ADVERTISEMENT

ದೇಶದ ಪ್ರಗತಿಗೆ ಶಿಕ್ಷಣವೇ ಕಾರಣ: ಶಾಸಕ‌ ಅಲ್ಲಮಪ್ರಭು ಪಾಟೀಲ

86 ಶಿಕ್ಷಕರಿಗೆ ‘ಆದರ್ಶ ಉಪಾಧ್ಯಾಯರು’ ಪ್ರಶಸ್ತಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2025, 5:51 IST
Last Updated 29 ಡಿಸೆಂಬರ್ 2025, 5:51 IST
ಕಲಬುರಗಿಯ ಡಾ.ಎಸ್‌.ಎಂ.ಪಂಡಿತ ರಂಗಮಂದಿರದಲ್ಲಿ ನಡೆದ ಸಮಾರಂಭದಲ್ಲಿ ವಿಶೇಷ ಸಾಧಕರನ್ನು ಸನ್ಮಾನಿಸಲಾಯಿತು – ಪ್ರಜಾವಾಣಿ ಚಿತ್ರ
ಕಲಬುರಗಿಯ ಡಾ.ಎಸ್‌.ಎಂ.ಪಂಡಿತ ರಂಗಮಂದಿರದಲ್ಲಿ ನಡೆದ ಸಮಾರಂಭದಲ್ಲಿ ವಿಶೇಷ ಸಾಧಕರನ್ನು ಸನ್ಮಾನಿಸಲಾಯಿತು – ಪ್ರಜಾವಾಣಿ ಚಿತ್ರ   

ಕಲಬುರಗಿ: ‘ದೇಶದ ಸರ್ವಾಂಗೀಣ ಉನ್ನತಿಗೆ ಶಿಕ್ಷಣ, ಶಿಕ್ಷಕರು ಹಾಗೂ ಡಾ.ಬಿ.ಆರ್‌. ಅಂಬೇಡ್ಕರ್‌ ಕೊಟ್ಟ ಸಂವಿಧಾನ ಕಾರಣ’ ಎಂದು ಶಾಸಕ‌ ಅಲ್ಲಮಪ್ರಭು ಪಾಟೀಲ ಹೇಳಿದರು.

ನಗರದ ಡಾ. ಎಸ್‌.ಎಂ.ಪಂಡಿತ ರಂಗಮಂದಿರದಲ್ಲಿ ಸಮಗ್ರ‌ ಕರ್ನಾಟಕ ಉಪಾಧ್ಯಾಯರ ಪ್ರಗತಿ ಪರ ಸಂಘದ ರಾಜ್ಯ ಹಾಗೂ ಜಿಲ್ಲಾ ಘಟಕದಿಂದ ‌ಭಾನುವಾರ ಆಯೋಜಿಸಿದ್ದ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಜಯಂತಿ ಹಾಗೂ ಆದರ್ಶ ಉಪಾಧ್ಯಾಯರ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

‘ದೇಶಕ್ಕೆ ಸ್ವಾತಂತ್ರ್ಯ ‌ಬಂದಾಗ‌ ಬಡತನ ಕಾಡುತ್ತಿತ್ತು. ಆಹಾರ, ಶಿಕ್ಷಣ, ರಸ್ತೆಗಳು ಸೇರಿದಂತೆ ಅನೇಕ ಕೊರತೆಗಳು ಕಾಡುತ್ತಿತ್ತು. ಕಳೆದ 75 ವರ್ಷಗಳಲ್ಲಿ ದೇಶ ಸಾಕಷ್ಟು ಪ್ರಗತಿ ಸಾಧಿಸಿದೆ. ಇಡೀ ವಿಶ್ವಕ್ಕೆ ಎಂಜಿನಿಯರ್‌ಗಳು, ವೈದ್ಯರನ್ನು ಒದಗಿಸುತ್ತಿದೆ. ಆಹಾರ ಧಾನ್ಯಗಳನ್ನು ರಫ್ತು ಮಾಡುತ್ತಿದೆ. ಈ ಎಲ್ಲ ಬದಲಾವಣೆಗೆ ಗುಣಮಟ್ಟದ ಶಿಕ್ಷಣ ಹಾಗೂ ಶಿಕ್ಷಕರ ಶ್ರಮ ಮೂಲ ಕಾರಣ’ ಎಂದು ಬಣ್ಣಿಸಿದರು.

ADVERTISEMENT

‘ಬುದ್ಧ, ಬಸವಣ್ಣನ ಕಾಲದಿಂದಲೂ ಸ್ತ್ರೀ ಸಮಾನತೆ ಬರಬೇಕು, ಅಸ್ಪೃಶ್ಯತೆ ಅಳಿಯಬೇಕು, ಜಾತೀಯತೆ ಹೋಗಬೇಕು. ಮನುಷ್ಯ ಕುಲವೆಲ್ಲವೂ ಒಂದೇ ಎಂದು ಸಾರುತ್ತ ಬಂದರೂ ಆ ಆಶಯ ಸಾಕಾರಗೊಂಡಿಲಿಲ್ಲ. ದೇಶ ಸ್ವತಂತ್ರಗೊಂಡ ಬಳಿಕ ಡಾ.ಅಂಬೇಡ್ಕರ್ ಉತ್ತಮ ಸಂವಿಧಾನ ಕೊಟ್ಟ ಫಲವಾಗಿ ಇಂದು ಸ್ತ್ರೀ ಸಮಾನತೆ, ಹಕ್ಕುಗಳು ಸೇರಿದಂತೆ ಹಲವು ಸುಧಾರಣೆಗಳು ಸಾಧ್ಯವಾಗುತ್ತಿವೆ. ಅಂಬೇಡ್ಕರ್ ಅವರಿಗೂ ಶಿಕ್ಷಣ ಸಿಕ್ಕಿದ್ದರಿಂದಲೇ ಇಂಥ ಸಂವಿಧಾನ ಕೊಡಲು ಸಾಧ್ಯವಾಯಿತು’ ಎಂದು ಅಭಿಪ್ರಾಯಪಟ್ಟರು.

