ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್ ಅವರು ಕಲಬುರಗಿಯಲ್ಲಿ ವಿಚಾರಣೆಗಾಗಿ ಪಕ್ಷದ ಮುಖಂಡರೊಂದಿಗೆ ಮೆರವಣಿಗೆಯಲ್ಲಿ ಬಂದರು
–ಪ್ರಜಾವಾಣಿ ಚಿತ್ರ
ಕಲಬುರಗಿ: ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ವಿರುದ್ಧ ಅವಹೇಳನಕಾರಿ ಹೇಳಿಕೆ ಹಾಗೂ ಸಚಿವ ಪ್ರಿಯಾಂಕ್ ಖರ್ಗೆಗೆ ಜಾತಿ ನಿಂದನೆ ಮಾಡಿದ ಪ್ರಕರಣದ ಆರೋಪಿ, ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್ ಅವರು ಇಲ್ಲಿನ ಕಲಬುರಗಿ ದಕ್ಷಿಣ ಸಹಾಯಕ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಸೋಮವಾರ ಐದು ಗಂಟೆ ವಿಚಾರಣೆಗೆ ಒಳಗಾದರು.
ಬಿಜೆಪಿ ಮುಖಂಡರೊಂದಿಗೆ ಮೆರವಣಿಗೆಯಲ್ಲಿ ಹೊರಟ ರವಿಕುಮಾರ್, ಬೆಳಿಗ್ಗೆ 11.40ಕ್ಕೆ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿನ ಆಯುಕ್ತರ ಕಚೇರಿಗೆ ಬಂದರು. ಸಂಜೆ 4.18ಕ್ಕೆ ಕಚೇರಿಯಿಂದ ಹೊರಬಂದರು. ತನಿಖಾಧಿಕಾರಿ ಎಸಿಪಿ ಶರಣಪ್ಪ ಸುಬೇದಾರ್ ಅವರು ವಿಚಾರಣೆ ನಡೆಸಿದರು.
‘ಭಾಷಣದಲ್ಲಿನ ಹೇಳಿಕೆಯ ನೈಜತೆ ತಿಳಿಯಲು ರವಿಕುಮಾರ್ ಅವರ ಧ್ವನಿ ಮಾದರಿಯನ್ನು ವಿಧಿ ವಿಜ್ಞಾನ
ಪ್ರಯೋಗಾಲಯಕ್ಕೆ ಕಳುಹಿಸಲಾಗುವುದು. ಆರೋಪಿಗೆ 30ಕ್ಕೂ ಹೆಚ್ಚು ಪ್ರಶ್ನೆಗಳನ್ನು ಕೇಳಲಾಗಿದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ರವಿಕುಮಾರ್, ‘ನನ್ನ ಭಾಷಣದಲ್ಲಿ ಉಸ್ತುವಾರಿ ಸಚಿವ, ಜಿಲ್ಲಾಧಿಕಾರಿಗಳಿಗೆ ಬೈದಿಲ್ಲ. ಅಟ್ರಾಸಿಟಿ ಪ್ರಕರಣಕ್ಕೆ ಅನ್ವಯ ಆಗುವಂತಹ ಪದಗಳನ್ನೂ ಬಳಸಿಲ್ಲ. ಪಾಕಿಸ್ತಾನದಲ್ಲಿನ ಅರಾಜಕತೆ, ಅವ್ಯವಸ್ಥೆ, ದುರಾಡಳಿತದ ಹಿನ್ನೆಲೆಯಲ್ಲಿ ಪಾಕ್ ಪದವನ್ನು ಬಳಸಿದ್ದಾಗಿ ವಿಚಾರಣೆಯಲ್ಲಿ ಉತ್ತರ ಕೊಟ್ಟಿದ್ದೇನೆ. ಅವಶ್ಯವಿದ್ದರೆ ಮತ್ತೆ ವಿಚಾರಣೆಗೆ ಬಂದು ಸಹಕಾರ ಕೊಡುತ್ತೇನೆ’ ಎಂದರು.
‘ಜಿಲ್ಲಾಧಿಕಾರಿಗೆ ಇನ್ನೂ ಕ್ಷಮಾಪಣೆ ಪತ್ರ ಬರೆದಿಲ್ಲ. ಅವರಿಗೆ ಕ್ಷಮಾಪಣೆ ಪತ್ರವನ್ನು ಬರೆಯುತ್ತೇನೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ನಿಯಮ ಉಲ್ಲಂಘನೆ: ‘ವಿಚಾರಣೆಗೆ ಒಬ್ಬರೇ ಬರುವಂತೆ ಹೈಕೋರ್ಟ್ ನಿರ್ದೇಶನ ನೀಡಿತ್ತು. ಆದರೆ, ಪಕ್ಷದ ಮುಖಂಡರೊಂದಿಗೆ ಘೋಷಣೆ ಕೂಗುತ್ತಾ ಮೆರವಣಿಗೆಯಲ್ಲಿ ಬಂದು, ನಿಯಮವನ್ನು ಉಲ್ಲಂಘಿಸಿ ವಿಚಾರಣೆಗೆ ಹಾಜರಾಗಿದ್ದಾರೆ. ಈ ಬಗ್ಗೆ ಸರ್ಕಾರಿ ವಕೀಲರ ಮೂಲಕ ಹೈಕೋರ್ಟ್ ಗಮನಕ್ಕೆ ತರಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.