ADVERTISEMENT

Karnataka Rains: ‘ಕಲ್ಯಾಣ’ದಲ್ಲಿ ಮುಂದುವರಿದ ವರುಣಾರ್ಭಟ

ಉಕ್ಕೇರಿ ಹರಿಯುತ್ತಿದೆ ಭೀಮಾನದಿ: ಕಲಬುರಗಿ ಜಿಲ್ಲೆಯ 36 ಗ್ರಾಮಗಳಲ್ಲಿ ಪ್ರವಾಹ ಸ್ಥಿತಿ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2025, 0:30 IST
Last Updated 27 ಸೆಪ್ಟೆಂಬರ್ 2025, 0:30 IST
ಕಲಬುರಗಿ ‌ಜಿಲ್ಲೆಯ ಗಾಣಗಾಪುರದಲ್ಲಿ ಪ್ರವಾಹದ ನೀರು‌ ಹೊಕ್ಕಿದ್ದ ಮನೆಗಳ‌ ನಿವಾಸಿಗಳು ಮನೆ ವಸ್ತುಗಳನ್ನು ಸುರಕ್ಷಿತ‌ ಸ್ಥಳಕ್ಕೆ ಸಾಗಿಸಿದರು  ಚಿತ್ರ: ತಾಜುದ್ದೀನ್ ಆಜಾದ್
ಕಲಬುರಗಿ ‌ಜಿಲ್ಲೆಯ ಗಾಣಗಾಪುರದಲ್ಲಿ ಪ್ರವಾಹದ ನೀರು‌ ಹೊಕ್ಕಿದ್ದ ಮನೆಗಳ‌ ನಿವಾಸಿಗಳು ಮನೆ ವಸ್ತುಗಳನ್ನು ಸುರಕ್ಷಿತ‌ ಸ್ಥಳಕ್ಕೆ ಸಾಗಿಸಿದರು  ಚಿತ್ರ: ತಾಜುದ್ದೀನ್ ಆಜಾದ್   

ಕಲಬುರಗಿ: ಜಿಲ್ಲೆ ಸೇರಿದಂತೆ ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಮಳೆ ಅಬ್ಬರ ಮುಂದುವರಿದಿದೆ. ಭೀಮಾನದಿ ಪಾತ್ರದ 36 ಗ್ರಾಮಗಳಲ್ಲಿ ಪ್ರವಾಹ ಸ್ಥಿತಿ ಏರ್ಪಟ್ಟಿದೆ.

ಮಹಾರಾಷ್ಟ್ರ ಅಣೆಕಟ್ಟೆಗಳಿಂದ 3.50 ಲಕ್ಷ ಕ್ಯೂಸೆಕ್‌ ನೀರು ಹೊರಬಿಡಲಾಗುತ್ತಿದ್ದು, ಭೀಮಾ ನದಿಯಲ್ಲಿ ಹರಿವಿನ ಮಟ್ಟ ಹೆಚ್ಚಿದೆ. 

ಜಿಲ್ಲೆಯಲ್ಲಿ ಗಂಭೀರ ಪ್ರವಾಹ ಸ್ಥಿತಿಯಿರುವ ಕಡೆ 12 ಕಾಳಜಿ ಕೇಂದ್ರ ತೆರೆಯಲಾಗಿದ್ದು, ಇಲ್ಲಿ 1,436 ಜನರು ಆಶ್ರಯ ಪಡೆದಿದ್ದಾರೆ. ರಕ್ಷಣಾ ಕಾರ್ಯಕ್ಕಾಗಿ 20 ಸಿಬ್ಬಂದಿಗಳ ಎನ್‌ಡಿಆರ್‌ಎಫ್‌ ತಂಡವನ್ನು ದೇವಲಗಾಣಗಾಪುರಲ್ಲಿ ನಿಯೋಜಿಸಲಾಗಿದೆ. 

ADVERTISEMENT

ಬಿರುಸು ಪಡೆದ ಮಳೆ: 

ಕಲಬುರಗಿ, ಯಾದಗಿರಿ, ಬೀದರ್‌, ರಾಯಚೂರು, ಕೊಪ್ಪಳ ಜಿಲ್ಲೆಗಳಲ್ಲಿ ಶುಕ್ರವಾರ ಮತ್ತೆ ಮಳೆ ಬಿರುಸು ಪಡೆದಿದೆ. ಕಲಬುರಗಿ ಜಿಲ್ಲೆಯ ವಿವಿಧೆಡೆ ಗುರುವಾರ ತಡರಾತ್ರಿ ಆರಂಭವಾಗಿದ್ದು, ಶುಕ್ರವಾರ ದಿನವಿಡೀ ಸುರಿಯಿತು. ಜನಜೀವನ ಅಸ್ತವ್ಯಸ್ತಗೊಂಡಿತ್ತು.

