ADVERTISEMENT

ಅರಣ್ಯ ಕಾಲೇಜು, ಸ್ನಾತಕೋತ್ತರ ಕೇಂದ್ರ ಮಂಜೂರಿಗೆ ಒತ್ತಾಯ

ಚಿಂಚೋಳಿಯ ಜ್ವಲಂತ ಸಮಸ್ಯೆಗಳು ಪ್ರಸ್ತಾಪಿಸಿದ ಶಾಸಕ ಡಾ.ಅವಿನಾಶ ಜಾಧವ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2025, 7:13 IST
Last Updated 17 ಡಿಸೆಂಬರ್ 2025, 7:13 IST
ಡಾ. ಅವಿನಾಶ ಜಾಧವ
ಡಾ. ಅವಿನಾಶ ಜಾಧವ   

ಚಿಂಚೋಳಿ: ಚಿಂಚೋಳಿ ವಿಧಾನಸಭಾ ಮತಕ್ಷೇತ್ರದ ಜ್ವಲಂತ ಸಮಸ್ಯೆಗಳನ್ನು ಬೆಳಗಾವಿ ಅಧಿವೇಶನದಲ್ಲಿ ಪ್ರಸ್ತಾವಪಿಸುವ ಮೂಲಕ ಶಾಸಕ ಡಾ.ಅವಿನಾಶ ಜಾಧವ ಅವರು ಸರ್ಕಾರದ ಗಮನ ಸೆಳೆದಿದ್ದಾರೆ.

ಮಂಗಳವಾರ ಕ್ಷೇತ್ರದ ಸಮಸ್ಯೆಗಳು ಜನರ ನಿರೀಕ್ಷೆ ಮತ್ತು ಸರ್ಕಾರದಿಂದ ಸಿಗದ ಸ್ಪಂದನೆ ಕುರಿತು ಮಾತನಾಡಿದ ಅವರು, 40 ಸಾವಿರ ಹೆಕ್ಟೇರ್ ಅರಣ್ಯ ಹೊಂದಿರುವ ಚಿಂಚೋಳಿಯಲ್ಲಿ ಅರಣ್ಯ ಕೃಷಿ ಮಹಾವಿದ್ಯಾಲಯ ಸ್ಥಾಪಿಸಬೇಕು ಮತ್ತು ಸ್ನಾತಕೋತ್ತರ ಅಧ್ಯಯನಕ್ಕಾಗಿ ಯುವಜನರು ಕಲಬುರಗಿ, ಬೀದರ್ ತೆರಳುವ ಅನಿವಾರ್ಯತೆ ಪ್ರಸ್ತಾಪಿಸಿ ಸ್ನಾತಕೋತ್ತರ ಅಧ್ಯಯನ ಕೇಂದ್ರ ಮಂಜೂರು ಮಾಡಬೇಕೆಂದು ಒತ್ತಾಯಿಸಿದರು.

21 ಸಣ್ಣ ನೀರಾವರಿ ಕೆರೆಗಳ ನಿರ್ವಹಣೆಗೆ ಅನುದಾನ ನೀಡದ ಕುರಿತು ಗಮನ ಸೆಳೆದ ಅವರು, ಗೇಟ್‌ ಹಾಕುವುದಕ್ಕೂ ಹಣವಿಲ್ಲದ ಸ್ಥಿತಿಯಿದೆ. ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯಲ್ಲಿ ಗುಜರಿಗೆ ಹಾಕುವ ಬಸ್ ಓಡಿಸಲಾಗುತ್ತಿದೆ. ಹೊಸ ಬಸ್ ಕೇಳಿದರೂ ನೀಡುತ್ತಿಲ್ಲ ಎಂದು ದೂರಿದರು.

ADVERTISEMENT

ತಾಲ್ಲೂಕಿನಲ್ಲಿ ನಾಲ್ಕೈದು ದಶಕಗಳ ಹಿಂದೆ ನಿರ್ಮಿಸಿದ ಸೇತುವೆಗಳಿವೆ ಅವುಗಳು ಪ್ರವಾಹದ ನೀರಿನಲ್ಲಿ ಮುಳುಗುತ್ತವೆ ಹಾಗಾಗಿ ಹೊಸದಾಗಿ ಸೇತುವೆ ನಿರ್ಮಿಸಬೇಕು. ಕೌಶಲ್ಯಾಭಿವೃದ್ಧಿಗಾಗಿ ಜಿಟಿಟಿಸಿ ಮಂಜೂರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಆದರೆ, ಸರ್ಕಾರದಿಂದ ಸ್ಪಂದನೆ ಸಿಕ್ಕಿಲ್ಲ. ಇದರಿಂದ ಕ್ಷೇತ್ರದ ಜನರು ಬೇರೆಡೆ ಗುಳೆ ಹೋಗುತ್ತಿದ್ದಾರೆ ಎಂದರು.

ಉದ್ಯೋಗ ಸೃಷ್ಟಿಗೆ ಆದ್ಯತೆ, ತಲಾ ಆದಾಯ ವೃದ್ಧಿಗೆ ಕ್ರಮ ಕೈಗೊಳ್ಳಬೇಕು, ದೊಡ್ಡ ಕೈಗಾರಿಕೆಗಳು ನಮ್ಮ ಭಾಗಕ್ಕೆ ಬರಬೇಕು. ವಿಮಾನ ಹಾರಾಟ ಪುನರ್ ಆರಂಭಿಸಬೇಕು, ಗುತ್ತಿಗೆ ಆಧಾರದಲ್ಲಿ ನೇಮಕಗೊಂಡು ಕೆಲಸ ಮಾಡುತ್ತಿರುವವರನ್ನು ತೆಗೆದುಹಾಕಬಾರದು ಎಂದು ಮನವಿ ಮಾಡಿದರು.

ಕಳೆದ ವರ್ಷದ ಅಧಿವೇಶನದಲ್ಲಿ ಮಾತನಾಡಿದ್ದೇನೆ. ಈ ವರ್ಷವೂ ಮಾತನಾಡುತ್ತಿದ್ದೇನೆ. ಕಳೆದ ವರ್ಷ ಪ್ರಸ್ತಾಪಿಸಿದ ಸಮಸ್ಯೆಗಳ ಪರಿಹಾರದ ಅನುಪಾಲನ ವರದಿ ಬಿಡುಗಡೆ ಮಾಡಬೇಕೆಂದು ಶಾಸಕ ಡಾ.ಅವಿನಾಶ ಜಾಧವ ಒತ್ತಾಯಿಸಿದರು. ದಯವಿಟ್ಟು ಕೆಲಸಗಳು ಆಗುವಂತೆ ಕ್ರಮ ಕೈಗೊಳ್ಳಬೇಕೆಂದು ವಿಧಾನಸಭಾಧ್ಯಕ್ಷ ಯುಟಿ ಖಾದರ ಅವರನ್ನು ಕೋರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.