ADVERTISEMENT

10 ಗ್ರಾಮಗಳನ್ನು ಸುತ್ತುವರಿದ ಭೀಮೆ: ಗಾಣಗಾಪುರ, ಚಿನಮಳ್ಳಿ ಸೇತುವೆ ಮುಳುಗಡೆ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2020, 5:21 IST
Last Updated 15 ಅಕ್ಟೋಬರ್ 2020, 5:21 IST
ಕಲಬುರ್ಗಿ ಜಿಲ್ಲೆ ವಾಡಿ ಬಳಿ ಭೀಮಾ ನದಿಯ ಪ್ರವಾಹಕ್ಕೆ ಕಡಬೂರು ಗ್ರಾಮ ಸಂಪೂರ್ಣ ಜಲಾವೃತವಾಗಿದೆ.
ಕಲಬುರ್ಗಿ ಜಿಲ್ಲೆ ವಾಡಿ ಬಳಿ ಭೀಮಾ ನದಿಯ ಪ್ರವಾಹಕ್ಕೆ ಕಡಬೂರು ಗ್ರಾಮ ಸಂಪೂರ್ಣ ಜಲಾವೃತವಾಗಿದೆ.   

ಕಲಬುರ್ಗಿ: ಮಹಾರಾಷ್ಟ್ರದ ಉಜನಿ, ವೀರ್ ಜಲಾಶಯಗಳಿಂದ ಭಾರಿ ಪ್ರಮಾಣದ ನೀರು ಭೀಮಾ ನದಿಗೆ ಹರಿದು ಬರುತ್ತಿರುವುದರಿಂದ ಜಿಲ್ಲೆಯ ನದಿ ಪಾತ್ರದ ಗ್ರಾಮಗಳ ಪರಿಸ್ಥಿತಿ ಇನ್ನಷ್ಟು ಗಂಭೀರಗೊಂಡಿದೆ.

ಈಗಾಗಲೇ ಕಾಗಿಣಾ, ಬೆಣ್ಣೆತೊರಾ ನೀರಿನಿಂದ ಕಾಳಗಿ ತಾಲ್ಲೂಕಿನ ಹೆಬ್ಬಾಳ ಮತ್ತು ಹಳೆ ಹೆಬ್ಬಾಳ ನಡುಗಡ್ಡೆಯಾಗಿ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ‌. ಕಳೆದ ರಾತ್ರಿಯಿಂದ ಇದುವರೆಗೂ ಮಹಾರಾಷ್ಟ್ರದಿಂದ ನೀರು ಹರಿದು ಬರುತ್ತಿರುವುದರಿಂದ ಭೀಮಾ ನದಿ, ಬೋರಿ ಹಳ್ಳ ಅಪಾಯದ ಮಟ್ಟಕ್ಕೆ‌ ತಲುಪಿವೆ.

ಅಫಜಲಪುರ ತಾಲ್ಲೂಕಿನ ದಿಕ್ಸಂಗಾ, ಜೇವರ್ಗಿ ಕೆ, ಜೇವರ್ಗಿ ಬಿ, ಕಲಬುರ್ಗಿ ತಾಲ್ಲೂಕಿನ ಹಾಗರಗುಂಡಗಿ, ಜೇವರ್ಗಿ ತಾಲ್ಲೂಕಿನ ಇಟಗಾ, ಚಿತ್ತಾಪುರ ತಾಲ್ಲೂಕಿನ ಕಡಬೂರು, ಬಳವಡಗಿ ಸೇರಿದಂತೆ ಹತ್ತಕ್ಕೂ ಹೆಚ್ಚಿನ ಗ್ರಾಮಗಳಿಗೆ ನೀರು ನುಗ್ಗಿದೆ.

ADVERTISEMENT

ಸೊನ್ನ ಬ್ಯಾರೇಜ್ ನಿಂದ 2.23. ಲಕ್ಷ ಕ್ಯುಸೆಕ್ ನೀರು ಹರಿ ಬಿಟ್ಟಿದ್ದರಿಂದ. ದೇವಲ ಗಾಣಗಾಪುರ, ಚಿನಮಳ್ಳಿ ಸೇತುವೆಗಳು ಮುಳುಗಿವೆ. ಘತ್ತರಗಿ ಬ್ಯಾರೇಜ್ ಸೇತುವೆ ಸಹ ಮುಳುಗಡೆ ಹಂತಕ್ಕೆ ಬಂದಿದೆ.

ಮುಳುಗಡೆ ಭೀತಿಯಲ್ಲಿ ಕಡಬೂರು ಗ್ರಾಮ

ವಾಡಿ ಸಮೀಪ ಭೀಮಾ ನದಿಯಲ್ಲಿ ನೀರಿನ ಪ್ರಮಾಣ ಸತತ ಏರಿಕೆಯಾಗಿದ್ದರಿಂದ‌ ಮನೆಗಳು ಸಂಪೂರ್ಣ ಮುಳುಗಿದ್ದು, ಜನರು ಭೀತಿಯಿಂದ ಮನೆಯ ಮಾಳಿಗೆ ಮೇಲೇರಿ ಕುಳಿತಿದ್ದಾರೆ. ಅನ್ನ ಆಹಾರಕ್ಕಾಗಿ ಪರದಾಡುತ್ತಿದ್ದಾರೆ.

ಒಂದೆಡೆ ಹಳ್ಳದ ನೀರು ರಭಸವಾಗಿ ಗ್ರಾಮ ಹೊಕ್ಕುತ್ತಿದ್ದರೆ, ಪಕ್ಕದಲ್ಲೇ ಹರಿಯುತ್ತಿರುವ ಭೀಮಾನದಿಯ ರಭಸ ಎದೆ ಝಲ್ಲೆನ್ನಿಸುತ್ತಿದೆ. ಅನ್ನ ಆಹಾರಕ್ಕಾಗಿ ಜನದಾಡುತ್ತಿದ್ದಾರೆ. ಕಾರು, ಎತ್ತಿನ ಬಂಡಿಗಳು ಮುಳುಗಡೆಯಾಗಿವೆ. ಸಹಾಯಕ್ಕಾಗಿ‌ ಜನರು ಅಂಗಲಾಚುತ್ತಿದ್ದಾರೆ. ಸಾಮಾನುಗಳು, ದವಸ ದಾನ್ಯಗಳು ಕೊಚ್ಚಿಹೋಗಿ ಬದುಕೇ ಬೀದಿಗೆ ಬಂದಿದೆ ಎಂದು ಸ್ಥಳೀಯರು ಗೋಳಿಡುತ್ತಿದ್ದಾರೆ.

ನಾಲವಾರ ವ್ಯಾಪ್ತಿಯ ಕೊಲ್ಲೂರು ಹಾಗೂ ವಾಡಿ ಸಮೀಪದ ಇಂಗಳಗಿ ಪರಿಸ್ಥಿತಿ ಸಹ ಇದಕ್ಕಿಂತ ಭಿನ್ನವಾಗಿಲ್ಲ.ಅಶೋಕನ ಕಾಲದ ಶಾಸನಗಳಿರುವಸನ್ನತಿ ಗ್ರಾಮದ ಸಂಪರ್ಕ ಕಡಿತಗೊಂಡಿದೆ. ಕೊಲ್ಲೂರು ಹೊರವಲಯದಲ್ಲಿ ಸುಮಾರು 15 ಅಡಿ ಎತ್ತರದಲ್ಲಿ ನಿರ್ಮಿಸಿದ ಸೇತುವೆ ಮುಳುಗಡೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.