
ಆಳಂದ: ಪಟ್ಟಣದಲ್ಲಿ ಗುರುವಾರ ಭಾರತೀಯ ಜನತಾ ಪಕ್ಷದ ತಾಲ್ಲೂಕು ಘಟಕದ ನೇತೃತ್ವದಲ್ಲಿ ಬಸ್ ನಿಲ್ದಾಣದ ಮುಂದೆ ಪ್ರತಿಭಟನೆ ನಡೆಸಿ ಮುಂಗಾರು ಮಳೆಯಿಂದಾಗಿ ನಷ್ಟಕ್ಕೊಳಗಾದ ರೈತರ ಬೆಳೆಗೆ ಕೂಡಲೇ ಪರಿಹಾರ ಬಿಡುಗಡೆಗೊಳಿಸಬೇಕೆಂದು ಬಿಜೆಪಿ ಮುಖಂಡರು ಆಗ್ರಹಪಡಿಸಿದರು.
ಈ ವೇಳೆ ಮಾಜಿ ಶಾಸಕ ಸುಭಾಷ ಆರ್.ಗುತ್ತೇದಾರ ಮಾತನಾಡಿ, ‘ಸತತ ಮಳೆಯಿಂದಾಗಿ ರೈತರ ಉದ್ದು, ಹೆಸರು ಹಾಗೂ ತೊಗರಿ ಬೆಳೆ ಹಾಳಾಗಿದ್ದು, ಇದರಿಂದಾಗಿ ರೈತರೂ ಸಂಕಷ್ಟದಲ್ಲಿದ್ದಾರೆ. ಬೆಳೆ ಸಮೀಕ್ಷೆ ಕೈಗೊಂಡ ನಂತರವು ರಾಜ್ಯ ಸರ್ಕಾರ ಇನ್ನೂ ಬೆಳೆ ಹಾನಿ ಪರಿಹಾರ ನೀಡುತ್ತಿಲ್ಲ‘ ಎಂದು ಆಪಾದಿಸಿದರು.
ಸೇಡಂ ಮಾಜಿ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ಮಾತನಾಡಿ, ‘ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಈ ನಾಡಿನ ರೈತರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಬರದ ಸಂದರ್ಭದಲ್ಲಿ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿಲ್ಲ. ಅತಿವೃಷ್ಟಿ ಸಂದರ್ಭದಲ್ಲೂ ತಲೆ ಕೆಡಿಸಿಕೊಂಡಿಲ್ಲ, ಕಬ್ಬು ಬೆಳೆಗಾರರು ನಿರಂತರ ಹೋರಾಟ ಮಾಡಿದರೂ ಸ್ಪಂದಿಸಿಲ್ಲ. ಈಗ ಮೆಕ್ಕೆಜೋಳ ಬೆಳೆಯುವ ರೈತರೂ ಸಂಕಷ್ಟದಲ್ಲಿದ್ದಾರೆ. ಸರ್ಕಾರ ಇನ್ನೂ ಖರೀದಿ ಕೇಂದ್ರಗಳನ್ನು ಪ್ರಾರಂಭಿಸಿಲ್ಲ’ ಎಂದು ವಾಗ್ದಾಳಿ ನಡೆಸಿದರು.
ಪ್ರತಿಭಟನೆ ನಂತರ ತಹಶೀಲ್ದಾರ್ ಮೂಲಕ ರಾಜ್ಯಪಾಲರಿಗೆ ಬರೆದ ಮನವಿ ಪತ್ರ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಅಶೋಕ ಬಗಲಿ, ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಕಂದಗೂಳೆ, ವೀರಣ್ಣಾ ಮಂಗಾಣೆ, ಅಣ್ಣಾರಾವ ಪಾಟೀಲ ಕವಲಗಾ, ಸಂತೋಷ ಹಾದಿಮನಿ, ಲಿಂಗರಾಜ ಬಿರಾದಾರ, ಬಸವರಾಜ ಬಿರಾದಾರ, ಚಂದ್ರಕಾಂತ ಭೂಸನೂರ, ಮಲ್ಲಿಕಾರ್ಜುನ ತಡಕಲ, ಪಂಡಿತರಾವ ಪಾಟೀಲ, ಆದಿನಾಥ ಹೀರಾ, ನಾಗರಾಜ ಶೇಗಜಿ, ಫಯ್ಯಾಜ್ ಪಟೇಲ, ಶರಣು ಸರಸಂಬಿ, ಸಂದೀಪ ನಾಯಕ ಸೇರಿದಂತೆ ನೂರಾರು ಬಿಜೆಪಿ ಕಾರ್ಯಕರ್ತರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.