೆಲಸ ಮಾಡಿದವರಿಗೆ ಪ್ರಾತಿನಿಧ್ಯ ನೀಡಿದಂತಾಗುತ್ತದೆ ಎಂದು ಹೇಳಿದರು.

ಜಾರಕಿಹೊಳಿ ನೇತೃತ್ವದಲ್ಲಿ ತರಬೇತಿ: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ನೇತೃತ್ವದಲ್ಲಿ ಮುಂಬರುವ ಜಿಲ್ಲಾ ಪಂಚಾಯಿತಿ ಹಾಗೂ ವಿಧಾನಸಭಾ ಚುನವಣೆಗಳಿಗೆ ಸ್ಪರ್ಧಿಸುವವರಿಗೆ ತರಬೇತಿ ಕೊಡಿಸಲಾಗುತ್ತದೆ. ಬಹುತೇಕರಿಗೆ ಸೂಕ್ತ ತರಬೇತಿ ಇಲ್ಲ. ಆದ್ದರಿಂದ ಹಂತ ಹಂತವಾಗಿ ತರಬೇತಿ ನಡೆಯಲಿದೆ ಎಂದರು.

ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಈಶ್ವರ ಖಂಡ್ರೆ, ಸತೀಶ ಜಾರಕಿಹೊಳಿ, ರಾಜ್ಯಸಭಾ ಸದಸ್ಯ ನಾಸಿರ್ ಹುಸೇನ್, ಶಾಸಕರಾದ ಪ್ರಿಯಾಂಕ್ ಖರ್ಗೆ, ಎಂ.ವೈ. ಪಾಟೀಲ, ಶರಣಬಸಪ್ಪ ದರ್ಶನಾಪೂರ, ಖನೀಜ್ ಫಾತಿಮಾ, ರಾಘವೇಂದ್ರ ಹಿಟ್ನಾಳ, ವಿಧಾನ‍ರಿಷತ್ ಸದಸ್ಯ ಅರವಿಂದ ಅರಳಿ, ಮಾಜಿ ಸಚಿವ ಬಸವರಾಜ ರಾಯರಡ್ಡಿ, ಮಾಜಿ ಸಂಸದರಾದ ವಿ.ಎಸ್. ಉಗ್ರಪ್ಪ, ಕೆ.ಬಿ.ಶಾಣಪ್ಪ, ಮಾಜಿ ಶಾಸಕರಾದ ವಿ.ಎಸ್. ಸುದರ್ಶನ್, ಬಿ.ಆರ್. ಪಾಟೀಲ, ವಿಧಾನಪರಿಷತ್ ಮಾಜಿ ಸದಸ್ಯ ತಿಪ್ಪಣ್ಣಪ್ಪ ಕಮಕನೂರ, ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾ ಅಮರನಾಥ್ ಇತರರು ಇದ್ದರು.

ಇದಕ್ಕೂ ಮುನ್ನ ಸಭಾಂಗಣದ ಹೊರಭಾಗದಲ್ಲಿ ಕಾಂಗ್ರೆಸ್ ಸೇವಾದಳದಿಂದ ಆಯೋಜಿಸಿದ್ದ ಪ್ರಾರ್ಥನೆಯಲ್ಲಿ ಭಾಗವಹಿಸಿ ಕಾಂಗ್ರೆಸ್ ಧ್ವಜಾರೋಹಣವನ್ನು ಡಿ.ಕೆ.ಶಿವಕುಮಾರ್ ನೆರವೇರಿಸಿದರು.

ಬಳ್ಳಾರಿ, ಕೊಪ್ಪಳ, ರಾಯಚೂರು, ಯಾದಗಿರಿ, ಕಲಬುರ್ಗಿ, ಬೀದರ್ ಜಿಲ್ಲೆಗಳ ಕಾಂಗ್ರೆಸ್ ಶಾಸಕರು, ಕೆಪಿಸಿಸಿ ಸದಸ್ಯರು, ಜಿಲ್ಲಾ ಅಧ್ಯಕ್ಷರು, ವಿವಿಧ ಬ್ಲಾಕ್‌ಗಳ ಅಧ್ಯಕ್ಷರು, ಮಹಿಳಾ ಕಾಂಗ್ರೆಸ್‌, ಯುವ ಕಾಂಗ್ರೆಸ್‌ ಸೇರಿದಂತೆ ಪಕ್ಷದ ವಿವಿಧ ಘಟಕಗಳ ಅಧ್ಯಕ್ಷರು ಭಾಗವಹಿಸಿದ್ದರು.

ವಿರೋಧ ಪಕ್ಷದ ಮುಖ್ಯ ಸಚೇತಕ, ಜೇವರ್ಗಿ ಶಾಸಕ ಡಾ. ಅಜಯ್ ಸಿಂಗ್ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.