ಚಿಂಚೋಳಿ: ಪಟ್ಟಣದಲ್ಲಿ ಶುಕ್ರವಾರ ಬೆಳಿಗ್ಗಿನ ಜಾವ ದಟ್ಟ ಮಂಜು ಆವರಿಸಿದ್ದರಿಂದ ಅವಳಿ ಪಟ್ಟಣಗಳಾದ ಚಿಂಚೋಳಿ–ಚಂದಾಪುರಗಳು ಹೊಗೆಯಲ್ಲಿ ಮುಳುಗಿದಂತೆ ಗೋಚರಿಸಿದವು. ರಸ್ತೆಗಳು, ಕಟ್ಟಡಗಳು, ಗಿಡಮರಗಳು, ವಿದ್ಯುತ್ ಕಂಬಗಳು ಮುಸುಕಿದ ಮಂಜಿನಲ್ಲಿ ನಿಚ್ಚಳವಾಗಿ ಕಾಣಲಿಲ್ಲ.
ಉತ್ತಮ ಮಳೆಯಾದಾಗ ಜುಲೈ ಕೊನೆವಾರ ಅಥವಾ ಆಗಸ್ಟ್ ಮೊದಲ ವಾರ ಮತ್ತು ಅಕ್ಟೋಬರ್‌ನಲ್ಲಿ ಕಾಣಿಸುತ್ತಿದ್ದ ಮಂಜು ಪ್ರಸಕ್ತ ವರ್ಷ ಜೂನ್ 2ನೇ ವಾರದಲ್ಲಿಯೇ ಕಾಣಿಸಿಕೊಂಡಿದ್ದು, ಜನರಲ್ಲಿ ಅಚ್ಚರಿ ಮೂಡಿಸಿದೆ.
ತಾಲ್ಲೂಕಿನಲ್ಲಿ ಏಪ್ರಿಲ್ 2ನೇ ವಾರದಿಂದ ಈವರೆಗೆ ಉತ್ತಮ ಮಳೆಯಾಗಿದ್ದು, ಇದಕ್ಕೆ ಕಾರಣವಾಗಿರಬಹುದು. ಆದರೆ ಬೇಸಿಗೆ ಮುಗಿದ ಕೆಲವೇ ದಿನಗಳಲ್ಲಿ ಮಂಜು ಆವರಿಸಿದ್ದರಿಂದ ವಾಯು ವಿಹಾರಕ್ಕೆ ತೆರಳುವವರು ಮತ್ತು ಚೆಟ್ಟಿನಾಡ್, ಕಲಬುರಗಿ ಸಿಮೆಂಟ್ ಕಂಪನಿಗೆ ಕೆಲಸಕ್ಕೆ ತೆರಳುವವರು ಬೈಕ್, ಜೀಪ್‌ಗಳಿಗೆ ಲೈಟ್ ಹಾಕಿಕೊಂಡು ತೆರಳಬೇಕಾಯಿತು.
ಇಲ್ಲಿನ ಬಾಪೂರ ಮಹಿಬೂಬ ನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳು ಲೈಟ್‌ಆನ್ ಮಾಡಿಕೊಂಡು ಸಂಚರಿಸಿದವು. ಶುಕ್ರವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳಲ್ಲಿ ಕುಂಚಾವರಂ 90, ಚಿಂಚೋಳಿ 45, ಐನಾಪುರ 23, ಸುಲೇಪೇಟ 26, ಕೋಡ್ಲಿ 95, ಚಿಮ್ಮನಚೋಡ 12, ನಿಡಗುಂದಾ 3 ಮಿ.ಮೀ.ನಷ್ಟು ಮಳೆಯಾಗಿದೆ. ಬೆಳೆ ಹೂಬಾಡುವ ಹಂತದಲ್ಲಿ ಮಂಜು ಬಡಿದರೆ, ಹೂವು ಉದುರುತ್ತವೆ. ಆದರೆ ಈಗ ಮಂಜು ಆವರಿಸಿದ್ದರಿಂದ ಬೆಳೆಗಳಿಗೆ ಹಾನಿಯಿಲ್ಲ ಎಂದು ಕೃಷಿ ವಿಜ್ಞಾನ ಕೇಂದ್ರದ ತಜ್ಞ ಜಹೀರ್ ಅಹಮದ್ ಹೇಳಿದರು.
ಮಂಜಿನ ಬಗೆಗೆ ರೈತರು ಆತಂಕಗೊಳ್ಳುವ ಅಗತ್ಯವಿಲ್ಲ. ಆದರೆ ಕಬ್ಬು ಬೆಳೆಗಾರರು ಸುಳಿ ಭಾಗದ ಎಲೆಗಳನ್ನು ಗಮನಿಸಿ ತಿಳಿಹಳದಿ ಕಂಡು ಬಂದರೆ ಸಮಗ್ರ ರೋಗ ಮತ್ತು ಪೋಷಕಾಂಶ ನಿರ್ವಹಣೆಗೆ ಮುಂದಾಗಬೇಕುಜಹೀರ್ ಅಹಮದ್ ಸಸ್ಯ ರೋಗ ತಜ್ಞ ಕೆವಿಕೆ ಕಲಬುರಗಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.