
ಚಿಂಚೋಳಿ: ತಾಲ್ಲೂಕಿನ ಕುಂಚಾವರಂ ಸಮುದಾಯ ಆರೋಗ್ಯ ಕೇಂದ್ರದ ಸ್ತ್ರೀರೋಗ ತಜ್ಞೆ ವಿರುದ್ಧ ತನಿಖೆಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹಿರಿಯ ವೈದ್ಯಾಧಿಕಾರಿಗಳ ಸಮಿತಿ ರಚಿಸುವಂತೆ ತಾಲ್ಲೂಕು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಮಹಮದ್ ಗಫಾರ್ ಅವರಿಗೆ ಜಿ.ಪಂ ಸಿಇಒ ಭಂವರ್ ಸಿಂಗ್ ಮೀನಾ ಸೂಚಿಸಿದರು.
ಸ್ತ್ರೀರೋಗ ತಜ್ಞೆಯೊಬ್ಬರು ಜಹೀರಾಬಾದನಲ್ಲಿ ಆಸ್ಪತ್ರೆ ನಡೆಸುತ್ತಿದ್ದು, ಅವರ ಬಳಿ ಸ್ಕ್ಯಾನಿಂಗ್ ಸೇರಿದಂತೆ ಪರೀಕ್ಷೆಗಳನ್ನು ಮಾಡಿಸಿಕೊಂಡವರಿಗೆ ಮಾತ್ರ ಕುಂಚಾವರಂ ಸಿಎಚ್‌ಸಿಯಲ್ಲಿ ತಪಾಸಣೆ ನಡೆಸಿ ಔಷಧ ನೀಡುತ್ತಾರೆ. ಅವರ ಜಹೀರಾಬಾದನಲ್ಲಿರುವ ಕ್ಲಿನಿಕ್‌ಗೆ ಹೋಗದ ಗರ್ಭಿಣಿಯರಿಗೆ ಸಮರ್ಪಕವಾಗಿ ತಪಾಸಣೆ ನಡೆಸುವುದಿಲ್ಲ ಎಂದು ಮಾಧ್ಯಮಗಳಲ್ಲಿ ವರದಿಯಾಗಿರುವುದರ ಬಗ್ಗೆ ಸಿಇಒ ಅವರ ಗಮನ ಸೆಳೆದಾಗ ಅವರು ಟಿಎಚ್‌ಒಗೆ ಕರೆ ಮಾಡಿ ಸಮಿತಿ ರಚಿಸಿ ತನಿಖೆ ಕೈಗೊಂಡು ವರದಿ ಸಲ್ತಿಸುವಂತೆ ಸೂಚಿಸಿದರು.
ಈ ವೇಳೆ ಅವರು ಮಾತನಾಡಿ ‘ಅಕ್ಷರ ಆವಿಷ್ಕಾರ ಜಾರಿಯಲ್ಲಿದ್ದರೂ ಕೂಡ ಜಿಲ್ಲಾ ಪಂಚಾತಿಯಿಯ ಅನಿರ್ಬಂಧಿತ ಅನುದಾನದಲ್ಲಿ ಶೇ 35ರಷ್ಟು ಅನುದಾನ ನೀಡಿದ್ದೇವೆ. ಅದರಲ್ಲಿ ಆರೋಗ್ಯ ಕ್ಷೇತ್ರಕ್ಕೂ ನೀಡಲಾಗಿದೆ. ಅಲ್ಲದೇ ನೆಲದ ಮೇಲೆ ಕೂತು ಊಟು ಮಾಡುವುದು ತಪ್ಪಿಸಲು ₹35 ಲಕ್ಷ ಅನುದಾನದಲ್ಲಿ ಜಮಖಾನೆ ಖರೀದಿಸಿ ಶಾಲೆಗಳಿಗೆ ನೀಡಿದ್ದೇವೆ. ಪ್ರಸಕ್ತ ವರ್ಷ ₹40 ಲಕ್ಷ ಇದಕ್ಕಾಗಿ ಅನುದಾನ ಮೀಸಲಿಡಲಾಗಿದೆ’ ಎಂದರು.
