ADVERTISEMENT

ಕಲಬುರಗಿ– BJP ಸದಸ್ಯನಿಂದ ಮುಸ್ಲಿಂ ಮಹಿಳೆಯರ ಅವಹೇಳನ: ಕಾಂಗ್ರೆಸ್ ಸದಸ್ಯ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2023, 11:05 IST
Last Updated 29 ಡಿಸೆಂಬರ್ 2023, 11:05 IST
   

ಕಲಬುರಗಿ: ಇಲ್ಲಿ ಶುಕ್ರವಾರ ನಡೆದ ಸಾಮಾನ್ಯ ಸಭೆಯಲ್ಲಿ ಬಿಜೆಪಿ ಸದಸ್ಯ ಕೃಷ್ಣಾ ನಾಯಕ ಮುಸ್ಲಿಂ ಮಹಿಳೆಯರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದರು ಎಂದು ಆರೋಪಿಸಿದ ಕಾಂಗ್ರೆಸ್ ಸದಸ್ಯ ಅಯೂಬ್ ತಬ್ಬುಖಾನ್ ಕುರ್ಚಿಯನ್ನು ಎತ್ತಿಹಾಕಿ ಆಕ್ರೋಶ ವ್ಯಕ್ತಪಡಿಸಿದರು.

ತಮ್ಮ ಸೇವೆಯನ್ನು ಕಾಯಂಗೊಳಿಸಬೇಕು ಎಂದು ಒತ್ತಾಯಿಸಿ ಪೌರಕಾರ್ಮಿಕರು ಹಲವು ದಿನಗಳಿಂದ ಪ್ರತಿಭಟನೆ ನಡೆಸುತ್ತಿರುವ ಕುರಿತು ಚರ್ಚೆಗೆ ಕೈಗೆತ್ತಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಕಾಂಗ್ರೆಸ್ ಸದಸ್ಯ ಸಯ್ಯದ್ ಅಹ್ಮದ್ ಅವರು 967 ಪೌರಕಾರ್ಮಿಕರನ್ನು ನೇಮಕ ಮಾಡುವ ಬಗ್ಗೆ ಚರ್ಚೆ ನಡೆಯುತ್ತಿದೆ. ಆದರೆ ಒಟ್ಟಾರೆ 1041 ಕಾರ್ಮಿಕರು ‌ಕೆಲಸ ಮಾಡುತ್ತಿದ್ದು, ಎಲ್ಲರನ್ನೂ ಕಾಯಂ ಮಾಡಬೇಕು ಎಂದರು.

ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಬಿಜೆಪಿಯ ಕೃಷ್ಣಾ ನಾಯಕ, ದಲಿತರು, ಬಂಜಾರ ಸಮುದಾಯದ ಮಹಿಳೆಯರು ಕಸ ಗುಡಿಸುವುದನ್ನು ಕಂಡಿದ್ದೇವೆ. ಆದರೆ, ಬುರ್ಖಾ ಹಾಕಿಕೊಂಡ ಮಹಿಳೆಯರು ಕಸ ಗುಡಿಸುವುದನ್ನು ನೋಡಿದ್ದೀರಾ ಎಂದರು.

ADVERTISEMENT

ಇದರಿಂದ ಕೆರಳಿದ ಕಾಂಗ್ರೆಸ್‌ನ ಅಯೂಬ್ ತಬ್ಬುಖಾನ್ ಕುರ್ಚಿ ಎತ್ತಿ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.

ಪಾಲಿಕೆಯ ವಿರೋಧ ಪಕ್ಷದ ನಾಯಕ ಅಜ್ಮಲ್ ಗೋಲಾ ಮೇಯರ್ ವಿಶಾಲ ದರ್ಗಿ ಅವರ ಎದುರಿನ ಮೇಜಿನ ಮೇಲೆ ಹತ್ತಿ ಕುಳಿತು ಪ್ರತಿಭಟನೆ ನಡೆಸಿದರು.

ಕೃಷ್ಣಾ ನಾಯಕ ಕ್ಷಮೆ ಕೋರಬೇಕು ಎಂದು ಪಟ್ಟು ಹಿಡಿದು ಘೋಷಣೆ ಕೂಗಿದರು. ಘಟನೆಯಿಂದ ಗೊಂದಲಕ್ಕೊಳಗಾದ ಮೇಯರ್ ವಿಶಾಲ ದರ್ಗಿ ಅವರು ಸಭೆಯನ್ನು ಕೆಲ ಕಾಲ ಮುಂದೂಡಿದರು.

ತಮ್ಮ ಕಚೇರಿಯಲ್ಲಿ ಎರಡೂ ಪಕ್ಷಗಳ ಮುಖಂಡರನ್ನು ಕರೆಸಿಕೊಂಡ ಮೇಯರ್ ಸಂಧಾನ ಸಭೆ ನಡೆಸಿದರು.

ಮರಳಿ ಸಭೆ ಆರಂಭವಾದಾಗ ಕೃಷ್ಣಾ ನಾಯಕ ಅವರನ್ನು ಕರೆಸಿದ ಮೇಯರ್ ಕ್ಷಮೆ ಕೇಳುವಂತೆ ಸೂಚಿಸಿದರು. ಮೇಯರ್ ಸೂಚನೆಯಂತೆ ಕ್ಷಮೆ ಕೋರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.