ADVERTISEMENT

ಪ್ರವಾಹ: ಕಾಗಿಣಾ ನದಿಯಲ್ಲಿ ಕೊಚ್ಚಿ ಹೋದ ಹೈದರಾಬಾದ್ ವ್ಯಕ್ತಿ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2022, 6:33 IST
Last Updated 9 ಆಗಸ್ಟ್ 2022, 6:33 IST
ಕಲಬುರಗಿ ಜಿಲ್ಲೆ ಚಿತ್ತಾಪುರ ಬಳಿಯ ಕಾಗಿಣಾ ನದಿಯಲ್ಲಿ ಕೊಚ್ಚಿಕೊಂಡು ಹೋದ ವ್ಯಕ್ತಿಗಾಗಿ ಹುಡುಕಾಟ ನಡೆಸಿರುವ ಎಸ್ ಡಿಆರ್ ಎಫ್ ಸಿಬ್ಬಂದಿ
ಕಲಬುರಗಿ ಜಿಲ್ಲೆ ಚಿತ್ತಾಪುರ ಬಳಿಯ ಕಾಗಿಣಾ ನದಿಯಲ್ಲಿ ಕೊಚ್ಚಿಕೊಂಡು ಹೋದ ವ್ಯಕ್ತಿಗಾಗಿ ಹುಡುಕಾಟ ನಡೆಸಿರುವ ಎಸ್ ಡಿಆರ್ ಎಫ್ ಸಿಬ್ಬಂದಿ   

ಚಿತ್ತಾಪುರ (ಕಲಬುರಗಿ ಜಿಲ್ಲೆ): ತಾಲ್ಲೂಕಿನ ಮುಡಬೂಳ ಗ್ರಾಮದ ಹತ್ತಿರ ಕಾಗಿಣಾ ನದಿಯಲ್ಲಿ ಬಿದ್ದು ಹೈದರಾಬಾದ್ ವ್ಯಕ್ತಿಯೋರ್ವ ಕೊಚ್ಚಿಕೊಂಡ ಹೋದ ಘಟನೆ ಮಂಗಳವಾರ ಬೆಳಕಿಗೆ ಬಂದಿದೆ.

ಶೇಖ್ ಅಹ್ಮದ್ ಶೇಖ್ ಮೆಹಬೂಬ್ (42) ಎಂಬ ವ್ಯಕ್ತಿಯೆ ಕಾಗಿಣಾ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ ಎಂದು ಅಗ್ನಿಶಾಮಕ ಠಾಣೆಯ ಮೂಲಗಳು ತಿಳಿಸಿವೆ.

ಮೊಹರಂ ಹಬ್ಬದ ನಿಮಿತ್ತ ಶೇಖ್ ಅಹ್ಮದ್ ಅವರು ಚಿತ್ತಾಪುರದಲ್ಲಿರುವ ಸಂಬಂಧಿಕರ ಮನೆಗೆ ಕುಟುಂಬ ಸಮೇತ ಬಂದಿದ್ದರು. ಅವರಿಗೆ ಪತ್ನಿ, ಆರು ಜನ ಮಕ್ಕಳಿದ್ದಾರೆ ಎಂದು ತಿಳಿದುಬಂದಿದೆ.

ADVERTISEMENT

ಶೇಖ್ ಅಹ್ಮದ್ ಮೀನು ಹಿಡಿಯಲೆಂದು ಸೋಮವಾರ ಚಿತ್ತಾಪುರದಿಂದ ಮುಡಬೂಳ ಹತ್ತಿರದ ಕಾಗಿಣಾ ನದಿಗೆ ತೆರಳಿದ್ದಾರೆ. ಆ ಸಮಯದಲ್ಲಿ ನದಿಗೆ ಜಾರಿ ಬಿದ್ದು ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ. ಸಾಯಂಕಾಲ ಸುದ್ದಿ ತಿಳಿದು ಘಟನಾ ಸ್ಥಳಕ್ಕೆ ಆಗಮಿಸಿದ ಚಿತ್ತಾಪುರ ಅಗ್ನಿಶಾಮಕ ಠಾಣೆಯ ಸಿಬ್ಬಂದಿ ಕಾರ್ಯಾಚರಣೆಗೆ ಸಿದ್ಧವಾಗುತ್ತಿದ್ದಂತೆ ಸೂರ್ಯಾಸ್ತವಾಗಿ ಕಾರ್ಯಾಚರಣೆ ನಡೆಸಲಾಗಲಿಲ್ಲ.

ಮಂಗಳವಾರ ಬೆಳಿಗ್ಗೆ ಕಲಬುರಗಿಯಿಂದ ಎಸ್‌ಡಿಆರ್‌ಎಫ್‌ ತಂಡದ ಅಧಿಕಾರಿ, ಸಿಬ್ಬಂದಿ ಸೇರಿ 14 ಜನ ಹಾಗೂ ಅಗ್ನಿಶಾಮಕ ಠಾಣೆಯ 5 ಜನ ಸಿಬ್ಬಂದಿ ಬೋಟ್ ಮೂಲಕ ಶೇಖ್ ಅಹ್ಮದ್ ಅವರಿಗಾಗಿ ಹುಡುಕಾಟ ಶುರು ಮಾಡಿದ್ದಾರೆ.

ಕಾಗಿಣಾ ನದಿಯಲ್ಲಿ ಪ್ರವಾಹ ಹೆಚ್ಚಾಗಿದೆ. ನೀರು ವೇಗವಾಗಿ ರಭಸದಿಂದ ಹರಿಯುತ್ತಿದೆ. ಇನ್ನೂ ಶೇಖ್ ಅಹ್ಮದ್ ಕುರಿತು ಯಾವುದೇ ಸುಳಿವು ಸಿಕ್ಕಿಲ್ಲ. ಶೋಧ ಕಾರ್ಯ ಮುಂದುವರೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.