ನವದೆಹಲಿಯಲ್ಲಿರುವ ಡಾ.ಅಂಬೇಡ್ಕರ್ ಇಂಟರ್ ನ್ಯಾಷನಲ್ ಸೆಂಟರ್‌ನಲ್ಲಿ ಶುಕ್ರವಾರ ಸಂತ ಸೇವಾಲಾಲ್ ಮಹಾರಾಜರ 286ನೇ ಜಯಂತಿ ಕಾರ್ಯಕ್ರಮದಲ್ಲಿ ಸಮಾಜ ಸೇವಾ ಕಾರ್ಯಕರ್ತೆ ಅಮೃತಾ ಫಡಣವೀಸ್ ಅವರಿಗೆ ಬಂಜಾರಾ ಕಲಾರತ್ನ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಲೋಕಸಭಾ ಸ್ಪೀಕರ್ ಓಂ ಬಿರ್ಲಾ, ಮಾಜಿ ಸಂಸದ ಡಾ. ಉಮೇಶ ಜಾಧವ ಇತರರು ಭಾಗವಹಿಸಿದ್ದರು
ನವದೆಹಲಿ: ‘ದೇಶದ ಸಂಸ್ಕೃತಿ ಹಾಗೂ ಆಧ್ಯಾತ್ಮಿಕ ಜ್ಞಾನಕ್ಕೆ ಅಪೂರ್ವ ಕೊಡುಗೆ ನೀಡಿದ ಬಂಜಾರ ಸಮುದಾಯದ ಕಲ್ಯಾಣಕ್ಕಾಗಿ ದೇಶದ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಜತೆಗೆ ಚರ್ಚಿಸಲಾಗುವುದು’ ಎಂದು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ತಿಳಿಸಿದರು.
ನವದೆಹಲಿಯಲ್ಲಿರುವ ಡಾ.ಅಂಬೇಡ್ಕರ್ ಇಂಟರ್ ನ್ಯಾಷನಲ್ ಸೆಂಟರ್‌ನಲ್ಲಿ ಸಂತ ಸೇವಾಲಾಲ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಶುಕ್ರವಾರ ಹಮ್ಮಿಕೊಂಡ ಸೇವಾಲಾಲ್ ಮಹಾರಾಜರ 286ನೇ ಜಯಂತಿ ಹಾಗೂ ರೂಪ್‌ಸಿಂಗ್ ಮಹಾರಾಜರ 518ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ದೇಶದೆಲ್ಲೆಡೆ ಹರಡಿರುವ ಲಂಬಾಣಿ ಜನಾಂಗ, ಒಂದೇ ಸಂಪ್ರದಾಯವನ್ನು ಹೊಂದಿದ್ದರೂ ಮೀಸಲಾತಿಯಲ್ಲಿ ಏಕರೂಪವಿಲ್ಲದಂತಾಗಿದೆ’ ಎಂದು ಹೇಳಿದರು.
ಮಾಜಿ ಸಂಸದ ಡಾ. ಉಮೇಶ ಜಾಧವ ಪ್ರಾಸ್ತಾವಿಕವಾಗಿ ಮಾತನಾಡಿ, ದೆಹಲಿಯಲ್ಲಿ ಸಂತ ಸೇವಾಲಾಲ್ ಭವನ ನಿರ್ಮಾಣಕ್ಕಾಗಿ 4 ಎಕರೆ ಜಮೀನು ಮಂಜೂರು ಮಾಡಿಸಲು ಮನವಿ ಮಾಡಿದರು.
ಅಖಿಲ ಭಾರತ ಬಂಜಾರ ಸೇವಾ ಸಂಘದ ರಾಷ್ಟ್ರೀಯ ಅಧ್ಯಕ್ಷ ಶಂಕರ್ ಪವಾರ್ ಮಾತನಾಡಿ, ‘ಬಂಜಾರ ಸಮುದಾಯದ ಹಿರಿಯ ನಾಯಕ ಡಾ. ಉಮೇಶ್ ಜಾಧವ್ ಅವರಿಗೆ ಕೇಂದ್ರ ಸರ್ಕಾರದಲ್ಲಿ ಸೂಕ್ತ ಸ್ಥಾನಮಾನ ನೀಡಬೇಕು’ ಎಂದು ಮನವಿ ಮಾಡಿದರು.
