ADVERTISEMENT

PV Web Exclusive | ಗುಲಬರ್ಗಾ ವಿಶ್ವವಿದ್ಯಾಲಯ ಎಂಬ ಜ್ಞಾನದೇಗುಲದ ವ್ಯಥೆ

ಇದು ಹಂಗಾಮಿ ಕುಲಪತಿ; ಅತಿಥಿ ಉಪನ್ಯಾಸಕರ ವಿಶ್ವವಿದ್ಯಾಲಯ

ಗಣೇಶ-ಚಂದನಶಿವ
Published 1 ಸೆಪ್ಟೆಂಬರ್ 2020, 4:00 IST
Last Updated 1 ಸೆಪ್ಟೆಂಬರ್ 2020, 4:00 IST
ಗುಲಬರ್ಗಾ ವಿಶ್ವವಿದ್ಯಾಲಯ
ಗುಲಬರ್ಗಾ ವಿಶ್ವವಿದ್ಯಾಲಯ   

ಕಲಬುರ್ಗಿಯ ಗುಲಬರ್ಗಾ ವಿಶ್ವವಿದ್ಯಾಲಯ ಶೈಕ್ಷಣಿಕ ಚಟುವಟಿಕೆಗಳ ಬದಲು ‘ಅನ್ಯ’ ಕಾರಣಗಳಿಂದ ಸುದ್ದಿಗೆ ಗ್ರಾಸವಾಗುತ್ತಿದೆ. ಈಗ ‘ಕಪಾಳಮೋಕ್ಷ’ ಪ್ರಕರಣವೂ ಸೇರಿಕೊಂಡಿದೆ.

ಈ ಜ್ಞಾನ ದೇಗುಲಕ್ಕೆ 14 ತಿಂಗಳುಗಳಿಂದ ಪೂರ್ಣಾವಧಿ ಕುಲಪತಿ ಇಲ್ಲ. ಪೂರ್ಣಾವಧಿ ಬೋಧಕರಿಗಿಂತ ಅತಿಥಿ ಉಪನ್ಯಾಸಕರೇ ಹೆಚ್ಚಾಗಿದ್ದಾರೆ. ಹೀಗಾಗಿ ಇದೀಗ ಹಂಗಾಮಿ ಕುಲಪತಿ; ಅತಿಥಿ ಉಪನ್ಯಾಸಕರಿಂದ ಕೂಡಿರುವ ವಿಶ್ವವಿದ್ಯಾಲಯ ಎಂಬಂತಾಗಿದೆ ಇದರ ಸ್ಥಿತಿ.

ವಿಶ್ವವಿದ್ಯಾಲಯದ ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಜಿ.ಎಂ.ವಿದ್ಯಾಸಾಗರ ಅವರ ಮೇಲೆ ಮನೋವಿಜ್ಞಾನ ವಿಭಾಗದಪ್ರಾಧ್ಯಾಪಕಪ್ರೊ.ಎಸ್‌.ಪಿ. ಮೇಲಕೇರಿ ಅವರು ಹಲ್ಲೆ ನಡೆಸಿದ್ದಾರೆ ಎಂಬ ವಿಷಯ ಪೊಲೀಸ್‌ ಠಾಣೆ ಮೆಟ್ಟಿಲೇರಿಯಾಗಿದೆ. ತನಿಖೆಗೆ ವಿಶ್ವವಿದ್ಯಾಲಯ ಸಮಿತಿಯನ್ನೂ ರಚಿಸಿದೆ. ಸಿಸಿಟಿವಿಯಲ್ಲೂ ಈ ಘಟನೆ ಸೆರೆಯಾಗಿದ್ದು, ದೃಶ್ಯಾವಳಿಗಳು ತಮ್ಮ ಮೊಬೈಲ್‌ನಲ್ಲೂ ಹರಿದಾಡಿವೆ ಎನ್ನುತ್ತಿದ್ದಾರೆ ವಿದ್ಯಾರ್ಥಿಗಳು.

ADVERTISEMENT

ಅಷ್ಟಕ್ಕೂ ಈ ಜಗಳ ನಡೆದಿರುವುದು ವಿದ್ಯಾರ್ಥಿಯೊಬ್ಬರ ಎಂ.ಫಿಲ್‌ ವಿಚಾರವಾಗಿ.

