ಕಲಬುರಗಿ: ‘ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕಾಂಗ್ರೆಸ್‌ನಿಂದ ಒಂದು ಕಾಲು ಹೊರಗಿಟ್ಟಿದ್ದು, ಬಿಜೆಪಿ ಸಹಕಾರದೊಂದಿಗೆ ಸರ್ಕಾರ ರಚಿಸಲು ಮುಂದಾಗಿದ್ದರು. ದೆಹಲಿಯಲ್ಲಿ ಬಿಜೆಪಿ ರಾಜ್ಯ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರೊಂದಿಗೆ ರಹಸ್ಯ ಸಭೆ ನಡೆದಿತ್ತು’ ಎಂದು ಬಿಜೆಪಿಯ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಸ್ಫೋಟಕ ಹೇಳಿಕೆ ನೀಡಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಒಪ್ಪಂದದ ಪ್ರಕಾರ ಶಿವಕುಮಾರ್ ಮುಖ್ಯಮಂತ್ರಿ, ವಿಜಯೇಂದ್ರ ಉಪಮುಖ್ಯಮಂತ್ರಿ ಆಗುವ ಬಗ್ಗೆ ಚರ್ಚೆ ನಡೆದಿತ್ತು. ಆದರೆ, ಶಿವಕುಮಾರ್ ಅವರ ಹಿಂದೆ ಹೆಚ್ಚಿನ ಸಂಖ್ಯೆಯ ಶಾಸಕರಿರಲಿಲ್ಲ. ಹೀಗಾಗಿ, ಸುಮ್ಮನಾಗಿದ್ದಾರೆ’ ಎಂದರು.
'ಬಿಜೆಪಿ ಅಧ್ಯಕ್ಷರ ಜತೆ ದೆಹಲಿಯಲ್ಲಿ ಸಭೆ ನಡೆಸಿ ಪಕ್ಷ ಸೇರ್ಪಡೆ ಕುರಿತು ಚರ್ಚೆ ನಡೆಸಿದ್ದಾರೆ. ತಮಗೆ 60ರಿಂದ 70 ಕಾಂಗ್ರೆಸ್ ಶಾಸಕರ ಬೆಂಬಲವಿದೆ ಎಂದು ಹೇಳಿದ್ದರು. ಆದರೆ, ಆಂತರಿಕ ವರದಿ ಪ್ರಕಾರ ಅವರೊಂದಿಗೆ 10ರಿಂದ 12 ಶಾಸಕರೂ ಇಲ್ಲದಿರುವ ಮಾಹಿತಿ ಸಿಕ್ಕಿತು. ಅವರು ಬಿಜೆಪಿ ಜೊತೆಗೆ ಕೈಜೋಡಿಸಿದರೆ ಅಷ್ಟು ಶಾಸಕರೂ ಶಿವಕುಮಾರ್ ಅವರೊಂದಿಗೆ ಇರುವುದಿಲ್ಲ ಎಂಬ ಮಾತುಗಳೂ ಕೇಳಿಬಂದವು. ಬಹುತೇಕ ಶಾಸಕರು ಸಿದ್ದರಾಮಯ್ಯ ಅವರೊಂದಿಗೆ ಇದ್ದಾರೆ. ಇನ್ನೊಂದೆರಡು ವರ್ಷ ಮುಸ್ಲಿಮರ ಪರ ನಿಲುವುಳ್ಳ ಸಿದ್ದರಾಮಯ್ಯ ಇದ್ದರೂ ಚಿಂತೆ ಇಲ್ಲ. ಡಿ.ಕೆ.ಶಿವಕುಮಾರ್ ಅವರಂತಹ ಭ್ರಷ್ಟ ಮುಖ್ಯಮಂತ್ರಿಯಾಗಬಾರದು. ಶಿವಕುಮಾರ್ ಹಾಗೂ ವಿಜಯೇಂದ್ರ ಇಬ್ಬರೂ ಭ್ರಷ್ಟರು. ಇಬ್ಬರೂ ಒಂದಾದರೆ ಕರ್ನಾಟಕವನ್ನೇ ಮಾರಿಬಿಡುತ್ತಾರೆ’ ಎಂದು ಟೀಕಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.