ಚಿಂಚೋಳಿ ತಾಲ್ಲೂಕಿನ ಚಿಂದಾನೂರು ಬಾವಿತಾಂಡಾಕ್ಕೆ ವಿದ್ಯುತ್ ಸೌಲಭ್ಯ ಕಲ್ಪಿಸುವ ಕಾಮಗಾರಿ ಪೂರ್ಣಗೊಳಿಸಲಾಗಿದೆ
ಚಿಂಚೋಳಿ: ತಾಲ್ಲೂಕಿನ ಶಾದಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಂದಾನೂರು ಬಳಿಯ ಬಾವಿತಾಂಡಾವಾಸಿಗಳ ಕತ್ತಲ ಬದುಕಿಗೆ ಜೆಸ್ಕಾಂ ಕೊನೆಗೂ ಮುಕ್ತಿ ನೀಡಿದ್ದು, ಸ್ಥಳೀಯರಲ್ಲಿ ಬೆಳಕಿನ ನಗು ಚಿಮ್ಮಿಸಿದೆ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ಜಿಲ್ಲೆಯಲ್ಲಿಯೇ ಮೊದಲ ಬಾರಿಗೆ ಚಿಂಚೋಳಿಯಲ್ಲಿ 2023ರ ಸೆ.25ರಂದು ನಡೆಸಿದ ಜನಸ್ಪಂದನ ಸಭೆಯು ತಾಂಡಾವಾಸಿಗಳ ಬದುಕು ಚಿಗುರಿಸಿದೆ.
ತಾಂಡಾವಾಸಿಗಳು ಸಲ್ಲಿಸಿದ ಮನವಿ ಮೇರೆಗೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರ ನಿರ್ದೇಶನ ಹಾಗೂ ಶಾಸಕ ಡಾ. ಅವಿನಾಶ ಜಾಧವ ಅವರ ಪ್ರಯತ್ನದ ಫಲವಾಗಿ ತಾಂಡಾ ಜನರ ಬಹುದಿನಗಳ ಕನಸು ನನಸಾಗಿದೆ.
ಸುತ್ತಲೂ ಕಾಡಿರುವ ಕಾರಣ ಇಲ್ಲಿನ ಜನ ದಶಕಗಳಿಗೂ ಹೆಚ್ಚು ಕಾಲದಿಂದ ಕತ್ತಲಿನಲ್ಲಿಯೇ ಜೀವನ ಕಳೆಯುತ್ತಿದ್ದರು. ಸುಮಾರು 10–12 ಮನೆಗಳಿರುವ ತಾಂಡಾದಲ್ಲಿ 20 ಕುಟುಂಬಗಳು ವಾಸ ಮಾಡುತ್ತಿವೆ. ವಿದ್ಯುತ್ ಇಲ್ಲದ ಕಾರಣ ಕತ್ತಲಿನಲ್ಲಿ ದಿನ ದೂಡುತ್ತಿದ್ದರು. ವನ್ಯಜೀವಿಗಳು ಹಾಗೂ ವಿಷ ಜಂತುಗಳ ಕಾಟಾದಿಂದ ಕತ್ತಲಾದರೆ ಮಕ್ಕಳಿಗೆ ಹೊರಗಡೆಯೇ ಬಿಡುತ್ತಿರಲಿಲ್ಲ.
ಕುಂಚಾವರಂ 33 ಕೆವಿ ವಿದ್ಯುತ್ ಉಪ ಕೇಂದ್ರದಿಂದ ರಾಜ್ಯ ಹೆದ್ದಾರಿ 149 ಬದಿಯಿಂದ ತಾಂಡಾವರೆಗೆ ವಿದ್ಯುತ್ ಕಂಬ ಹಾಕಿ, ತಂತಿ ಎಳೆಯಲಾಗಿದ್ದು, ವಿದ್ಯುತ್ ಪರಿವರ್ತಕ ಕೂಡಿಸಿ ಅದನ್ನು ಚಾರ್ಜ್ ಮಾಡುವ ಕೆಲಸದಲ್ಲಿ ಜೆಸ್ಕಾಂ ಸಿಬ್ಬಂದಿ ನಿರತರಾಗಿದ್ದಾರೆ.