‘25 ವರ್ಷಗಳಿಂದ ಸಸ್ಯಶಾಸ್ತ್ರ ಅಧ್ಯಯನ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿದ್ದೇನೆ. ಎಸ್‌.ಪಿ.ಮೇಲಕೇರಿಯವರ ಸಹೋದರನ ಮಗ ಸಸ್ಯಶಾಸ್ತ್ರ ವಿಭಾಗದಲ್ಲಿ ಪೂರ್ಣಕಾಲಿಕ ಎಂ.ಫಿಲ್‌ ಮಾಡುತ್ತಿದ್ದು, ಅವರಿಗೆ ವಿಶ್ವವಿದ್ಯಾಲಯದ ನಿಯಮಾವಳಿಗಳಂತೆ ಬೇರೆ ಎಲ್ಲೂ ಕೆಲಸ ಮಾಡುತ್ತಿಲ್ಲ ಎಂಬ ಬಗ್ಗೆ ಮುಚ್ಚಳಿಕೆ ಬರೆದುಕೊಡಲು ಕೇಳಿದ್ದೆ. ಈ ಕಾರಣದಿಂದ ಎಸ್‌.ಪಿ.ಮೇಲಕೇರಿ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ’ ಎಂದು ವಿದ್ಯಾಸಾಗರ ದೂರಿನಲ್ಲಿ ತಿಳಿಸಿದ್ದಾರೆ. ವಿಶ್ವವಿದ್ಯಾಲಯವು ಆಂತರಿಕ ತನಿಖಾ ಸಮಿತಿ ರಚಿಸಿದ್ದು, ತನಿಖಾ ವರದಿ ಇನ್ನಷ್ಟೇ ಬರಬೇಕಿದೆ.

ಕುಲಪತಿ ನೇಮಕಕ್ಕೆ ಮೀನಾಮೇಷ

ಎಸ್‌.ಆರ್‌. ನಿರಂಜನ್‌ ಅವರು 2019ರ ಜೂನ್ ತಿಂಗಳಲ್ಲಿ ಕುಲಪತಿ ಹುದ್ದೆಯಿಂದ ನಿವೃತ್ತರಾದರು. ಆ ನಂತರ ಹಿರಿಯ ಡೀನ್‌ರಾದ ಪಿ.ಎಸ್‌. ಮೇಲಕೇರಿ, ಪರಿಮಳಾ ಅಂಬೇಕರ್‌, ಮಹಾಲೆ, ರಾಜನಾಳಕರ ಲಕ್ಷ್ಮಣ, ವಿಜಯಕುಮಾರ್‌ ಸರದಿಯಂತೆ ಹಂಗಾಮಿ ಕುಲಪತಿಯಾದರು. ಈಗ ಚಂದ್ರಕಾಂತ ಯಾತನೂರ ಹಂಗಾಮಿ ಕುಲಪತಿ ಆಗಿದ್ದಾರೆ.

ನೂತನ ಕುಲಪತಿ ನೇಮಕಕ್ಕೆ ಶೋಧನಾ ಸಮಿತಿ ಸಭೆ ಸೇರಿ ರಾಜ್ಯ ಸರ್ಕಾರಕ್ಕೆ ಹೆಸರುಗಳನ್ನು ಶಿಫಾರಸು ಮಾಡಿದೆ. ಲಭ್ಯವಾಗಿರುವ ಮಾಹಿತಿಯಂತೆ ಬೆಂಗಳೂರು ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಮೈಲಾರಪ್ಪ, ಬೆಂಗಳೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ಗೋಮತಿದೇವಿ, ಗುಲಬರ್ಗಾ ವಿಶ್ವವಿದ್ಯಾಲಯದ ದಯಾನಂದ ಅಗಸರ, ಚಂದ್ರಕಾಂತ ಯಾತನೂರ ಅವರು ಹೆಸರುಗಳನ್ನು ಸಮಿತಿ ಶಿಫಾರಸು ಮಾಡಿದೆ ಎನ್ನಲಾಗಿದೆ.

‘ಕಳಂಕಿತರ ನೇಮಕ ಬೇಡ’ ಎಂಬ ಕೂಗು ಈಗಾಗಲೇ ಎದ್ದಿದೆ. ಆದರೆ, ಈ ವರೆಗೂ ಕುಲಪತಿ ಹುದ್ದೆ ನೇಮಕವಾಗಿಲ್ಲ.

