ADVERTISEMENT

ಕಲಬುರಗಿ: ಹೆಚ್ಚುತ್ತಿರುವ ತಾಪಮಾನ, ಏರ್‌ ಕೂಲರ್‌ಗೆ ಹೆಚ್ಚಿದ ಬೇಡಿಕೆ

ಓಂಕಾರ ಬಿರಾದಾರ
Published 9 ಏಪ್ರಿಲ್ 2023, 19:30 IST
Last Updated 9 ಏಪ್ರಿಲ್ 2023, 19:30 IST
ಕಲಬುರಗಿಯ ಸೂಪರ್‌ ಮಾರುಕಟ್ಟೆಯಲ್ಲಿ ಅಂಗಡಿಯೊಂದರಲ್ಲಿ ಏರ್‌ ಕೂಲರ್‌ ಮಾರಾಟಕ್ಕೆ ಇಟ್ಟಿರುವುದು
ಕಲಬುರಗಿಯ ಸೂಪರ್‌ ಮಾರುಕಟ್ಟೆಯಲ್ಲಿ ಅಂಗಡಿಯೊಂದರಲ್ಲಿ ಏರ್‌ ಕೂಲರ್‌ ಮಾರಾಟಕ್ಕೆ ಇಟ್ಟಿರುವುದು   

ಕಲಬುರಗಿ: ಬೆಳಿಗ್ಗೆಯಾದರೆ ಸಾಕು ನೆತ್ತಿ ಸುಡುವ ಬಿಸಿಲು, 40 ಡಿಗ್ರಿ ಸೆಲ್ಸಿಯಸ್‌ ತಾಪಮಾನ, ಬಿಸಿಲಿನ ಪ್ರಖರತೆ ತಾಳಲಾರದೇ ಬಸವಳಿದ ಜನರು ಧಗೆಯನ್ನು ತಡೆಯಲು ಹವಾನಿಯಂತ್ರಿತ (ಏರ್‌ ಕೂಲರ್‌) ಯಂತ್ರಗಳಿಗೆ ಮೊರೆ ಹೋಗುತ್ತಿದ್ದಾರೆ. ಇದರಿಂದ ಬಿಸಿಲು ಹೆಚ್ಚಾದಂತೆ ಏರ್‌ಕೂಲರ್‌ಗಳಿಗೂ ಬೇಡಿಕೆ ಹೆಚ್ಚಾಗುತ್ತಿದೆ.

ನಗರದ ಮುಖ್ಯರಸ್ತೆಯ ಎಲೆಕ್ಟ್ರಾನಿಕ್‌ ಅಂಗಡಿಗಳು, ಸೂಪರ್‌ ಮಾರುಕಟ್ಟೆ, ಕೆಲವು ಸಣ್ಣ ಎಲೆಕ್ಟ್ರಾನಿಕ್‌ ವಸ್ತುಗಳ ದುರಸ್ತಿ ಅಂಗಡಿಗಳಲ್ಲಿ ಸಹ ಏರ್‌ ಕೂಲರ್‌ಗಳ ಮಾರಾಟ ಹಾಗೂ ಅವುಗಳ ದುರಸ್ತಿ ವಹಿವಾಟು ಕೂಡ ಹೆಚ್ಚಳವಾಗಿದೆ.

ಪ್ರತಿಷ್ಠಿತ ಕಂಪನಿಯ ಹೆಸರಿನಲ್ಲಿ ಮಾರಾಟ ಮಾಡುವ ಏರ್‌ ಕೂಲರ್‌ಗಳ ಬೆಲೆ ಭಾರಿ ಏರಿಕೆಯಾಗಿದೆ. 15 ಲೀಟರ್‌ನಿಂದ ಪ್ರಾರಂಭವಾಗಿ 55 ಲೀಟರ್‌ ಸಾಮರ್ಥ್ಯದ ಏರ್‌ ಕೂಲರ್‌ಗಳು ಮಾರಾಟವಾಗುತ್ತಿದ್ದು, 15 ಲೀಟರ್‌ ಸಾಮರ್ಥ್ಯದ
ಕೂಲರ್‌ಗೆ ₹4,500, 25 ಲೀಟರ್‌ ಸಾಮರ್ಥ್ಯದ ಕೂಲರ್‌ಗೆ ₹5,500, 35 ಲೀಟರ್‌ ಕೂಲರ್‌ಗೆ ₹ 7,500, 50 ಲೀಟರ್‌ ₹ 12 ಸಾವಿರ, 55 ಲೀಟರ್‌ ಕೂಲರ್‌ಗೆ ₹14 ಸಾವಿರದವರೆಗೆ ದರ ಇದೆ.