ಚಿಂದಾನೂರು ಜಿಲ್ವರ್ಷಾ ಕ್ರಾಸ್ ಮಧ್ಯೆ ಎಡ ಭಾಗದಲ್ಲಿ 500 ಮೀಟರ್ ಕ್ರಮಿಸಿದರೆ ಚಿಂದಾನೂರು ಬಾವಿತಾಂಡಾ ಸಿಗುತ್ತದೆ. ಇಲ್ಲಿ ಅಂಗನವಾಡಿ ಇಲ್ಲ. ಶಾಲೆಯೂ ಇಲ್ಲ. ಈ ಹಿಂದೆ ರೈತರ ಹೊಲಗಳಿಗೆ ಪೂರೈಕೆಯಾಗುತ್ತಿದ್ದ ವಿದ್ಯುತ್ ಒಂದು ಕಿ.ಮೀ ದೂರದಿಂದ ಕಟ್ಟಿಗೆ ಹೂಳಿ, ತಂತಿ ಮೂಲಕ ಬೆಳಕಿನ ವ್ಯವಸ್ಥೆ ಮಾಡಿಕೊಂಡಿದ್ದರು. ಇದು ದಿನದಲ್ಲಿ ಕೇವಲ 5/6 ಗಂಟೆ ಮಾತ್ರ ಇರುತ್ತಿತ್ತು. ಹೀಗಾಗಿ ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಶಾಶ್ವತ ವಿದ್ಯುತ್ ಸೌಲಭ್ಯಕ್ಕಾಗಿ ಕಾಯುತ್ತಿದ್ದರು.
ವನ್ಯಜೀವಿ ಧಾಮದ ವ್ಯಾಪ್ತಿಯಲ್ಲಿರುವುದರಿಂದ ಆಡಳಿತಾತ್ಮಕ ಅಡೆತಡೆ ನಿವಾರಿಸಿಕೊಂಡು ಅತ್ಯಾವಶ್ಯಕ ಸೌಲಭ್ಯ ಕಲ್ಪಿಸಿಕೊಡುವ ಮೂಲಕ ಜೆಸ್ಕಾಂ ಕುಗ್ರಾಮದ ಜನರ ಕೂಗಿಗೆ ಸ್ಪಂದಿಸಿದೆ.
ಜನಸ್ಪಂದನ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ವಿದ್ಯುತ್ ಸೌಲಭ್ಯ ಕಲ್ಪಿಸುವಂತೆ ಸೂಚನೆ ನೀಡಿದ್ದರಿಂದ ನಾವು ಆದ್ಯತೆ ಮೇರೆಗೆ ಚಿಂದಾನೂರು ಬಾವಿ ತಾಂಡಾಕ್ಕೆ ವಿದ್ಯುತ್ ಸೌಲಭ್ಯ ಕಲ್ಪಿಸಿದ್ದೇವೆ–ಪರಮೇಶ್ವರ ಬಿರಾದಾರ, ಕಾರ್ಯಪಾಲಕ ಎಂಜಿನಿಯರ್ ಸೇಡಂ
ಮಳೆಗಾಲದಲ್ಲಿ ಭಯವಾಗುತ್ತಿತ್ತು. ಪ್ರತಿದಿನ ಆತಂಕದಲ್ಲಿಯೇ ಕಾಲ ಕಳೆಯುತ್ತಿದ್ದೇವು. ವಿದ್ಯುತ್ ಸೌಲಭ್ಯ ಕಲ್ಪಿಸಿದ್ದಕ್ಕೆ ಖುಷಿಯಾಗಿದೆ. ಸಮಸ್ಯೆ ನಿವಾರಣೆಯಾಗಿದೆ.–ಸೀತಾಬಾಯಿ ಪವಾರ, ನಿವಾಸಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.