ADVERTISEMENT

ಕಲಬುರಗಿ–ಯಾದಗಿರಿ ಡಿಸಿಸಿ ಬ್ಯಾಂಕ್: 9 ಸ್ಥಾನಗಳಿಗೆ ಇಂದು ಚುನಾವಣೆ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2025, 8:12 IST
Last Updated 9 ನವೆಂಬರ್ 2025, 8:12 IST
ಡಿಸಿಸಿ ಬ್ಯಾಂಕ್ ಪ್ರಧಾನ ಕಚೇರಿ
ಡಿಸಿಸಿ ಬ್ಯಾಂಕ್ ಪ್ರಧಾನ ಕಚೇರಿ   

ಕಲಬುರಗಿ: ತೀವ್ರ ಕುತೂಹಲ ಕೆರಳಿಸಿರುವ ಕಲಬುರಗಿ–ಯಾದಗಿರಿ ಜಿಲ್ಲಾ ಸಹಕಾರಿ ಕೇಂದ್ರ ಬ್ಯಾಂಕ್‌ನ 9 ನಿರ್ದೇಶಕರ ಸ್ಥಾನಗಳಿಗೆ ಇದೇ 8ರಂದು ಚುನಾವಣೆ ನಡೆಯಲಿದೆ. 13 ಸ್ಥಾನಗಳ ಪೈಕಿ ಈಗಾಗಲೇ ನಾಲ್ಕು ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದ್ದು, ಉಳಿದ ಸ್ಥಾನಗಳಿಗೆ 18 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಅವಿರೋಧವಾಗಿ ಆಯ್ಕೆಯಾದವರು: ಬ್ಯಾಂಕ್‌ನ ಹಾಲಿ ಅಧ್ಯಕ್ಷ ಸೋಮಶೇಖರ ಗೋನಾಯಕ ಪಟ್ಟಣ ಸಹಕಾರ ಕ್ಷೇತ್ರದಿಂದ, ಶಹಾಪುರ ತಾಲ್ಲೂಕಿನಿಂದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಕ್ಷೇತ್ರದಿಂದ ಗುರುನಾಥ ರೆಡ್ಡಿ ಪರ್ವತರೆಡ್ಡಿ, ಯಾದಗಿರಿ ತಾಲ್ಲೂಕಿನಿಂದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಕ್ಷೇತ್ರದಿಂದ ಬ್ಯಾಂಕ್‌ನ ಹಾಲಿ ನಿರ್ದೇಶಕ ಸಿದ್ರಾಮರೆಡ್ಡಿ ಮಲ್ಲಿಕಾರ್ಜುನ ರೆಡ್ಡಿ ಕೌಳುರ ಹಾಗೂ ಟಿಎಪಿಸಿಎಂ ಕ್ಷೇತ್ರದಿಂದ ಯಾದಗಿರಿಯ ಬಸವರಾಜ ಸಂಗನಗೌಡ ಪಾಟೀಲ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಳಿದಂತೆ 9 ಕ್ಷೇತ್ರದಲ್ಲಿ ತಲಾ ಕ್ಷೇತ್ರದಲ್ಲಿ ಇಬ್ಬರು ಮಾತ್ರ ಎದುರಾಳಿಯಾಗಿ ಕಣದಲ್ಲಿ ಉಳಿದಿದ್ದಾರೆ.

ಕಣದಲ್ಲಿ ಉಳಿದವರು: ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಚಿತ್ತಾಪುರ ಕ್ಷೇತ್ರದಿಂದ ದಲಿತ ಮುಖಂಡ ಸುನೀಲಕುಮಾರ ವಿಠಲ ದೊಡ್ಡಮನಿ ನಾಮಪತ್ರ ಸಲ್ಲಿಸಿ ಕಣದಲ್ಲಿ ಉಳಿದು ಪ್ರತಿಷ್ಠೆ ಪಣಕ್ಕಿಟ್ಟಿದ್ದಾರೆ. ಇದೇ ಚಿತ್ತಾಪುರ ಕ್ಷೇತ್ರದಿಂದ ಹೆಬ್ಬಾಳ ಪಿಕೆಪಿಎಸ್‌ದಿಂದ ಸಿದ್ದಪ್ಪಗೌಡ ಪಾಟೀಲ ಪ್ರತಿಸ್ಪರ್ಧಿಯಾಗಿದ್ದಾರೆ.‌ ಅಫಜಲಪುರ ಪಿಕೆಪಿಎಸ್ ಕ್ಷೇತ್ರದಿಂದ ಅಜಯ ಬಸವರಾಜ ಪಾಟೀಲ ಹಾಗೂ ಪ್ರತಿಸ್ಪರ್ಧಿಯಾಗಿ ಕರಜಗಿ ಪಿಕೆಪಿಎಸ್ ರಾಜಕುಮಾರ ಅಪ್ಪಾರಾವ ಜಿಡಗಿ ಕಣದಲ್ಲಿದ್ದಾರೆ.