ವಿಧಾನ ಪರಿಷತ್ ಸದಸ್ಯ ಶಶೀಲ್‌ ನಮೋಶಿ, ‘ಕಲ್ಲನ್ನು ಕಟಿದು ಮೂರ್ತಿ ರೂಪಿಸುವ ಕೀರ್ತಿ ಶಿಕ್ಷಕರಿಗೆ ಸಲ್ಲುತ್ತದೆ. ವಿದ್ಯಾರ್ಥಿಗಳಿಗೆ ಕಲಿಸುವ ಜೊತೆಗೆ ಉಸಿರು ಇರುವ ತನಕ ನಿರಂತರವಾಗಿ ಕಲಿಯುವುದು ಶಿಕ್ಷಕರ ಹೊಣೆ. ಈ ವೃತ್ತಿ ಬಹಳ ಘನವಾದದ್ದು’ ಎಂದರು.

ಸಮಗ್ರ ಕರ್ನಾಟಕ ಉಪಾಧ್ಯಾಯರ ಪ್ರಗತಿಪರ ಸಂಘದ ಸಂಸ್ಥಾಪಕ ರಾಜ್ಯಾಧ್ಯಕ್ಷ ಗುರುಪಾದ ಕೋಗನೂರ ಅಧ್ಯಕ್ಷತೆ ವಹಿಸಿದ್ದರು.

ವಿಧಾನ ಪರಿಷತ್ ಸದಸ್ಯ ಸಾಬಣ್ಣ ತಳವಾರ, ಡಿಡಿಪಿಐ ಸೂರ್ಯಕಾಂತ ಮದಾನೆ, ಡಿಎಚ್‌ಒ ಡಾ.ಶರಣಬಸಪ್ಪ ಕ್ಯಾತನಾಳ, ಎನ್‌ಎಚ್‌ಎಐ ಕಾರ್ಯನಿರ್ವಾಹಕ ಎಂಜಿನಿಯರ್‌ ಮಹ್ಮದ್‌ ಇಬ್ರಾಹಿಂ ಕುಪನೂರ, ಚಿತ್ತಾಪುರದ ಗಂಗಾಪರಮೇಶ್ವರಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷೆ ಅಮರೇಶ್ವರಿ ಬಿ.ಚಿಂಚನಸೂರ, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಬಳೂಂಡಗಿ, ಅಕ್ಷಯ ಡೆವಲೆಪರ್ಸ್‌ನ ಶರಣಗೌಡ ನಾಗಶೆಟ್ಟಿ ಹಾಗೂ ಮಹಾನಂದ ನಾಗಶೆಟ್ಟಿ, ನಿವೃತ್ತ ಅಧಿಕಾರಿ ರಾಮರೆಡ್ಡಿ ಎನ್‌. ಸಂಪಾತೆ ವೇದಿಕೆಯಲ್ಲಿದ್ದರು.

ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ವೆಂಕಟರೆಡ್ಡಿ ಸಿ.ಕರಡ್ಡಿ ಸ್ವಾಗತಿಸಿದರು. ಸಂಘದ ರಾಜ್ಯ ಕೋಶಾಧ್ಯಕ್ಷ ಝಾಕೀರ್‌ ಹುಸೇನ್‌ ಕುಪನೂರ ವಂದಿಸಿದರು.

86 ಮಂದಿಗೆ ಪ್ರಶಸ್ತಿ

ಸಮಾರಂಭದಲ್ಲಿ ಪೂರ್ವ ಪ್ರಾಥಮಿಕ ಶಾಲಾ ವಿಭಾಗ ಪ್ರಾಥಮಿಕ ಶಾಲಾ ವಿಭಾಗ ಪ್ರೌಢಶಾಲಾ ವಿಭಾಗ  ಪದವಿ ಪೂರ್ವ ಮತ್ತು ಪದವಿ ಶಿಕ್ಷಣ ವಿಭಾಗ ತಾಂತ್ರಿಕ ಶಿಕ್ಷಣ ವಿಭಾಗದಲ್ಲಿ 79 ಹಾಗೂ ವಿಶೇಷ ವಿಭಾಗದಲ್ಲಿ ಏಳು ಸೇರಿದಂತೆ ಒಟ್ಟು 86 ಪ್ರಶಸ್ತಿ ಪ್ರದಾನ ಮಾಡಲಾಯಿತು. ಸಾಧಕರ ಮೇಲೆ ಪುಷ್ಪದಳ ಚೆಲ್ಲಿ ಗೌರವಿಸಲಾಯಿತು.

ಶಿಕ್ಷಣ ಶಿಸ್ತು ಸಂಘಟನೆ ಸೇವೆ ಹಾಗೂ ಸನ್ಮಾನ ನಮ್ಮ ಸಂಘದ ಧ್ಯೆಯ. ಈ ಬಾರಿ ಕೆಜಿಯಿಂದ ಪಿಜಿ ವರೆಗಿನ 86 ಶಿಕ್ಷಕರಿಗೆ ಜಿಲ್ಲಾಮಟ್ಟದ ಪ್ರಶಸ್ತಿ ವಿತರಿಸಲಾಗಿದೆ
-ಗುರುಪಾದ ಕೋಗನೂರ, ಸಮಗ್ರ ಕರ್ನಾಟಕ ಉಪಾಧ್ಯಾಯರ ಪ್ರಗತಿಪರ ಸಂಘದ ರಾಜ್ಯಾಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.