ADVERTISEMENT

ತಿಂಗಳ ಹಿಂದೆ ಮಾರುಕಟ್ಟೆಯಲ್ಲಿ ಏರ್‌ ಕೂಲರ್‌ಗಳ ಬೆಲೆ ಕಡಿಮೆ ಇತ್ತು. ಆದರೆ ಈಗ ಝಳ ಹೆಚ್ಚಳದಿಂದ ಬೇಡಿಕೆಯೂ ಸಹ ಹೆಚ್ಚಿದೆ. ಸಾಮಾನ್ಯ ಕೂಲರ್‌ಗಳ ಬೆಲೆ ಮೊದಲು ₹3,500 ಪ್ರಾರಂಭವಾಗಿ 8 ಸಾವಿರದವರೆಗೆ ಇತ್ತು. ಆದರೀಗ ಬಿಸಿಲು ಬಿಸಿಲು ಹೆಚ್ಚಾಗುತ್ತಿದ್ದು, ₹4,000ದಿಂದ ₹10,000 ದವರೆಗೂ ಏರ್‌ ಕೂಲರ್‌ಗಳ ದರ ಹೆಚ್ಚಳವಾಗಿದೆ.

‘ಇನ್ನೂ ಕೆಲವು ಅಂಗಡಿಗಳಲ್ಲಿ ಹೈದರಾಬಾದ್‌ ಮೂಲಕ ಕಚ್ಚಾ ವಸ್ತುಗಳನ್ನು ತಂದು ಇಲ್ಲಿಯೇ ಎಲೆಕ್ಟ್ರಾನಿಕ್‌ ಅಂಗಡಿಗಳಲ್ಲಿ ಏರ್‌ ಕೂಲರ್‌ಗಳನ್ನು ತಯಾರಿಸಿ, ಮಾರಾಟ ಮಾಡಲಾಗುತ್ತಿದೆ. ಈ ಕೂಲರ್‌ಗಳ ಬೆಲೆ ಪ್ರತಿಷ್ಠಿತ ಕಂಪನಿಗಳ ಬೆಲೆಯ ಯಂತ್ರಗಳಿಗಿಂತ ಸ್ವಲ್ಪ ಕಡಿಮೆ ಇದೆ. ಹೀಗಾಗಿ ಜನರು ಇವುಗಳ ಖರೀದಿಗೆ ಹೆಚ್ಚಿನ ಒಲವು ತೋರುತ್ತಿದ್ದಾರೆ’ ಎಂದು ವ್ಯಾಪಾರಿ ರಮೇಶ್‌ ಪವಾರ ತಿಳಿಸಿದರು.

‘ಕಚ್ಚಾ ವಸ್ತುಗಳಾದ ಮೋಟರ್‌, ಫ್ಯಾನ್‌, ಪೈ‍ಪ್‌ ಅಳವಡಿಕೆ ಕವರ್‌ಗಳನ್ನು ತಂದು ಇಲ್ಲಿಯೇ ತಯಾರು ಮಾಡುತ್ತೇವೆ. ಈ ಯಂತ್ರಗಳಿಗೆ ಗ್ಯಾರಂಟಿ, ವಾರಂಟಿ ಯಾವುದು ಇರಲ್ಲ. ಆದರೆ, ಯಂತ್ರಗಳು ದುರಸ್ತಿ ಬಂದಾಗೆಲ್ಲಾ ಗ್ರಾಹಕರು ನಮ್ಮಲ್ಲಿಯೇ ಬಂದು ಸರಿಮಾಡಿಸಿಕೊಂಡು ಹೋಗುತ್ತಾರೆ’ ಎಂದು ಅವರು ಹೇಳಿದರು.

ಬೇಸಿಗೆ ಹೆಚ್ಚಿದಂತೆ ಏರ್‌ಕೂಲರ್‌ನ ಬಿಡಿಭಾಗಗಳ ದರವೂ ಹೆಚ್ಚಾಗಿದೆ. ಅಧಿಕ ಹಣ ನೀಡಿ ಖರೀದಿ ಮಾಡುವ ಸಾಮರ್ಥ್ಯ ಇರುವ ಗ್ರಾಹಕರು ಉತ್ತಮ ಕಂಪನಿಗಳ ಏರ್‌ಕೂಲರ್ ಖರೀದಿಸಿದರೆ, ಹಣ ಕಡಿಮೆ ಇದ್ದವರು, 6 ತಿಂಗಳಿಗಾದರೂ ಬಾಳಿಕೆ ಬಂದರೆ ಸಾಕು ಎನ್ನುವವರು ಕಡಿಮೆ ಬೆಲೆಯ ಯಂತ್ರಗಳ ಖರೀದಿಗೆ ಮುಂದಾಗುತ್ತಿರುವುದು ಸಾಮಾನ್ಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.