ADVERTISEMENT

ಅಳಂದ ಪಿಕೆಪಿಎಸ್ ಕ್ಷೇತ್ರದಿಂದ ಹಾಲಿ ನಿರ್ದೇಶಕ ಅಶೋಕ ಸಾವಳೇಶ್ವರ ಹಾಗೂ ಮಾಜಿ ನಿರ್ದೇಶಕ ಕಡಗಂಚಿಯ ಚಂದ್ರಶೇಖರ ಭೂಸನೂರ ಕಣದಲ್ಲಿ ಇದ್ದಾರೆ. ಚಿಂಚೋಳಿ ಕ್ಷೇತ್ರದಿಂದ ಗೌತಮ ಪಾಟೀಲ್ ಹಾಗೂ ಶೈಲೇಶಕುಮಾರ ಪ್ರಭುಲಿಂಗ ಪ್ರತಿಸ್ಪರ್ಧಿ ಯಾಗಿದ್ದಾರೆ. ಜೇವರ್ಗಿ ತಾಲ್ಲೂಕಿನಿಂದ ಬ್ಯಾಂಕ್‌ನ ಮಾಜಿ ಅಧ್ಯಕ್ಷ ಕೇದಾರಲಿಂಗಯ್ಯ ಹಿರೇಮಠ ಹಾಗೂ ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ಸಹೋದರ ಬಸವರಾಜ ಪಾಟೀಲ ನರಿಬೋಳ ಕಣದಲ್ಲಿದ್ದಾರೆ. ಕಲಬುರಗಿ ತಾಲ್ಲೂಕಿನಿಂದ ಕಲ್ಯಾಣರಾವ ಮೂಲಗೆ ಕುಮಸಿ ಹಾಗೂ ಶರಣಬಸಪ್ಪ ಪಾಟೀಲ ಅಷ್ಠಗಾ, ಸೇಡಂ ಕ್ಷೇತ್ರದಿಂದ ಶಂಕರ ಭೂಪಾಲ ಚಂದ್ರಶೇಖರ ಹಾಗೂ ನಾಗೇಂದ್ರಪ್ಪ ರಾಮಶೆಟ್ಟಿ, ಸುರಪುರ ಕ್ಷೇತ್ರದಿಂದ ವಿಠ್ಠಲ ಯಾದವ್ ಹಾಗೂ ಶಾಂತರೆಡ್ಡಿ ಚೌಧರಿ ಹಾಗೂ ಇತರೆ ಸಹಕಾರ ಕ್ಷೇತ್ರದ ಡಿ ಕ್ಷೇತ್ರದಿಂದ ಬ್ಯಾಂಕ್ ಹಾಲಿ ಉಪಾಧ್ಯಕ್ಷ ಸುರೇಶ ಸಜ್ಜನ ಹಾಗೂ ಜ್ಯೋತಿ ಮರಗೋಳ ಕಣದಲ್ಲಿ ಉಳಿದಿದ್ದಾರೆ ಎಂದು ಚುನಾವಣಾಧಿಕಾರಿ ಪ್ರಕಾಶ ಕುದರಿ ತಿಳಿಸಿದ್ದಾರೆ.

ಮೊಬೈಲ್ ನಿಷೇಧ

ಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿ ನಿರ್ದೇಶಕರ ಸಾರ್ವತ್ರಿಕ ಚುನಾವಣೆಯ ಮತದಾನವು ಇದೇ ನವೆಂಬರ್ 9ರಂದು ಬೆಳಿಗ್ಗೆ 9 ಗಂಟೆಯಿಂದ ಸಾಯಂಕಾಲ 4 ಗಂಟೆಯವರೆಗೆ ಬ್ಯಾಂಕಿನ ಅವರಣದಲ್ಲಿ ಜರುಗಲಿದ್ದು ಮತದಾನ ಮಾಡಲು ಬರುವ ಮತದಾರರು ಮತ್ತು ಚುನಾವಣೆಗೆ ಸ್ಪರ್ಧಿಸಿದ ಅಭ್ಯರ್ಥಿಗಳು ಹಾಗೂ ಚುನಾವಣಾ ಏಜೆಂಟ್‌ಗಳು ಮೊಬೈಲ್ ಪೆನ್ ಹಾಗೂ ಚುನಾವಣೆಯಲ್ಲಿ ನಿಷೇಧಿಸಿದ ಯಾವುದೇ ಸಾಮಗ್ರಿಗಳನ್ನು ಮತದಾನ ನಡೆಯುವ ಸ್ಥಳದಿಂದ 100 ಮೀಟರ್ ವ್ಯಾಪ್ತಿಯಲ್ಲಿ ತರುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಚುನಾವಣಾಧಿಕಾರಿ ಪ್ರಕಾಶ ಕುದರಿ ತಿಳಿಸಿದ್ದಾರೆ. ಮತದಾನದ‌ ನಂತರ ಬ್ಯಾಂಕಿನ ಅವರಣದಲ್ಲಿಯೇ ಮತ ಎಣಿಕೆ‌ ಕಾರ್ಯ ನಡೆಯಲಿದೆ‌ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.