ಕರ್ನಾಟಕ–ತೆಲಂಗಾಣ ಗಡಿಯಲ್ಲಿ ಹಳ್ಳದಲ್ಲಿ ಪ್ರವಾಹ ಸ್ಥಿತಿ ಇದ್ದು, ಚಿಂಚೋಳಿ ತಾಲ್ಲೂಕಿನ ಮಿರಿಯಾಣ ಮತ್ತು ತೆಲಂಗಾಣದ ಕೊತಲಾಪುರ ಗ್ರಾಮದ ನಡುವೆ ರಾಷ್ಟ್ರೀಯ ಹೆದ್ದಾರಿ–167 ಶುಕ್ರವಾರ ಸಂಜೆಯಿಂದ ತಡರಾತ್ರಿ ತನಕ ಜಲಾವೃತಗೊಂಡಿತ್ತು.

ಕೊಚ್ಚಿಹೋದ ರಸ್ತೆ:

ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲ್ಲೂಕಿನ ಹಂಚಿನಾಳ ಗ್ರಾಮದಲ್ಲಿನ ಶೀಲಹಳ್ಳಿ ರಸ್ತೆ ಕೊಚ್ಚಿಹೋಗಿದೆ. ಬಂಡೆಭಾವಿ ಗ್ರಾಮದ ಹಳ್ಳ ತುಂಬಿ ಹರಿದು ರಸ್ತೆ ಸಂಪರ್ಕ ಕಡಿತಗೊಂಡಿದೆ. ಗುರುಗುಂಟಾ ಹೋಬಳಿಯಲ್ಲಿ 35 ಮನೆಗಳು ಕುಸಿದಿವೆ.

4 ಕುರಿ ಸಾವು:

ಯಾದಗಿರಿ ತಾಲ್ಲೂಕಿನ ಸೌದಾಗರ್ ತಾಂಡಾದ ಮನೆ, ದನದ ಕೊಟ್ಟಿಗೆಗಳಿಗೆ ಮಳೆಯ ನೀರು ನುಗ್ಗಿದೆ. ಹುಣಸಗಿಯಲ್ಲಿ ಗೋಡೆ ಬಿದ್ದು ನಾಲ್ಕು ಕುರಿಗಳು ಮೃತಪಟ್ಟಿವೆ. ಕೆಂಭಾವಿಯಲ್ಲಿ ಮಳೆಗೆ ಮೂರು ಮನೆಗಳ ಗೋಡೆ ಬಿದ್ದಿವೆ. ಮನೆಗಳಲ್ಲಿ ದವಸ ಧಾನ್ಯಗಳು ತೊಯ್ದಿವೆ. 

ಮಹಾರಾಷ್ಟ್ರದಿಂದ ಹೆಚ್ಚಿನ ಪ್ರಮಾಣ ನೀರು ಭೀಮಾ ನದಿಗೆ ಹರಿದು ಬರುತ್ತಿದ್ದು, ಸನ್ನತಿ ಬ್ಯಾರೇಜ್‌ನಿಂದ 4 ಲಕ್ಷ ಕ್ಯೂಸೆಕ್ ನೀರು ನದಿ ಪಾತ್ರಕ್ಕೆ ಹರಿಸುವ ಸಾಧ್ಯತೆಗಳಿವೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ರಮೇಶ ಕೋಲಾರ ತಿಳಿಸಿದ್ದಾರೆ.

ಕೊಪ್ಪಳ ಜಿಲ್ಲೆಯಲ್ಲಿ ಸಾಧಾರಣ ಮಳೆ ಸುರಿದಿದೆ. ಬೀದರ್‌ ಜಿಲ್ಲೆಯ ವಿವಿಧೆಡೆ ದಿನವಿಡೀ ಜಿಟಿಜಿಟಿ ಮಳೆಯಾಗಿದೆ. ಮಾಂಜ್ರಾ ನದಿಯಲ್ಲಿ ಪ್ರವಾಹ ಸ್ಥಿತಿ ಮುಂದುವರಿದಿದೆ.

