ಕಲಬುರಗಿ: ಮಳೆಯಾದರೆ ಕೆಸರು ಗದ್ದೆಯಂತಾಗುವ ಬಡಾವಣೆ, ಖಾಲಿ ನಿವೇಶನಗಳಲ್ಲಿ ತ್ಯಾಜ್ಯದ ರಾಶಿ, ವಿದ್ಯುತ್ ಕಂಬಗಳಿದ್ದರೂ ಉರಿಯದ ಲೈಟ್‌ಗಳು, ವಾರಗಳು ಕಳೆದರೂ ಕಸ ವಿಲೇವಾರಿಗೆ ಬಾರದ ಕಾರ್ಮಿಕರು. ಇದು ಕರುಣೇಶ್ವರ ನಗರದ ದುಃಸ್ಥಿತಿ.
ನ್ಯೂ ಜೇವರ್ಗಿ ರಸ್ತೆ ಮತ್ತು ರಿಂಗ್ ರೋಡ್‌ಗೆ ಹೊಂದಿಕೊಂಡಂತಿರುವ ಕರುಣೇಶ್ವರ ನಗರದ ನಿವಾಸಿಗಳು ಮೂಲಸೌಕರ್ಯಗಳ ಕೊರತೆಯಿಂದ ಕಂಗಾಲಾಗಿದ್ದಾರೆ. ಉದ್ಯಮಿಗಳು, ರಾಜಕೀಯ ನಾಯಕರು, ವೈದ್ಯರು, ಜನಪ್ರತಿನಿಧಿಗಳ ಸಂಬಂಧಿಕರೇ ಹೆಚ್ಚಾಗಿರುವ ಕರುಣೇಶ್ವರ ನಗರವು ಸಮಸ್ಯೆಗಳ ಆಗರವಾಗಿದೆ. ಎರಡು ವರ್ಷ ಕಳೆದರೂ ರಸ್ತೆಯ ಸಣ್ಣ ರಿಪೇರಿಯೂ ಆಗುತ್ತಿಲ್ಲ.
ಎಲ್ ಅಂಡ್ ಟಿ ಕಂಪನಿಯವರು 24X7 ಕುಡಿಯುವ ನೀರಿಗಾಗಿ ಚೆನ್ನಾಗಿ ಇದ್ದ ಕಾಂಕ್ರೀಟ್ ರಸ್ತೆಗಳನ್ನು ಅಗೆದು ಮಣ್ಣು ಮುಚ್ಚಿ ಹೋಗಿದ್ದಾರೆ. ಜತೆಗೆ ಚರಂಡಿಗಳಿಗೂ ಹಾನಿ ಮಾಡಿದ್ದರಿಂದ ಮಳೆಯ ನೀರು ಚರಂಡಿಗಳಿಗೆ ಸೇರದ ನಡು ರಸ್ತೆಯಲ್ಲಿ ಮೊಣಕಾಲುದ್ದ ನಿಲ್ಲುತ್ತಿದೆ. ಇದರಿಂದ ರಸ್ತೆ ಯಾವುದು, ಗುಂಡಿ ಯಾವುದು ಎಂಬುದು ತಿಳಿಯದೆ ಬೈಕ್ ಸವಾರರು ಬಿದ್ದು ಗಾಯಗೊಂಡಿದ್ದಾರೆ ಎನ್ನುತ್ತಾರೆ ಸ್ಥಳೀಯ ನಿವಾಸಿಗಳು.
‘ಹಾಳಾದ ರಸ್ತೆಗಳು ಕೆಸರು ಗದ್ದೆಗಳಂತಾಗಿ ಓಡಾಡಲು ಹರಸಾಹಸ ಮಾಡಬೇಕಿದೆ. ‘ಕುಡಾ’ ಮಾಜಿ ಅಧ್ಯಕ್ಷ ಅವಿನಾಶ ಕುಲಕರ್ಣಿ ಅವರ ಮನೆಯ ಮುಂದಿನ ರಸ್ತೆಯನ್ನು ಅಗೆದ ಎಲ್ ಆಂಡ್ ಟಿ ಕಂಪನಿಯರು, ಅದನ್ನು ಮಣ್ಣಿನ ರಸ್ತೆಯನ್ನಾಗಿ ಮಾರ್ಪಡಿಸಿದ್ದಾರೆ. ಸಣ್ಣ ಮಳೆ ಬಿದ್ದರೂ ಮಣ್ಣಿನಲ್ಲಿ ಕಾಲು ಸಿಲುಕಿಕೊಳ್ಳುತ್ತದೆ. ನಡು ರಸ್ತೆಯಲ್ಲಿ ಬಾಯಿ ತೆರೆದ ದೊಡ್ಡ ಪೈಪ್ ಅಪಾಯಕ್ಕೆ ಆಹ್ವಾನಿಸುತ್ತಿದೆ’ ಎನ್ನುತ್ತಾರೆ ನಿವಾಸಿ ವಿನುತ್ ಜೋಶಿ.
