
ಕಮಲಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಅಕ್ರಮವಾಗಿ ಕಟಾವು ಮಾಡಿದ ಮರದ ಬುಡ
ಕಮಲಾಪುರ: ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಅಕ್ರಮವಾಗಿ ತೇಗದ ಗಿಡ ಕಟಾವು ಮಾಡಿದ್ದು, ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿ ಆರಂಭಗೊಂಡಿದೆ. ಕಟ್ಟಡ ನಿರ್ಮಾಣಕ್ಕೆ ಅಡಚಣೆಯಾದ 21 ನೀಲಗಿರಿ ಗಿಡಗಳ ಕಟಾವಿಗೆ ಅರಣ್ಯ ಇಲಾಖೆ ಒಪ್ಪಿಗೆ ನೀಡಿತ್ತು. ಈ 21 ಗಿಡಗಳನ್ನು ಎರಡು ತಿಂಗಳ ಮುಂಚೆಯೇ ಕಟಾವು ಮಾಡಿಕೊಂಡು ತೆರಳಿದ್ದರು. ಕಟ್ಟಡಕ್ಕೆ ಅಡಚಣೆಯಾಗದ ಒಂದು ಸಾಗುವಾನಿ ಮರ, ಒಂದು ಹುಣಸೆ ಮರ ಬಾಕಿ ಉಳಿದಿದ್ದವು. ಇವುಗಳನ್ನು ಕಟಾವು ಮಾಡದಂತೆ ಆರೋಗ್ಯ ಇಲಾಖೆ ಸಹಾಯಕ ಎಂಜಿನಿಯರ್ ವಿಠಲ ಜಾಧವ್ ಅವರಿಗೆ ಅರಣ್ಯ ಇಲಾಖೆಯವರು ತಿಳಿಸಿದ್ದರು.
ಇಷ್ಟಾದರೂ ಕಳೆದ ನ.4ರಂದು ಸುಮಾರು ಒಂದುವರೆ ಮೀಟರ ಸುತ್ತಳತೆಯ ದಪ್ಪ, ಸುಮಾರು 25 ಅಡಿ ಎತ್ತರದ ಸಾಗುವಾನಿ(ತೇಗ) ಮರ ಹಾಗೂ ಒಂದು ಹುಣಸೆ ಮರ ಕಟಾವು ಮಾಡಿ ಕೊಂಡ್ಯೊಯ್ದಿದ್ದಾರೆ. ಸುಮಾರು ₹ 50 ಸಾವಿರ ಬೆಲೆ ಬಾಳು ಈ ಮರ ಅಕ್ರಮವಾಗಿ ಕೊಂಡ್ಯೊಯ್ದಿದ್ದಾರೆ ಎಂದು ಅರಣ್ಯ ಇಲಾಖೆ ಸಿಬ್ಬಂದಿ ಶರಣಗೌಡ ತಿಳಿಸಿದ್ದಾರೆ.
ನಾವು ಕಟಾವು ಮಾಡದಂತೆ ತಿಳಿಸಿದರು ಕಟಾವು ಮಾಡಲಾಗಿದೆ. ಈ ಅಕ್ರಮದಲ್ಲಿ ಭಾಗಿಯಾದವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಆರ್‌ಎಫ್‌ಓ ಗುರುರಾಜ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.