ಅಲ್ಲದೇ, ಚಿಂಚೋಳಿಯಲ್ಲಿ ತಾ.ಪಂ ಕಚೇರಿಗೆ ಮಂಗಳವಾರ ಭೇಟಿ ನೀಡಿದ ಭಂವರ್ ಸಿಂಗ್ ಮೀನಾ ಅವರು ಕಟ್ಟಡ ಪರಿಶೀಲಿಸಿ ಎಂಜಿನಿಯರ್ ಜತೆ ಚರ್ಚಿಸಿದರು.
‘2024-25ನೇ ಸಾಲಿನಲ್ಲಿ ತಾ.ಪಂ ಕಟ್ಟಡದ ದುರಸ್ತಿ ಕಾರ್ಯವನ್ನು ₹15 ಲಕ್ಷ ಅನುದಾನದಲ್ಲಿ ಕೈಗೊಳ್ಳಲಾಗಿದೆ. ಈಗ ಮತ್ತೆ ₹10 ಲಕ್ಷ ಅನುದಾನ ನೀಡುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದಾಗಲೂ ಎಂಜಿನಿಯರ್ ಅವರು ತೃಪ್ತಿಕರ ಉತ್ತರ ನೀಡಲಿಲ್ಲ. ತಾಲ್ಲೂಕಿನಲ್ಲಿ ವಸತಿ ನಿಲಯಗಳು, ಸರ್ಕಾರಿ ಪ್ರಾಥಮಿಕ ಶಾಲೆಗಳು ಅವ್ಯವಸ್ಥೆಯಿಂದ ಕೂಡಿದೆ. ಅಕ್ಷರ ಅವಿಷ್ಕಾರದಡಿ ಶಾಲೆಗಳ ದುರಸ್ತಿ ಹೆಸರಲ್ಲಿ ಸಾಕಷ್ಟು ಅವ್ಯವಹಾರ ನಡೆದಿದೆ. ಎಲ್ಲಿಯೂ ಸಮರ್ಪಕ ಕೆಲಸ ಮಾಡಿಲ್ಲ ಎಂದು ದೂರುಗಳು ಕೇಳಿ ಬಂದಿದೆ ಎಂದಾಗ, ಪರಿಶೀಲಿಸುತ್ತೇನೆ ಎಂದು ಹೇಳಿದರು.
ಕರ್ನಾಟಕ ಹೆಲ್ತ್ ಪ್ರಮೋಷನ್ ಟ್ರಸ್ಟ್ 3 ವರ್ಷದೊಳಗಿನ ಮಕ್ಕಳು ಹಾಗೂ ಕಿಶೋರಿಯರು, ಬಾಣಂತಿಯರಿಗಾಗಿ ಅಪೌಷ್ಟಿಕತೆ ನಿವಾರಣೆಗೆ ಶಕ್ತಿವಿಟಾ ಪೌಷ್ಟಿಕಾಹಾರ ತಯಾರಿಕಾ ಘಟಕ ಮುಚ್ಚಿರುವುದನ್ನು ಪರಿಶೀಲಿಸಿದ ಸಿಇಒ; ಸಂಯೋಜಕರಾದ ಶಿವಯೋಗಿ ಮಠಪತಿ ಅವರಿಂದ ಮಾಹಿತಿ ಪಡೆದರು.
ತಾ.ಪಂ ಇಒ ಸಂತೋಷ ಚವ್ಹಾಣ, ಪಂಚಾಯತ ರಾಜ್ ಎಇಇ ಪ್ರವೀಣಕುಮಾರ, ಸಚಿನ ಕಮಲಾಕರ, ಐನೋಳ್ಳಿಯ ಅಲ್ಲಾಹುದ್ದಿನ್ ಅನ್ಸಾರಿ ಇದ್ದರು.
ಚಿಂಚೋಳಿ ತಾಲ್ಲೂಕಿಗೆ ಜಿಪಂ ಸಿಇಒ ಭೇಟಿ ಕೆಎಚ್‌ಪಿಟಿಯ ಪೌಷ್ಠಿಕಾಹಾರ ತಯಾರಿಕಾ ಘಟಕ ಪರಿಶೀಲನೆ ತಾ.ಪಂ. ಕಟ್ಟಡ ದುರಸ್ತಿಗೆ ಮತ್ತೆ ಅನುದಾನ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.