ಖಾಲಿ ನಿವೇಶನಗಳಲ್ಲಿ ಕಸದ ರಾಶಿ ಬಿದ್ದು, ಬೆಳೆದ ಗಿಡಗಂಟಿಗಳಿಂದ ವಿಷ ಜಂತುಗಳ ಅಪಾಯ, ಚರಂಡಿ ಮತ್ತು ಮಳೆ ನೀರು ಸರಾಗಿ ಹರಿದು ಹೋಗದೆ ರಸ್ತೆಯಲ್ಲಿ ನಿಂತು ಸಾಂಕ್ರಾಮಿಕ ರೋಗಗಳ ಬೀತಿ ಸ್ಥಳೀಯ ನಿವಾಸಿಗಳಲ್ಲಿ ಕಾಡುತ್ತಿದೆ. ವಾರ್ಡ್‌ನ ಪಾಲಿಕೆಯ ಸದಸ್ಯರ ಗಮನಕ್ಕೆ ತಂದರೂ ಏನೂ ಪ್ರಯೋಜನವಾಗಿಲ್ಲ. ‘ಪಾಲಿಕೆ ಬಳಿ ಅನುದಾನವಿಲ್ಲ. ನಾನು ಏನು ಮಾಡಲಿ’ ಎಂದು 55ನೇ ವಾರ್ಡ್ ಸದಸ್ಯೆ ನಮ್ಮನ್ನೇ ಪ್ರಶ್ನಿಸುತ್ತಾರೆ ಎನ್ನುತ್ತಾರೆ ನಿವಾಸಿಗಳು.
‘ಗಾಳಿ ಮಳೆಗೆ ಮನೆಯ ಮುಂದಿನ ಮರದ ಕೊಂಬೆ ಬಿದಿತ್ತು. ಪಾಲಿಕೆಗೆ ದೂರು ಕೊಟ್ಟರೂ ತಿರುಗಿಯೂ ನೋಡುವುದಿಲ್ಲ. ನಾವೇ ಖಾಸಗಿಯವರಿಗೆ ದುಡ್ಡು ಕೊಟ್ಟು ತೆರವುಗೊಳಿಸಿದ್ದೇವೆ. ಎಲ್ ಅಂಡ್ ಟಿ ಕಂಪನಿಯವರು ಚರಂಡಿಯ ಚೇಂಬರ್‌ಗೆ ಹಾನಿ ಮಾಡಿದ್ದರು. ಅದನ್ನೂ ನಾವೇ ದುರಸ್ತಿ ಮಾಡಿಕೊಂಡಿದ್ದೇವೆ. ಸ್ವಚ್ಛತಾ ಕಾರ್ಮಿಕರು ತಿಂಗಳಲ್ಲಿ ಎರಡ್ಮೂರು ಬಾರಿ ಮಾತ್ರ ಬರುತ್ತಾರೆ. ಕಂಬಗಳಲ್ಲಿನ ವಿದ್ಯುತ್ ದೀಪಗಳೂ ಉರಿಯುವುದಿಲ್ಲ. ಬಡಾವಣೆಯ ನಿವಾಸಿಗಳು ಪಾಲಿಕೆಯ ಸದಸ್ಯೆ ಮನೆಗೆ ಹೋಗಿ ನಮ್ಮ ಅಹವಾಲು ಸಲ್ಲಿಸಿದರೂ ಒಂದೂ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ’ ಎಂದು ಹೇಳುತ್ತಾರೆ ನಿವಾಸಿ ಮಂಜುಳಾ ಪಾಟೀಲ.
ಕಲಬುರಗಿಯ ಕರುಣೇಶ್ವರ ನಗರದಲ್ಲಿನ ಕೆಸರುಮಯವಾದ ರಸ್ತೆಯಲ್ಲಿ ಸಾಗಿದ ನಿವಾಸಿ
ಕರುಣೇಶ್ವರ ನಗರದಲ್ಲಿನ ಸಮಸ್ಯೆಗಳು ನನ್ನ ಗಮನಕ್ಕೆ ಬಂದಿವೆ. ಪಾಲಿಕೆಯಲ್ಲಿ ಅನುದಾನ ಇಲ್ಲ. ಹೀಗಾಗಿ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆಯಾಗಿದೆಅರ್ಚನಾ ಬಸವರಾಜಮಹಾನಗರ ಪಾಲಿಕೆ 55ನೇ ವಾರ್ಡ್‌ನ ಸದಸ್ಯೆ ಜೈ ವೀರ್ ಹನುಮಾನ್ ಮಂದಿರ
ಕೆಇಬಿ ಕಲ್ಯಾಣ ಮಂಟಪ ಸಂಪರ್ಕಿಸುವ ಮೂರು ರಸ್ತೆಗಳು ಹದಗೆಟ್ಟು ಎರಡು ವರ್ಷಗಳು ಕಳೆದರೂ ದುರಸ್ತಿಯ ಭಾಗ್ಯ ಕಂಡಿಲ್ಲ. ಶಾಲಾ– ಕಾಲೇಜುಗಳ ವಿದ್ಯಾರ್ಥಿಗಳು ರೋಗಿಗಳು ಕಸರು ಮಯವಾದ ರಸ್ತೆಗಳಲ್ಲಿ ಓಡಾಡುತ್ತಿದ್ದಾರೆವಿನುತ್ ಜೋಶಿ ಕರುಣೇಶ್ವರ ನಗರದ ನಿವಾಸಿ
ನಗರ ಬೇರೆ ಬೇರೆ ವಾರ್ಡ್‌ಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡುತ್ತಿದ್ದೇನೆ. ಕರುಣೇಶ್ವರ ನಗರದಲ್ಲಿ ರಸ್ತೆಯ ಅವ್ಯವಸ್ಥೆಯ ಬಗ್ಗೆ ಪರಿಶೀಲನೆ ನಡೆಸಿ ಕ್ರಮ ತೆಗೆದುಕೊಳ್ಳಲಾಗುವುದುಅವಿನಾಶ ಶಿಂಧೆಮಹಾನಗರ ಪಾಲಿಕೆಯ ಆಯುಕ್ತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.