ಕಾಳಗಿ: ತಾಲ್ಲೂಕಿನಲ್ಲಿ ಒಂದು ಪಟ್ಟಣ ಪಂಚಾಯಿತಿ, 21 ಗ್ರಾಮ ಪಂಚಾಯಿತಿಗಳು ಹಾಗೂ 101 ಹಳ್ಳಿಗಳಿವೆ. ಈ ಪೈಕಿ 2 ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನಗಳಲ್ಲೇ ಕುಡಿಯುವ ನೀರಿನ ಸಮಸ್ಯೆ ಮನೆ ಮಾಡಿದೆ.
ರಟಕಲ್ ಗ್ರಾಮದಲ್ಲಿ ಜಲಜೀವನ ಮಿಷನ್ (ಜೆಜೆಎಂ) ಕಾಮಗಾರಿ ಕಳಪೆಯಾಗಿದೆ. ಕುಡಿಯುವ ನೀರು ಒದಗಿಸಬೇಕಿದ್ದ ಮನೆ– ಮನೆಗೆ ಗಂಗಾ ಯೋಜನೆ ವಿಫಲವಾಗಿದೆ ಎನ್ನುತ್ತಾರೆ ಸ್ಥಳೀಯರು.
ಗ್ರಾಮ ಆಡಳಿತದ ನಿರ್ವಹಣೆಯ ಕೊರತೆಗೆ 30 ವರ್ಷಗಳ ಹಳೇ ಪೈಪ್ ಲೈನ್ ನಲುಗಿ ಹೋಗಿದೆ. ಈಗ 1.5 ಕಿ.ಮೀ ಪೈಪ್ ಲೈನ್ ದುರಸ್ತಿ ಕಾರ್ಯ ನಡೆದಿದೆ. 2ನೇ ವಾರ್ಡ್ ಮತ್ತು 4ನೇ ವಾರ್ಡ್‌ಗಳ ನಿವಾಸಿಗಳಿಗೆ ನೀರು ಸಿಗುತ್ತಿಲ್ಲ. ಜನ, ಜಾನುವಾರು ನೀರಿನ ಬವಣೆಯಿಂದ ಬಳಲುವಂತಾಗಿದೆ. ಮೋಟರ್ ಸುಟ್ಟುಹೋಗಿ ದಿನಗಳೇ ಕಳೆಯುತ್ತಿದ್ದರೂ ಗ್ರಾಮಾಡಳಿತ ಮೌನವಹಿಸಿದೆ.
ಕೆಲವು ವಾರ್ಡ್‌ಗಳ ಜನರಿಗೆ ಮೂರ್ನಾಲ್ಕು ದಿನಗಳಿಗೆ ಒಮ್ಮೆ ನೀರು ಸಿಗುತ್ತಿದೆ. ಮತ್ತೆ ಕೆಲವರಿಗೆ ನೀರು ಸಿಗದೆ ಖಾಲಿ ಕೊಡಗಳನ್ನು ಹಿಡಿದು ಜಲಮೂಲ ಅರಸಿ ಅಲೆದಾಡುವ ಪರಿಸ್ಥಿತಿ ತಲೆದೋರಿದೆ.
‘1ನೇ ವಾರ್ಡ್‌ನ ಹರಿಜನವಾಡ ಮತ್ತು ವಟವಟಿ ಕಿರಾಣಿ ಅಂಗಡಿ ಸಮೀಪದ ಹಳೇ ಪೈಪ್ ಲೈನ್ ಒಳಗೆ ಚರಂಡಿ ನೀರು ಸೇರುತ್ತಿದೆ. ಇದೇ ಕೊಳಚೆ ನೀರು ಜನರಿಗೆ ಪೂರೈಕೆ ಆಗುತ್ತಿದೆ. ಇದರಿಂದ ಜನರ ಆರೋಗ್ಯ ಹದಗೆಡುತ್ತಿದೆ. ಈಗಾಗಲೇ ನೀರು ಒದಗಿಸಿದ್ದಾಗಿ ಅಧಿಕಾರಿಗಳು ಹೇಳುತ್ತಾರೆ. ಅವರೇ ಸ್ಥಳಕ್ಕೆ ಬಂದು ಪೂರೈಕೆ ಆಗುತ್ತಿರುವ ನೀರು ತೋರಿಸಲಿ’ ಎನ್ನುತ್ತಾರೆ ಗ್ರಾಮದ ಮುಖಂಡ ವೀರಣ್ಣ ಗಂಗಾಣಿ.