ಕಲಬುರಗಿ ‌ಜಿಲ್ಲೆಯ ಅಫಜಲಪುರ ‌ತಾಲ್ಲೂಕಿನ ಗಾಣಗಾಪುರದಲ್ಲಿ ಶುಕ್ರವಾರ ಭೀಮಾನದಿ ಪ್ರವಾಹದಿಂದಾಗಿ ರಸ್ತೆ ಕಟ್ಟಡಗಳು ಜಲಾವೃತಗೊಂಡಿವೆ  ಪ್ರಜಾವಾಣಿ ಚಿತ್ರ: ತಾಜುದ್ದೀನ್‌ ಆಜಾದ್‌
ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲ್ಲೂಕಿನ ದಂಡೋತಿ ಗ್ರಾಮದ ರಸ್ತೆಯ ಮೇಲೆ ಶುಕ್ರವಾರ ಸುರಿದ ಮಳೆಯ ನೀರು ಪ್ರವಾಹದಂತೆ ಹರಿದು ಜನರು ತೊಂದರೆ ಅನುಭವಿಸಿದರು

ವಿಜಯಪುರ: ಜನಜೀವನ ಅಸ್ತವ್ಯಸ್ತ

ವಿಜಯಪುರ: ಜಿಲ್ಲೆಯಾದ್ಯಂತ  ಶುಕ್ರವಾರ ದಿನವಿಡೀ ಬಿಡುವು ನೀಡದೇ ಮಳೆ ಸುರಿದು ಜನಜೀವನ ಅಸ್ತವ್ಯಸ್ತವಾಯಿತು. ಸೀನಾ ನದಿ ಪ್ರವಾಹದ ನೀರು ತಗ್ಗಿದ್ದರಿಂದ ವಿಜಯಪುರ-ಸೋಲಾಪುರ ಹೆದ್ದಾರಿಯಲ್ಲಿ ವಾಹನಗಳ ಸಂಚಾರ ಶುಕ್ರವಾರ ಆರಂಭವಾಯಿತು. ಭೀಮಾ ನದಿ ತೀರದಲ್ಲಿ ಪ್ರವಾಹ ಹೆಚ್ಚುತ್ತಿದ್ದು, ಆಲಮೇಲ ತಾಲ್ಲೂಕಿನ ತಾರಾಪುರ ಗ್ರಾಮ ನಡುಗಡ್ಡೆಯಾಗಿ ಮಾರ್ಪಟ್ಟಿದೆ. ಪ್ರವಾಹದಲ್ಲಿ ಸಿಲುಕಿದ 50ಕ್ಕೂ ಹೆಚ್ಚು ಜನರನ್ನು ಸಮೀಪದ ಪುನರ್ ವಸತಿ ಕೇಂದ್ರದ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಯಿತು.  

ನದಿ ತೀರದ ಗ್ರಾಮಗಳಾದ ದೇವಣಗಾಂವ, ತಾವರಖೇಡ, ಬ್ಯಾಡಗಿಹಾಳ, ಕುಮಸಗಿ, ಶೇಂಬೆವಾಡ, ಕಡ್ಲೆವಾಡ, ಶಿರಸಗಿ ಗ್ರಾಮಗಳ ಕೆಲ ಮನೆಗಳಿಗೆ ನೀರು ಸುತ್ತುವರೆದು ಜಲಾವೃತಗೊಂಡಿದೆ. ಆಲಮೇಲ ತಾಲ್ಲೂಕಿನ ದೇವಣಗಾಂವ ಸಮೀಪದ ಸೊನ್ನ ಬ್ಯಾರೇಜ್‌ನಿಂದ ಗುರುವಾರ 3.55 ಲಕ್ಷ ಕ್ಯೂಸೆಕ್‌ ನೀರು ಹೊರ ಬಿಡಲಾಗಿದೆ. 

ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ಮಿರಿಯಾಣ ಗ್ರಾಮ ಮತ್ತು ತೆಲಂಗಾಣದ ರಾಜ್ಯದ ಗ್ರಾಮದ ಕೊತಲಾಪುರ ಮಧ್ಯೆ ಸೇತುವೆ ಹಳ್ಳದ ಪ್ರವಾಹದಿಂದ ಶುಕ್ರವಾರ ಜಲಾವೃತಗೊಂಡಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.