ADVERTISEMENT

ಕಲಬುರಗಿ|ದೌರ್ಜನ್ಯದ ಪದ್ಧತಿ ನಾಶವಾಗಲಿ:ವಿಮೋಚಿತ ದೇವದಾಸಿ ಮಹಿಳೆಯರಿಂದ ಸತ್ಯಾಗ್ರಹ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2025, 5:57 IST
Last Updated 14 ನವೆಂಬರ್ 2025, 5:57 IST
ಕಲಬುರಗಿ ಜಗತ್ ವೃತ್ತದಲ್ಲಿ ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘದಿಂದ ಗುರುವಾರ ಪ್ರತಿಭಟನೆ ನಡೆಸಿದರು
–ಪ್ರಜಾವಾಣಿ ಚಿತ್ರ
ಕಲಬುರಗಿ ಜಗತ್ ವೃತ್ತದಲ್ಲಿ ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘದಿಂದ ಗುರುವಾರ ಪ್ರತಿಭಟನೆ ನಡೆಸಿದರು –ಪ್ರಜಾವಾಣಿ ಚಿತ್ರ   

ಕಲಬುರಗಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘ ಜಿಲ್ಲಾ ಘಟಕದಿಂದ ಗುರುವಾರ ಅಹೋರಾತ್ರಿ ಧರಣಿ ಆರಂಭಿಸಿದೆ.

ನಗರದ ಜಗತ್ ವೃತ್ತದಲ್ಲಿ ನಡೆಯುತ್ತಿರುವ ಧರಣಿಯಲ್ಲಿ ನೂರಾರು ವಿಮೋಚಿತ ದೇವದಾಸಿಯರು ಪಾಲ್ಗೊಂಡಿದ್ದಾರೆ.

‘ದೌರ್ಜನ್ಯದ ದೇವದಾಸಿ ‌ಪದ್ಧತಿ ನಾಶಕ್ಕೆ ಕ್ರಮ ವಹಿಸಬೇಕು. ವಿಮೋಚಿತ ದೇವದಾಸಿಯ ಕುಟುಂಬಕ್ಕೆ ತಲಾ ಐದು ಎಕರೆ‌ ಜಮೀನು ಕೊಡಬೇಕು. ಅಕ್ಷರ ಕಲಿತ ಅವರ ಮಕ್ಕಳಿಗೆ ಉದ್ಯೋಗ ದೊರೆಯುವ ತನಕ ಮಾಸಿಕ ಕನಿಷ್ಠ ₹ 10 ಸಾವಿರ ನಿರುದ್ಯೋಗ ‌ಭತ್ಯೆ ಕೊಡಬೇಕು’ ಎಂದು ಆಗ್ರಹಿಸಿದರು.

ADVERTISEMENT

ಸಂಘದ ರಾಜ್ಯ ಗೌರವಾಧ್ಯಕ್ಷ ಯು.ಬಸವರಾಜ ಮಾತನಾಡಿ, ‘ಸರ್ಕಾರ ವಿಮೋಚಿತ ದೇವದಾಸಿಯರ ಗಣತಿಯಲ್ಲಿ ತಾರತಮ್ಯ ಮಾಡುತ್ತಿದೆ. ಎಲ್ಲ ವಿಮೋಚಿತ ದೇವದಾಸಿ ಮಹಿಳೆಯರನ್ನು ಗಣತಿ ಪಟ್ಟಿಗೆ ತರಬೇಕು. ಜೊತೆಗೆ ಅವರ ಮಕ್ಕಳನ್ನೂ ಸೇರಿಸಿ ಪುನರ್ವಸತಿ ಕಲ್ಪಿಸಬೇಕು. 1982ರ ನಂತರದಲ್ಲಿ ದೇವದಾಸಿಯರಾದ ಮಹಿಳೆಯರನ್ನು ಗಣತಿ ಪಟ್ಟಿಗೆ ಸೇರಿಸಲ್ಲ ಎಂಬ ಮಾತು ಕೇಳಿಬರುತ್ತಿದೆ. ಇದು ಖಂಡನೀಯ. 2025ರವರೆಗೆ ಇದ್ದಿರಬಹುದಾದ ಎಲ್ಲ ವಿಮೋಚಿತ ದೇವದಾಸಿ ಮಹಿಳೆಯರನ್ನು ಗಣತಿ ಪಟ್ಟಿಗೆ ಸೇರಿಸಿ ಪುನರ್‌ವಸತಿ ಕಲ್ಪಿಸಬೇಕು’ ಎಂದು ಆಗ್ರಹಿಸಿದರು.

‘ಈ ಕುಟುಂಬಗಳಿಗೆ ತಲಾ 5 ಎಕರೆ ಜಮೀನು ಕೊಡಬೇಕು. ಮನೆ ನಿರ್ಮಿಸಿ ಕೊಡಬೇಕು. ಇವೆಲ್ಲ ಏಕ ಪೋಷಕ ಕುಟುಂಬಗಳಾದ್ದರಿಂದ ಸರ್ಕಾರ ಇವರಿಗೆ ತಿಂಗಳಿಗೆ ಕನಿಷ್ಠ ₹ 5 ಸಾವಿರ ಪಿಂಚಣಿ ನೀಡಬೇಕು’ ಎಂದು ಒತ್ತಾಯಿಸಿದರು.

ಸಂಘಟನೆಯ ಜಿಲ್ಲಾ ಗೌರವಾಧ್ಯಕ್ಷ ಸುಧಾಮ ಧನ್ನಿ, ಜಿಲ್ಲಾಧ್ಯಕ್ಷೆ ಚಂದಮ್ಮ ಗೋಳಾ, ಮುಖಂಡರಾದ ಕೆ.ನೀಲಾ, ಪಾಂಡುರಂಗ ಮಾವಿನಕರೆ, ಗೌರಮ್ಮ ಹಡಲಗಿ, ಕಾಶಿಬಾಯಿ, ಕಮಲಾಬಾಯಿ, ಶಾಂತಮ್ಮ, ಯಲ್ಲಮ್ಮ ಸೇರಿದಂತೆ ನೂರಾರು ಮಹಿಳೆಯರು ಧರಣಿಯಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.