ಮಹಾರಾಷ್ಟ್ರದ ಜಲ ಸಂಪನ್ಮೂಲ ಖಾತೆಯ ಸಚಿವ ಸಂಜಯ್ ರಾಠೋಡ್, ‘ಒಂದೇ ಮೀಸಲಾತಿ ಎಂಬ ನೀತಿಯನ್ನು ಅನುಸರಿಸಿ ಮಹಾರಾಷ್ಟ್ರದಲ್ಲಿ ಹಿಂದುಳಿದ ವರ್ಗದವರು, ಕರ್ನಾಟಕದಲ್ಲಿ ಪರಿಶಿಷ್ಟ ಜಾತಿ ಹಾಗೂ ಇತರ ರಾಜ್ಯಗಳಲ್ಲಿ ಪರಿಶಿಷ್ಟ ಪಂಗಡ ಎಂದು ಗುರುತಿಸಲಾಗಿರುವ ಬಂಜಾರ ಜನರಿಗೆ ಒಂದೇ ರೀತಿಯ ಮೀಸಲಾತಿ ಕಲ್ಪಿಸಿ ಹಕ್ಕು ಪಡೆಯಲು ಅನುಕೂಲ ಮಾಡಿಕೊಡಬೇಕು’ ಎಂದರು.
ಪೊಹರಾದೇವಿಯ ಸೇವಾಲಾಲ್ ಮರಿಯಮ್ಮ ಶಕ್ತಿಪೀಠದ ಪೀಠಾಧಿಪತಿ ಹಾಗೂ ಮಹಾರಾಷ್ಟ್ರದ ವಿಧಾನ ಪರಿಷತ್ ಸದಸ್ಯರೂ ಆದ ಬಾಬುಸಿಂಗ್ ಮಹಾರಾಜ್, ಶೇಖರ ಮಹಾರಾಜ, ಸಿದ್ದಲಿಂಗ ಸ್ವಾಮಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಈ ವೇಳೆ ಕೇಂದ್ರ ಸಚಿವ ರಾಮದಾಸ್ ಅಠಾವಳೆ, ಸಾಮಾಜಿಕ ಸೇವಾ ಕಾರ್ಯಕರ್ತೆ ಅಮೃತ ದೇವೇಂದ್ರ ಫಡಣವೀಸ್, ಶಾಸಕಿ ಶಶಿಕಲಾ ಜೊಲ್ಲೆ, ಜೆಡಿಎಸ್ ಕಲಬುರಗಿ ಜಿಲ್ಲಾಧ್ಯಕ್ಷ ಬಾಲರಾಜ್ ಗುತ್ತೇದಾರ್, ಶಾಸಕ ಡಾ. ಅವಿನಾಶ್ ಜಾಧವ್, ಕರ್ನಾಟಕ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್, ಬಾಬುಲಾಲ್, ರಾಮುಲು ನಾಯಕ, ಕವಿತಾ ರಾಥೋಡ್, ಶಿವಕುಮಾರ್ ಪಾಟೀಲ್, ಕಾಶಿನಾಥ ಬಿರಾದಾರ್, ಅರುಣ್ ಪವಾರ್, ರಾಮಚಂದ್ರ ಜಾಧವ್ ಹಾಜರಿದ್ದರು.
ರಾಮ ರಾಠೋಡ್, ಶ್ವೇತಾ ತ್ಯಾಗಿ ನಿರೂಪಿಸಿದರು. ಇದೇ ಸಂದರ್ಭದಲ್ಲಿ ಸಮಾಜ ಸೇವಾ ಕಾರ್ಯಕರ್ತೆ ಹಾಗೂ ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರ ಪತ್ನಿ ಅಮೃತಾ ಫಡಣವೀಸ್ ಅವರಿಗೆ ಬಂಜಾರಾ ಕಲಾರತ್ನ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.