ಪ್ರಾತಿನಿಧಿಕ ಚಿತ್ರ
– ಪ್ರಜಾವಾಣಿ ಚಿತ್ರ
ಕಲಬುರಗಿ: ‘ಸಚಿವ ಪ್ರಿಯಾಂಕ್ ಖರ್ಗೆ ತೇಜೋವಧೆ, ಸಾರ್ವಜನಿಕವಾಗಿ ನಿಂದಿಸುತ್ತಿರುವ ಆರ್‌ಎಸ್‌ಎಸ್ ಹಾಗೂ ಅದರ ಅಂಗ ಸಂಸ್ಥೆಗಳ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು’ ಎಂದು ಆಗ್ರಹಿಸಿ ದಲಿತ ಸೇನೆ ಜಿಲ್ಲಾ ಘಟಕದಿಂದ ಶುಕ್ರವಾರ ಇಲ್ಲಿ ಪ್ರತಿಭಟಿಸಲಾಯಿತು.
ನಗರದ ಜಗತ್ ವೃತ್ತದಲ್ಲಿ ಜಮಾಯಿಸಿದ ದಲಿತ ಸೇನೆಯ ಮುಖಂಡರು ಹಾಗೂ ನೂರಾರು ಕಾರ್ಯಕರ್ತರು, ಜಿಲ್ಲಾಧಿಕಾರಿ ಕಚೇರಿ ತನಕ ಪ್ರತಿಭಟನಾ ಮೆರವಣಿಗೆ ನಡೆಸಿದರು. ಕೈಯಲ್ಲಿ ನೀಲಿ ಬಾವುಟ, ಸಂವಿಧಾನ ಪೀಠಿಕೆ, ಡಾ.ಅಂಬೇಡ್ಕರ್ ಚಿತ್ರ, ಸುಪ್ರೀಂಕೋರ್ಟ್ ಸಿಜೆ ಬಿ.ಆರ್.ಗವಾಯಿ, ಸಚಿವ ಪ್ರಿಯಾಂಕ್ ಖರ್ಗೆ ಚಿತ್ರ ಹಿಡಿದು ಸಾಗಿದರು.
ದಲಿತ ಸೇನೆ ಮುಖಂಡ ಹನುಮಂತ ಯಳಸಂಗಿ ಮಾತನಾಡಿ, ‘ಆರ್‌ಎಸ್ಎಸ್ ಸಂವಿಧಾನ ಮತ್ತು ಡಾ.ಅಂಬೇಡ್ಕರ್ ರನ್ನು ಒಪ್ಪಿಲ್ಲ. ಅದನ್ನು ನಿಷೇಧಿಸಬೇಕು’ ಎಂದು ಆಗ್ರಹಿಸಿದರು.
ಮತ್ತೊಂದೆಡೆ, ಚಿತ್ತಾಪುರದಲ್ಲಿ ನ.2ರಂದು ಪ್ರತಿಭಟಿಸಲು ಅವಕಾಶ ನೀಡುವಂತೆ ಕೋರಿ ರಾಜ್ಯ ಕೋಲಿ ಕಬ್ಬಲಿಗ ಎಸ್ಟಿ ಹೋರಾಟ ಸಮಿತಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದೆ.
‘ಕೋಲಿ, ಕಬ್ಬಲಿಗ, ಅಂಬಿಗ, ಬೆಸ್ತ ಸಮುದಾಯಗಳನ್ನು ಎಸ್ಟಿ ಪಟ್ಟಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸು ಮಾಡುವಂತೆ ಹಾಗೂ 2019ರ ಚುನಾವಣೆ ಸಂದರ್ಭದಲ್ಲಿ ‘ನಾನು ಕೋಲಿ ಸಮುದಾಯವನ್ನು ನೆನಪು ಇಟ್ಟುಕೊಳ್ಳುವೆ’ ಎಂದಿದ್ದ ಪ್ರಧಾನಿ ನರೇಂದ್ರ ಮೋದಿ ಬಳಿಕ ಮರೆತಿರುವುದನ್ನು ಖಂಡಿಸಿ ನ.2ರಂದು ಚಿತ್ತಾಪುರದಲ್ಲಿ ಪ್ರತಿಭಟನೆ ನಡೆಸಲು ಅನುಮತಿ ನೀಡಿ ಪೊಲೀಸ್ ಭದ್ರತೆ ಒದಗಿಸಬೇಕು’ ಎಂದು ಮನವಿಯಲ್ಲಿ ಕೋರಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.