ಕಲಬುರಗಿಯ ಕನ್ನಡ ಭವನದಲ್ಲಿ ಜಿಲ್ಲಾ ಕಸಾಪದಿಂದ ಶನಿವಾರ ಜಿಲ್ಲಾ ದೃಶ್ಯಕಲಾ ಸಾಹಿತ್ಯ ಸಮ್ಮೇಳನವನ್ನು ಸಾಹಿತಿ ಶ್ರೀನಿವಾಸ ಸಿರನೂರಕರ್ ಉದ್ಘಾಟಿಸಿದರು. ಸಮ್ಮೇಳನಾಧ್ಯಕ್ಷ ಎಸ್.ಸಿ.ಪಾಟೀಲ, ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಪಾಲ್ಗೊಂಡಿದ್ದರು
ಕಲಬುರಗಿ: ‘ಅಖಿಲ ಭಾರತ ಸಾಹಿತ್ಯ ಸಮ್ಮೇಳನದಂತೆ ಅಖಿಲ ಭಾರತ ಲಲಿತ ಕಲಾ ಸಮ್ಮೇಳನವೂ ನಡೆಯಲಿ’ ಎಂದು ಕಲಬುರಗಿ ಜಿಲ್ಲಾ ಪ್ರಥಮ ದೃಶ್ಯಕಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ, ಕರ್ನಾಟಕ ಲಲಿತಕಲಾ ವಿವಿಯ ವಿಶ್ರಾಂತ ವಿಶೇಷಾಧಿಕಾರಿ ಎಸ್.ಸಿ.ಪಾಟೀಲ ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡಭವನದಲ್ಲಿ ನಡೆದ ಕಲಬುರಗಿ ಜಿಲ್ಲಾ ಪ್ರಥಮ ದೃಶ್ಯಕಲಾ ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡಿದ ಅವರು, ‘ದೃಶ್ಯಕಲೆಯೂ ಸಾಹಿತ್ಯದ ಒಂದು ಪ್ರಕಾರವಾಗಿದ್ದು, 1902ರಲ್ಲಿ ಪಠ್ಯಕ್ರಮದಲ್ಲಿ ಚಿತ್ರಕಲೆಯನ್ನು ಕಡ್ಡಾಯಗೊಳಿಸಲು ಶಿಫಾರಸು ಮಾಡಲಾಯಿತು. ಆದರೆ ಕಲಾಶಾಲೆಗಳು ಮುಚ್ಚಿಹೋಗುತ್ತಿರುವುದು ಬೇಸರದ ಸಂಗತಿ. 40 ಸಾವಿರ ಚಿತ್ರಕಲಾ ಶಿಕ್ಷಕರ ಹುದ್ದೆಗಳು ಖಾಲಿ ಇವೆ. ಸರ್ಕಾರ ವಿಶೇಷ ಅನುದಾನ ನೀಡಿ ಪ್ರೋತ್ಸಾಹಿಸಬೇಕು. ಜಿಲ್ಲೆಗೊಂದು ಗ್ಯಾಲರಿ, ಎಲ್ಲ ವಿವಿಗಳಲ್ಲಿ ಅಧ್ಯಯನ ವಿಭಾಗ, ರಾಷ್ಟ್ರೀಯ ಟ್ರಸ್ಟ್ ನಿರ್ಮಾಣವಾಗಬೇಕು. ಪ್ರತಿ ವರ್ಷ ದೃಶ್ಯಕಲಾ ಸಾಹಿತ್ಯ ಸಮ್ಮೇಳನ, ಶಿಲ್ಪಕಲಾ ಸಾಹಿತ್ಯ ಸಮ್ಮೇಳನ, ವೃತ್ತಿರಂಗಭೂಮಿ ಸಮ್ಮೇಳನಗಳೂ ಆಯೋಜನೆಗೊಳ್ಳಲಿ’ ಎಂದು ಆಶಿಸಿದರು.
ದೃಶ್ಯಕಲಾ ಸಿರಿ, ದೃಶ್ಯಕಲಾ ದೀಪ್ತಿ ಕೃತಿಗಳು ಹಾಗೂ ಸ್ಮರಣ ಸಂಚಿಕೆ ಬಿಡುಗಡೆ ಮಾಡಿದ ಶರಣಬಸವ ವಿವಿ ದೃಶ್ಯಕಲಾ ವಿಭಾಗದ ಗೌರವ ಡೀನ್ ಶಾಂತಲಾ ನಿಷ್ಠಿ, ‘ಸಮಾಜದ ವಿಕಾಸದಲ್ಲಿ ಕಲೆಗಳ ಪಾತ್ರ ಬಹುಮುಖ್ಯ. ಎಲ್ಲ ಕಲೆಗಳ ಪೋಷಣೆ ಅತ್ಯವಶ್ಯ’ ಎಂದರು.
ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ‘ಕಲೆ ಮತ್ತು ಕಲಾವಿದರಿಗೆ ಪ್ರೋತ್ಸಾಹ, ಬೆಂಬಲ ಕೊಡುವ ಉದ್ದೇಶದಿಂದ ಪರಿಷತ್ತು ಇಂತಹ ಸಮ್ಮೇಳನಗಳನ್ನು ಆಯೋಜಿಸುತ್ತಿದೆ’ ಎಂದು ಹೇಳಿದರು.
ಬಣ್ಣ ಬೆಳಕು ಗೋಷ್ಠಿಯಲ್ಲಿ ಮಾತನಾಡಿದ ಸಾಹಿತಿ ಮಹಿಪಾಲರೆಡ್ಡಿ ಮುನ್ನೂರು, ‘ಚಿತ್ರ ಕಲಾವಿದರ ಜೀವನ ಬಣ್ಣದ ಬದುಕಾಗಿದೆ. ಆ ಬಣ್ಣದ ಬದುಕು ಸಾರ್ಥಕವಾಗಲಿ’ ಎಂದು ಆಶಿಸಿದರು. ಕರ್ನಾಟಕ ಕೇಂದ್ರೀಯ ವಿವಿ ಪ್ರಾಧ್ಯಾಪಕ ಶಿವಾನಂದ ಭಂಟನೂರ, ಮೋಹನರಾವ ಪಂಚಾಳ ಮಾತನಾಡಿದರು.
ಕಾವ್ಯ ಕುಂಚ ಗಾಯನ ಗೋಷ್ಠಿಯಲ್ಲಿ ಸಾಹಿತಿ ಸ್ವಾಮಿರಾವ ಕುಲಕರ್ಣಿ, ಶಕುಂತಲಾ ಪಾಟೀಲ, ಸಂತೋಷಕುಮಾರ ಕರಹರಿ, ಪರ್ವೀನ್ ಸುಲ್ತಾನಾ ಅವರ ಕವನಗಳಿಗೆ ಶ್ರೀಧರ ಹೊಸಮನಿ ರಾಗ ಸಂಯೋಜನೆ ಮಾಡಿದರು. ನಾಗರಾಜ ಕುಲಕರ್ಣಿ, ಬಿ.ಎನ್.ಪಾಟೀಲ, ಕವಿತಾ ಕಟ್ಟೆ, ಸೂರ್ಯಕಾಂತ ನಂದೂರ, ರಜನಿ ತಳವಾರ ಚಿತ್ರ ಬಿಡಿಸಿದರು.
ಸಮಾರೋಪದಲ್ಲಿ ಅಕಾಡೆಮಿ ಸದಸ್ಯ ಬಸವರಾಜ ಎಲ್ ಜಾನೆ, ಎಸ್.ಎಂ.ನೀಲಾ, ಬಸವರಾಜ ತೋಟದ ಮಾತನಾಡಿದರು. ದಿ ಆರ್ಟ್ ಇಂಟಿಗ್ರೇಷನ್ ಫೈನ್ ಆರ್ಟ್ ಕಾಲೇಜಿನ ಪ್ರಿನ್ಸಿಪಾಲ್ ಎಂ.ಎಚ್. ಬೆಳಮಗಿ ಮೆರವಣಿಗೆಗೆ ಚಾಲನೆ ನೀಡಿದರು. ಜಿಲ್ಲಾ ಕಸಾಪದ ಶಿವರಾಜ ಅಂಡಗಿ, ಧರ್ಮಣ್ಣ ಎಚ್. ಧನ್ನಿ, ಶರಣರಾಜ ಛಪ್ಪರಬಂದಿ, ರವೀಂದ್ರಕುಮಾರ ಭಂಟನಳ್ಳಿ, ರೆಹಮಾನ್ ಪಟೇಲ್, ರಾಜೇಂದ್ರ ಮಾಡಬೂಳ, ಧರ್ಮರಾಜ ಜವಳಿ, ಕಲ್ಯಾಣಕುಮಾರ ಶೀಲವಂತ, ಬಸವರಾಜ ಉಪ್ಪಿನ, ಶಿವಾನಂದ ಕೊಪ್ಪದ, ಮಂಜುಳಾ ಜಾನೆ, ರಾಜಶೇಖರ ಶಾಮಣ್ಣ, ರಮೇಶ ಡಿ.ಬಡಿಗೇರ ಸೇರಿ ಹಲವರು ಪಾಲ್ಗೊಂಡಿದ್ದರು.
ಚಿತ್ರಕಲೆ ಸಮಾಜದಲ್ಲಿ ಬಹುತೇಕ ನಿರ್ಲಕ್ಷ್ಯಕ್ಕೊಳಗಾದ ಕ್ಷೇತ್ರ. ಚಿತ್ರ ಬದುಕಿನ ಸಂಗತಿಗಳನ್ನು ಅನಾವರಣಗೊಳಿಸುವಂಥಹದು. ಚಿತ್ರಕಲೆ ಮತ್ತು ಸಾಹಿತ್ಯ ಪೂರಕವಾಗಿವೆಬಸವರಾಜ ಕಲೆಗಾರ ಲಲಿತಕಲಾ ಅಕಾಡೆಮಿ ಸದಸ್ಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.