ಕಲಬುರಗಿ: ‘ಅತಿವೃಷ್ಟಿಯಿಂದ ರೈತ ಸಂಕಷ್ಟಕ್ಕ ಸಿಲಕ್ಯಾನ್. ರೈತ ದೇಶದ ಬೆನ್ನೆಲುಬು ಅಂತಾರ. ಭೂಮಿ ತಾಯಿ ಆಣೆ ಮಾಡಿ ಹೇಳ್ತಿನಿ, ರೈತರ ಬೆನ್ನೆಲುಬು ಮುರದೈತಿ. ಹೋದ್ ವರ್ಷಕ್ಕಿಂತ ಈ ಸಲ ಪರಿಸ್ಥಿತಿ ಖರಾಬ್ ಐತಿ. ಹೋದ ಸಲಾ ರೂಪಾಯಿದಾಗ ಅರ್ಧ ಬೆಳಿ ಉಳಿದಿತ್ತು. ಈ ಸಲ ಬರೀ ಚಾರಾಣೆ ಉಳದೈತಿ. ರೈತ ಅನ್ಯಾಯವಾಗಿ ಸರ್ಕಾರದಿಂದ ದುಡ್ಡ ಇಸ್ಕೊಂಡು ತಿನ್ನಾತಾನ ಅಂತ ತಿಳಕೊಂಡ್ರೂ ಪರ್ವಾಗಿಲ್ಲ, ರೈತರಿಗೆ ಪರಿಹಾರ ಕೊಡ್ಲಿ...’
ನಗರದ ಎಪಿಎಂಸಿ ಯಾರ್ಡ್‌ನಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿಯಾದ ರೈತರೊಂದಿಗೆ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಜೊತೆಗೆ ಹಮ್ಮಿಕೊಂಡಿದ್ದ ಸಂವಾದದಲ್ಲಿ ಮುಗ್ಧ ರೈತರೊಬ್ಬರು ನೆರವು ಯಾಚಿಸಿದ ಪರಿಯಿದು.
ಅಲ್ಲಿ ನೆರೆದಿದ್ದ ರೈತರು ನಿಖಿಲ್ ಕುಮಾರಸ್ವಾಮಿ ಎದುರು ತಮ್ಮ ಸಂಕಷ್ಟ ತೋಡಿಕೊಂಡರು. ‘ವ್ಯಾಪಕ ಮಳೆಯಿಂದ ಶೇ 99ರಷ್ಟು ಬೆಳೆ ಹಾನಿಗೀಡಾಗಿ ಹೋಗಿದೆ. ಏನಾದರೂ ಮಾಡಿ ಸರ್ಕಾರದಿಂದ ಪರಿಹಾರ ಕೊಡಿಸಿ’ ಎಂದು ಭೀಮಳ್ಳಿ ಗ್ರಾಮದ ರೈತ ಶರಣಯ್ಯ ಕೋರಿದರು.
‘ಬೆಳೆ ಹಾನಿ ಸಮೀಕ್ಷೆಯಲ್ಲಿ ದೋಖಾ ನಡೆಯುತ್ತಿದೆ. ಕೇವಲ ಶೇ 15ರಿಂದ ಶೇ 20ರಷ್ಟು ಮಾತ್ರವೇ ಸಮೀಕ್ಷೆ ನಡೆಸಲಾಗುತ್ತಿದೆ. ನಿಖರವಾಗಿ ಸಮೀಕ್ಷೆ ನಡೆಸಿ, ಶೇ 100ರಷ್ಟು ಹಾನಿಗೆ ಪರಿಹಾರ ನೀಡಬೇಕು’ ಎಂದು ಆಳಂದ ತಾಲ್ಲೂಕಿನ ಶಿವರಾಜ ನೆಲ್ಲೂರು ಒತ್ತಾಯಿಸಿದರು.
‘ರೈತ ಹಾಕಿದ ಬೆಳೆ ಹಾಳಾಗಿ ಹೋಗಿದೆ. ಅನ್ನದಾತರು ಕಣ್ಣೀರಲ್ಲಿ ಕೈತೊಳೆಯುತ್ತಿದ್ದರೂ ಸರ್ಕಾರ ಕಣ್ತೆರೆದು ನೋಡಲು ಸಿದ್ಧವಿಲ್ಲ. ಹೀಗಾದರೆ ರೈತ ಬದುಕುವುದು ಹೇಗೆ?’ ಎಂದು ರೈತ ಮುಖಂಡ ದಶರಥ ಸಿಂಗ್ ಪ್ರಶ್ನಿಸಿದರು.