‘ನೀರಿನ ಪೈಪ್‌ಲೈನ್ ಕೆಲಸ ಬೇಕಾಬಿಟ್ಟಿಯಾಗಿ ಮಾಡಲಾಗಿದೆ. ವರ್ಷದಿಂದ ವರ್ಷಕ್ಕೆ ನೀರಿನ ಬವಣೆ ಹೆಚ್ಚುತ್ತಲೇ ಇದೆ. ಶಾಶ್ವತ ಪರಿಹಾರ ಎಂಬುದು ಮರೀಚಿಕೆಯಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.
ನೀರಿನ ಸಮಸ್ಯೆ ಸಂಬಂಧ ಸ್ಥಳೀಯ ಗ್ರಾಮ ಪಂಚಾಯಿತಿ, ತಾಲ್ಲೂಕು ತಹಶೀಲ್ದಾರ್, ತಾಲ್ಲೂಕು ಪಂಚಾಯಿತಿ ಮತ್ತು ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ಅಳಲು ತೋಡಿಕೊಂಡರು.
ಮೊಘಾ ಗ್ರಾಮ ಮತ್ತು ಇದರ ಎರಡು ತಾಂಡಾಗಳಲ್ಲಿ ಅಂತರ್ಜಲಮಟ್ಟ ಕುಸಿದಿದೆ. ಕೊಳವೆ ಬಾವಿಗಳಲ್ಲಿಯೂ ಹನಿ ನೀರು ಬರುತ್ತಿಲ್ಲ. ಬಿಸಿಲಿನ ಬೇಗೆ ಹೆಚ್ಚಿದಂತೆ ನೀರಿನ ಕೊರತೆಯೂ ಮನೆಮಾಡಿದೆ.
5 ಕಿ.ಮೀ ದೂರದ ಅಲ್ಲಾಪುರ ಕೆರೆ ಬಳಿ ಕೊಳವೆ ಬಾವಿ ಕೊರೆಯಿಸಿ, ತಕ್ಕಮಟ್ಟಿಗೆ ನೀರು ಪೂರೈಸಲಾಗುತ್ತಿದೆ. ಈ ನಡುವೆ ಅದರ ಪೈಪ್ ಲೈನ್ ಪದೇ ಪದೇ ಹಾಳಾಗುತ್ತಿದೆ. ಆಗಾಗ ವಿದ್ಯುತ್ ಕಡಿತವೂ ಆಗುತ್ತಿದೆ. ಇದರಿಂದ ನೀರು ಸಿಗದೆ ಗ್ರಾಮಸ್ಥರು ಮತ್ತು ತಾಂಡಾ ನಿವಾಸಿಗಳು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ನೀರಿನ ಬವಣೆ ನೀಗಿಸುವಂತೆ ಅಧಿಕಾರಿಗಳಿಗೆ ಮನವಿ ಮಾಡಿದರೂ ಇತ್ಯರ್ಥವಾಗುತ್ತಿಲ್ಲ ಎಂದು ನಿವಾಸಿಗಳು ಅಲವತ್ತುಕೊಂಡರು.
ರಟಕಲ್ ಗ್ರಾಮದಲ್ಲಿ ಒಂದು ವರ್ಷದಿಂದ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸಿದೆ. ಪ್ರತಿಭಟನೆ ಹೋರಾಟ ಮಾಡಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ-ವೀರಣ್ಣ ಗಂಗಾಣಿ ರಟಕಲ್ ಗ್ರಾಮದ ಮುಖಂಡ
ರಟಕಲ್ ಮತ್ತು ಮೊಘಾ ಗ್ರಾಮಗಳಲ್ಲಿನ ಕುಡಿಯುವ ನೀರಿನ ಸಮಸ್ಯೆಯನ್ನು ಶೀಘ್ರವೇ ಇತ್ಯರ್ಥ ಮಾಡಲಾಗುವುದು. ಪಸ್ತಾಪುರ ಗಂಜಗೇರಾ ಗ್ರಾಮಗಳು ನೀರಿನ ಸಮಸ್ಯೆಯಿಂದ ಮುಕ್ತವಾಗಿವೆ-ಡಾ.ಬಸಲಿಂಗಪ್ಪ ಡಿಗ್ಗಿ ಕಾಳಗಿ ತಾ.ಪಂ ಇಒ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.