ADVERTISEMENT

ಊಟ ಕೇಳಿದ ವಿದ್ಯಾರ್ಥಿಗಳ ಮೇಲೆ ಹಲ್ಲೆ

ಗಡಿಕೇಶ್ವಾರದ ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್‌ನಲ್ಲಿ ಘಟನೆ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2019, 14:50 IST
Last Updated 5 ಡಿಸೆಂಬರ್ 2019, 14:50 IST
ಚಿಂಚೋಳಿ ತಾಲ್ಲೂಕು ಗಡಿಕೇಶ್ವಾರ ಗ್ರಾಮದ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯಕ್ಕೆ ಭೇಟಿ ನೀಡಿದ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯ ಅಧೀಕ್ಷಕಿ ಜನ್ನತಬಿ ಬಡಿಗೇರ ಮಕ್ಕಳ ಮನವಿ ಆಲಿಸಿದರು
ಚಿಂಚೋಳಿ ತಾಲ್ಲೂಕು ಗಡಿಕೇಶ್ವಾರ ಗ್ರಾಮದ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯಕ್ಕೆ ಭೇಟಿ ನೀಡಿದ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯ ಅಧೀಕ್ಷಕಿ ಜನ್ನತಬಿ ಬಡಿಗೇರ ಮಕ್ಕಳ ಮನವಿ ಆಲಿಸಿದರು   

ಚಿಂಚೋಳಿ: ಊಟ ಕೇಳಿದ ವಸತಿ ನಿಲಯದ ವಿದ್ಯಾರ್ಥಿಗಳ ಮೇಲೆ ವಾರ್ಡನ್‌ ಕಡೆಯವರು ಎನ್ನಲಾದ ಇಬ್ಬರು ಹಲ್ಲೆ ನಡೆಸಿದ ಘಟನೆ ತಾಲ್ಲೂಕಿನ ಗಡಿಕೇಶ್ವಾರದ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದಲ್ಲಿ ಗುರುವಾರ ನಡೆದಿದೆ. ಇದನ್ನು ಖಂಡಿಸಿ ವಿದ್ಯಾರ್ಥಿಗಳು ಗುರುವಾರ ದಿಢೀರ್ ಪ್ರತಿಭಟನೆ ನಡೆಸಿದರು.

‘ಬುಧವಾರ ಸಂಜೆ ಉಪಾಹಾರ ನೀಡಿಲ್ಲ, ರಾತ್ರಿ ಊಟವನ್ನೂ ಕೊಡಲಿಲ್ಲ. ಕೇಳಿದರೆ ರೇಷನ್ ಇಲ್ಲ ಎಂದಿದ್ದಾರೆ. ರೇಷನ್ ಎಲ್ಲಿಗೆ ಹೋಯಿತು ಎಂದು ಪ್ರಶ್ನಿಸಿದ್ದಕ್ಕೆ ಗದರಿಸಿ ಕಳುಹಿಸಿದ್ದಾರೆ. ಗುರುವಾರ ಬೆಳಿಗ್ಗೆ ಇಬ್ಬರು ವ್ಯಕ್ತಿಗಳು ಬಂದು ನಮ್ಮನ್ನು ಕರೆಸಿ ಮನ ಬಂದಂತೆ ಥಳಿಸಿದ್ದಾರೆ, 7 ವಿದ್ಯಾರ್ಥಿಗಳಿಗೆ ಹೊಡೆದಿದ್ದಾರೆ’ ಎಂದು ವಿದ್ಯಾರ್ಥಿಗಳು ತಿಳಿಸಿದ್ದಾರೆ.

‘ವಸತಿ ನಿಲಯದಲ್ಲಿ ಮೆನು ಚಾರ್ಟ್ ಪಾಲಿಸುವುದಿಲ್ಲ. ಸರಿಯಾಗಿ ಊಟ, ಉಪಾಹಾರ ನೀಡುವುದಿಲ್ಲ. ಬಿಸಿ ನೀರಿನ ಸೌಲಭ್ಯವೂ ಇಲ್ಲ, ವಿದ್ಯಾರ್ಥಿಗಳನ್ನು ಎರಡನೆ ದರ್ಜೆ ನಾಗರಿಕರಂತೆ ಕಾಣಲಾಗುತ್ತಿದೆ’ ಎಂದು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಪ್ರಭುಲಿಂಗ ವಾಲಿ ಎದುರು ಅಳಲು ತೋಡಿಕೊಂಡರು.

ADVERTISEMENT

ಹಲ್ಲೆ ಮಾಡಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ವಿದ್ಯಾರ್ಥಿಗಳು ದಿಢೀರ್ ಪ್ರತಿಭಟನೆ ನಡೆಸಿದರು. ವಸತಿ ನಿಲಯದ ವಾರ್ಡನ್ ಬದಲಿಸಬೇಕು, ಅಡುಗೆ ಸಿಬ್ಬಂದಿ ಮೇಲೆ ಕ್ರಮ ಕೈಗೊಳ್ಳಬೇಕು ಹಾಗೂ ರಾತ್ರಿ ಕಾವಲುಗಾರರನ್ನು ನೇಮಿಸಬೇಕು ಎಂದು ವಿದ್ಯಾರ್ಥಿಗಳು ಒತ್ತಾಯಿಸಿದರು.

ಸ್ಥಳಕ್ಕೆ ಬಂದ ಸುಲೇಪೇಟ ಪಿಎಸ್‍ಐ ತಿಮ್ಮಯ್ಯ ಮಕ್ಕಳನ್ನು ಸಮಧಾನಪಡಿಸಿದರು. ವಿದ್ಯಾರ್ಥಿಗಳ ಬೇಡಿಕೆ ಈಡೇರಿಸಲು ಕ್ರಮ ಕೈಗೊಳ್ಳುವುದಾಗಿ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೆಶಕ ಪ್ರಭುಲಿಂಗ ವಾಲಿ ಭರವಸೆ ನೀಡಿದರು.

ಘಟನೆ ಬಗ್ಗೆ ಪ್ರಕರಣ ದಾಖಲಾಗಿಲ್ಲ. ಠಾಣೆಯಲ್ಲಿ ಮಾತುಕತೆ ಮೂಲಕ ಬಗೆಹರಿಸಲಾಗಿದೆ.

ಗ್ರಾಮದ ಮುಖಂಡರಾದ ನಾಗರಾಜ ಚಕ್ರವರ್ತಿ, ಗುಂಡಯ್ಯ ಗುತ್ತೇದಾರ, ಮಾಳಪ್ಪ ಅಪ್ಪೋಜಿ, ಬಸವರಾಜ ಗುಂಪಾಲ, ನವೀನ ಹಡಪದ, ವೀರೇಶ, ಅರುಣಕುಮಾರ ರಂಗನೂರ್, ಶ್ರೀಮಂತ ಶಬ್ಬಿರಮಿಯ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.