‘ಬೆಳೆ ವಿಮೆ ಮಧ್ಯವರ್ತಿಗಳ ಕಾಟ ಹೆಚ್ಚಾಗಿದ್ದು, ರೈತರನ್ನು ಯಾಮಾರಿಸಿ ವಿಮೆ ಕಂತು ಪಾವತಿಸಿ ಪರಿಹಾರ ಹಣ ದೋಚುತ್ತಿದ್ದಾರೆ. ಅದನ್ನು ಸರ್ಕಾರ ತಡೆಯಬೇಕು’ ಎಂದು ರೈತ ಶಂಕರಗೌಡ ಹಿರೇಗೌಡ ಒತ್ತಾಯಿಸಿದರು. ಇನ್ನೂ ಹಲವು ರೈತರು ಮಾತನಾಡಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಬಾಲರಾಜ ಗುತ್ತೇದಾರ, ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ, ಕೆಕೆಸಿಸಿಐ ಮಾಜಿ ಅಧ್ಯಕ್ಷ ಶಶಿಕಾಂತ ಪಾಟೀಲ, ವೆಂಕಟಪ್ಪ ನಾಯಕ, ಶಿವಕುಮಾರ ನಾಟೀಕರ, ಕೃಷ್ಣಾರೆಡ್ಡಿ ಹಾಗೂ ಹಲವು ರೈತರು ಪಾಲ್ಗೊಂಡಿದ್ದರು.
ಸನ್ಮಾನ, ಅದ್ದೂರಿ ಸ್ವಾಗತ!: ರೈತ ಸಂಕಷ್ಟ ಆಲಿಸಲು ಬಂದ ನಿಖಿಲ್ ಕುಮಾರಸ್ವಾಮಿ ಅವರನ್ನು ಬ್ಯಾಂಡ್ ಬಾರಿಸಿ ಸ್ವಾಗತಿಸಲಾಯಿತು. ಸಂಕಷ್ಟ ಆಲಿಸುವ ಸಂದರ್ಭದಲ್ಲೂ ಸನ್ಮಾನಿಸುವ ನೋಟ ಕಂಡು ಬಂತು.
1972ರಲ್ಲಿ ತೀವ್ರ ಬರದಿಂದ ಜಿಲ್ಲೆಯ ರೈತರು ಹಾನಿ ಅನುಭವಿಸಿದ್ದರು. ಈಗ 2025ರಲ್ಲಿ ಅತಿವೃಷ್ಟಿಯಿಂದ ಅದಕ್ಕೂ ಹೆಚ್ಚಿನ ಹಾನಿಯಾಗಿದೆ. ಬರೀ ರೈತರಲ್ಲ ಕಾಳಿನ ವ್ಯಾಪಾರಿಗಳು ಅದನ್ನು ತುಂಬುವ ಹಮಾಲರೂ ಸಂಕಷ್ಟಕ್ಕೀಡಾಗಿದ್ದಾರೆಬಸವರಾಜ ತಡಕಲ್ ಜೆಡಿಎಸ್ ಕೋರ್ ಕಮಿಟಿ ಸದಸ್ಯ
ರಸ್ತೆಯಿಂದ ನೋಡಿದರೆ ಶೇ 25ರಷ್ಟು ಬೆಳೆ ಹಾನಿ ಕಾಣಿಸುತ್ತಿದೆ. ಹೊಲದಲ್ಲಿ ಇಳಿದರೆ ಶೇ 60ರಷ್ಟು ನಷ್ಟ ಗೋಚರಿಸುತ್ತಿದೆ. ರೈತರ ಸರಣಿ ಆತ್ಮಹತ್ಯೆ ಸಂಭವಿಸುವ ಮುನ್ನ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಿಸಬೇಕುಸಂತೋಷ ಲಂಗರ್ ಎಪಿಎಂಸಿ ವರ್ತಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.