ಕಲಬುರಗಿಯ ಲೋಕೋಪಯೋಗಿ ಭವನದ ಎದುರು ಶುಕ್ರವಾರ ಜಿಲ್ಲಾ ಸರ್ಕಾರಿ ನೌಕರರ ಸಂಘದಿಂದ ಪ್ರತಿಭಟನೆ ನಡೆಯಿತು
ಕಲಬುರಗಿ: ಸರ್ಕಾರಿ ನೌಕರರಿಬ್ಬರ ಮುಖಕ್ಕೆ ಮಸಿ ಬಳಿದಿರುವುದನ್ನು ಖಂಡಿಸಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ನೇತೃತ್ವದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.
ನಗರದ ಎಂ.ಎಸ್.ಕೆ ಮಿಲ್ ಸಮೀಪದ ನೂತನವಾಗಿ ನಿರ್ಮಿಸಿರುವ ಕಣ್ಣಿ ಮಾರ್ಕೆಟ್ ನಾಮಫಲಕದ ವಿಚಾರವಾಗಿ ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಹಾಗೂ ಲೋಕೋಪಯೋಗಿ ಇಲಾಖೆಯ ಕಲಬುರಗಿ ವಿಭಾಗೀಯ ಅಧೀಕ್ಷಿಯ ಎಂಜಿನಿಯರ್ ಅವರಿಗೆ ಕರವೇ ಸಂಘಟನೆ ಕಾರ್ಯಕರ್ತರು ಮಸಿ ಬಳಿದಿದ್ದರು.
ನಗರದ ಲೋಕೋಪಯೋಗಿ ಭವನದ ಬಳಿ ಜಮಾಯಿಸಿದ ಲೋಕೋಪಯೋಗಿ ಇಲಾಖೆ ನೌಕರರು, ಕೈಗೆ ಕಪ್ಪು ಪಟ್ಟಿ ಕಟ್ಟಿಕೊಂಡು, ಮಸಿ ಬಳಿದವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದರು.
ಬಳಿಕ ಅಲ್ಲಿಂದ ಹೊರಟು ಹಳೇ ಜೇವರ್ಗಿ ರಸ್ತೆ, ಸರ್ದಾರ್ ಪಟೇಲ್ ವೃತ್ತದ ಮೂಲಕ ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರ ಕಚೇರಿ(ಕುಡಾ) ತಲುಪಿದರು. ಅಲ್ಲಿ ಕುಡಾ ನೌಕರರ ಸಂಘದ ಸದಸ್ಯರು ಈ ಮೆರವಣಿಗೆಗೆ ಜೊತೆಗೂಡಿದರು. ಬಳಿಕ ಮೆರವಣಿಗೆ ಜಿಲ್ಲಾಧಿಕಾರಿ ಕಚೇರಿ ತಲುಪಿತು.
ಈ ವೇಳೆ ಮಾತನಾಡಿದ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಬಳೂಂಡಗಿ, 'ಸರ್ಕಾರಿ ಅಧಿಕಾರಿಗಳಿಗೆ ಕಿಡಿಗೇಡಿಗಳು ಮಸಿ ಬಳಿದಿರುವುದು ಖಂಡನೀಯ. ಇತ್ತೀಚಿಗೆ ಸರ್ಕಾರಿ ಅಧಿಕಾರಿಗಳಿಗೆ ಮುಕ್ತವಾಗಿ ಕೆಲಸ ಮಾಡವ ವಾತಾವರಣವೇ ಇಲ್ಲದಂತಾಗಿದೆ. ಸಂಘಟನೆಗಳ ಹೆಸರು ಹೇಳಿಕೊಂಡು ಬರುವ ಕಿಡಿಗೇಡಿಗಳು ಅಧಿಕಾರಿಗಳನ್ನು ಬೆದರಿಸುವ ಕೆಲಸ ಮಾಡುತ್ತಿವೆ. ಇಂಥವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಸರ್ಕಾರಿ ನೌಕರರಿಗೆ ರಕ್ಷಣೆ ಒದಗಿಸಬೇಕು' ಎಂದು ಆಗ್ರಹಿಸಿದರು.
'ಜಿಲ್ಲೆಯಲ್ಲಿ ಅನೇಕ ನೌಕರರ ಮೇಲೆ ಒತ್ತಡ ಹಾಕುವ ಕೆಲಸ ನಡೆಯುತ್ತಿದೆ. ಮಾನಸಿಕ ಕಿರುಕುಳ, ವೈಯಕ್ತಿಕ ನಿಂದನೆ ಸಹಿಸಲು ಸಾಧ್ಯವಿಲ್ಲ' ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಳಿಕ ಜಿಲ್ಲಾಧಿಕಾರಿ ಕಚೇರಿ ಶಿಷ್ಟಾಚಾರ ತಹಶೀಲ್ದಾರ್ ಮನವಿ ಸ್ವೀಕರಿಸಲು ಬಂದರು. ಆದರೆ, ಜಿಲ್ಲಾಧಿಕಾರಿಯೇ ಬಂದು ಅಹವಾಲು ಆಲಿಸಬೇಕು ಎಂದು ಪ್ರತಿಭಟನಕಾರರು ಪಟ್ಟು ಹಿಡಿದರು.
ಅಂತಿಮವಾಗಿ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್, ನಗರ ಪೊಲೀಸ್ ಕಮಿಷನರ್ ಶರಣಪ್ಪ ಎಸ್.ಡಿ. ಮನವಿ ಸ್ವೀಕರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.