ADVERTISEMENT

ನಕಲಿ ಅಂಕಪಟ್ಟಿ ಜಾಲ: ಒಬ್ಬ ಸೆರೆ

28 ವಿ.ವಿಗಳ ಹೆಸರಲ್ಲಿದ್ದ 522 ನಕಲಿ ಅಂಕಪಟ್ಟಿಗಳು ವಶಕ್ಕೆ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2025, 21:31 IST
Last Updated 27 ಫೆಬ್ರುವರಿ 2025, 21:31 IST
ರಾಜೀವ್ ಸಿಂಗ್ ಅರೋರಾ
ರಾಜೀವ್ ಸಿಂಗ್ ಅರೋರಾ   

ಕಲಬುರಗಿ: ದೇಶದ ವಿವಿಧ ವಿಶ್ವವಿದ್ಯಾಲಯಗಳು, ಶಿಕ್ಷಣ ಸಂಸ್ಥೆಗಳ ಹೆಸರಿನಲ್ಲಿ ನಕಲಿ ಅಂಕಪಟ್ಟಿ ಮತ್ತು ಪದವಿ ಪ್ರಮಾಣ ಪತ್ರಗಳನ್ನು ಮುದ್ರಿಸಿ ಮಾರುತ್ತಿದ್ದ ಜಾಲವನ್ನು ನಗರ ಸೈಬರ್, ಆರ್ಥಿಕ ಮತ್ತು ಮಾದಕವಸ್ತು ತಡೆ (ಸೆನ್) ಠಾಣೆ ಪೊಲೀಸರು ಭೇದಿಸಿದ್ದು, ಒಬ್ಬ ಆರೋಪಿಯನ್ನು ಬಂಧಿಸಿದ್ದಾರೆ.

‘2020ರಲ್ಲಿ ಸ್ಟೇಷನ್ ಬಜಾರ್ ಠಾಣೆಯಲ್ಲಿ ದಾಖಲಾಗಿದ್ದ ನಕಲಿ ಅಂಕಪಟ್ಟಿ ಪ್ರಕರಣದ ತನಿಖೆಯನ್ನು ಈಚೆಗೆ ಚುರುಕುಗೊಳಿಸಲಾಗಿತ್ತು. ಈ ಪ್ರಕರಣದಲ್ಲಿ ದೆಹಲಿ ಮೂಲದ ರಾಜೀವ್ ಸಿಂಗ್ ಅರೋರಾನನ್ನು ಪೊಲೀಸರು ಬಂಧಿಸಿದ್ದಾರೆ. ರಾಜ್ಯದ ದಾವಣಗೆರೆ, ಬೆಂಗಳೂರು, ಹುಬ್ಬಳ್ಳಿ, ಬಾಗಲಕೋಟೆ ಸೇರಿ ಹಲವೆಡೆ ನಕಲಿ ಅಂಕಪಟ್ಟಿ ಮತ್ತು ಪ್ರಮಾಣ ಪತ್ರ ಜಾಲ ವಿಸ್ತರಿಸಿಕೊಂಡಿದೆ’ ಎಂದು ಪೊಲೀಸ್ ಕಮಿಷನರ್ ಶರಣಪ್ಪ ಎಸ್‌.ಡಿ. ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಮೈಸೂರು ವಿಶ್ವವಿದ್ಯಾಲಯ, ರಾಜ್ಯ ಮುಕ್ತ ವಿವಿ, ಬೆಂಗಳೂರು ವಿವಿ ಸೇರಿ ದೇಶದ 28 ವಿವಿಗಳ ಹೆಸರಲ್ಲಿನ 522 ನಕಲಿ ಅಂಕಪಟ್ಟಿಗಳು, 1,626 ಖಾಲಿ ಅಂಕಪಟ್ಟಿಗಳು, 403 ಹಾಲೊಗ್ರಾಮ್‌, 122 ಸೀಲ್‌ಗಳು, 36 ಮೊಬೈಲ್‌ಗಳು (12 ಸ್ಮಾರ್ಟ್‌ ಫೋನ್, 24 ಕೀ ಪ್ಯಾಡ್‌), 13 ಸಿಮ್‌ ಕಾರ್ಡ್‌ಗಳು, ನಾನಾ ಬ್ಯಾಂಕ್‌ಗಳ 87 ಪಾಸ್‌ ಬುಕ್‌ಗಳು, ಆರೋಪಿಯ ವಿವಿಧ ಹೆಸರುಗಳ 123 ಗುರುತಿನ ಚೀಟಿಗಳು, ₹1.20 ಲಕ್ಷ ನಗದನ್ನು ಬಂಧಿತನಿಂದ ವಶಕ್ಕೆ ಪಡೆಯಲಾಗಿದೆ. ಆರೋಪಿಯು  ₹10 ಸಾವಿರದಿಂದ ₹50 ಸಾವಿರಕ್ಕೆ ನಕಲಿ ಅಂಕಪಟ್ಟಿಗಳನ್ನು ಮಾರುತ್ತಿದ್ದ’ ಎಂದು ಮಾಹಿತಿ ನೀಡಿದರು.

ADVERTISEMENT

‘ಎನ್‌ಸಿಆರ್ ಎಜುಕೇಶನ್ ಗ್ರೂಪ್ ಕಟ್ಟಿಕೊಂಡು, ದೆಹಲಿಯಲ್ಲಿ ಕಚೇರಿ ತೆರೆದು ಕಳೆದ ಏಳೆಂಟು ವರ್ಷಗಳಿಂದ ಮಧ್ಯವರ್ತಿಗಳ ಮೂಲಕ ನಕಲಿ ಅಂಕಪಟ್ಟಿಗಳ ಜಾಲ ನಡೆಸುತ್ತಿದ್ದ. ಸರ್ಕಾರಿ ನೌಕರಿಗಾಗಿ ನೀಡುವುದಿಲ್ಲ ಎಂದು ಕರಾರು ವಿಧಿಸುತ್ತಿದ್ದ ರಾಜೀವ್, ಕೇವಲ ಖಾಸಗಿ ಕೆಲಸ, ಮದುವೆ, ಶೈಕ್ಷಣಿಕ ಅರ್ಹತೆಗಾಗಿ ಪಿಯುಸಿಯಿಂದ ಪಿಎಚ್‌ಡಿವರೆಗೆ 26 ಕೋರ್ಸ್‌ಗಳಿಗೆ ನಕಲಿ ಅಂಕಪಟ್ಟಿ ಮತ್ತು ಪ್ರಮಾಣ ಪತ್ರಗಳನ್ನು ಕೊಡುತ್ತಿದ್ದ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.