248 ಬೋಧಕ ಹುದ್ದೆ ಖಾಲಿ

ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರು 145, ಸಹ ಪ್ರಾಧ್ಯಾಪಕರು 67 ಮತ್ತು ಪ್ರಾಧ್ಯಾಪಕರು 36 ಹೀಗೆ ಒಟ್ಟು 248 ಹುದ್ದೆಗಳು ಖಾಲಿ ಇವೆ. ಹಿಂದೆ ಅರ್ಜಿ ಆಹ್ವಾನಿಸಿದ್ದ ಹಾಗೂ ಆ ನಂತರ ಖಾಲಿಯಾಗಿರುವ ಹುದ್ದೆಗಳು ಸೇರಿ ಒಟ್ಟಾರೆ 248 ಹುದ್ದೆಗಳ ಭರ್ತಿಗೆ ರಾಜ್ಯ ಸರ್ಕಾರವನ್ನು ಕೋರುವ ನಿರ್ಣಯವನ್ನು ಈಚೆಗೆ ನಡೆದ ಸಿಂಡಿಕೇಟ್‌ ಸಭೆಯಲ್ಲಿ ಕೈಗೊಳ್ಳಲಾಗಿದೆ.

ವಿಶ್ವವಿದ್ಯಾಲಯದ ಬೋಧಕ ಹುದ್ದೆಗಳ ಭರ್ತಿ ಪ್ರಕ್ರಿಯೆ ಆರಂಭಗೊಂಡು 10 ವರ್ಷಗಳೇ ಉರುಳಿವೆ. ಆದರೆ, ನೇಮಕಾತಿ ಮಾತ್ರ ಆಗಿಲ್ಲ. ಪುಟ್ಟಯ್ಯ ಅವರು ಕುಲಪತಿ ಆಗಿದ್ದಾಗ ಹುದ್ದೆಗಳ ಭರ್ತಿಗೆ ಯತ್ನಿಸಿದ್ದರು. ಆ ನಂತರ ಕುಲಪತಿಯಾದ ಎಸ್‌.ಆರ್‌. ನಿರಂಜನ ತಮ್ಮ ಅವಧಿಯುದ್ದಕ್ಕೂ ಪ್ರಯತ್ನಿಸಿದರೂ ನೇಮಕಾತಿ ನಡೆಯಲಿಲ್ಲ.

ಏತನ್ಮಧ್ಯೆ ಕಲ್ಯಾಣ ಕರ್ನಾಟಕದಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಆರ್ಥಿಕ ಇಲಾಖೆಯ ಅನುಮೋದನೆ ಬೇಡ ಎಂಬ ನಿಯಮವನ್ನು ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದ ವೇಳೆ ರಾಜ್ಯ ಸರ್ಕಾರ ರೂಪಿಸಿದೆ. ಈ ಭಾಗದ ಖಾಲಿ ಹುದ್ದೆಗಳನ್ನು ಆರ್ಥಿಕ ಇಲಾಖೆಯ ಅನುಮೋದನೆಗೆ ಕಾಯದೇ ನೇಮಕ ಮಾಡಿಕೊಳ್ಳುವ ಅವಕಾಶ ಇದೆ. ಆದರೂ, ಗುಲಬರ್ಗಾ ವಿವಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ನನೆಗುದಿಗೆ ಬಿದ್ದಿರುವುದು ಸೋಜಿಗ.

‘ಗುಲಬರ್ಗಾ ವಿಶ್ವವಿದ್ಯಾಲಯವನ್ನು ಕೇಳುವವರೇ ಇಲ್ಲವಾಗಿದ್ದಾರೆ. ಸ್ಥಳೀಯ ಸಂಸದರು, ಶಾಸಕರೂ ನಮ್ಮ ವಿವಿ ಅಭಿವೃದ್ಧಿಗೆ ಗಮನ ಹರಿಸುತ್ತಿಲ್ಲ. ಹಿಂದೆ 300 ಜನ ಪೂರ್ಣಾವಧಿ ಬೋಧಕರು ಇದ್ದೆವು.ಸೇವಾ ನಿವೃತ್ತಿಯಿಂದ ಇವುಗಳಲ್ಲಿ 240ರಷ್ಟು ಹುದ್ದೆ ಖಾಲಿಯಾಗಿದ್ದು, ಈಗ 60 ಜನ ಮಾತ್ರ ಇದ್ದೇವೆ. ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಪೂರ್ಣಾವಧಿ ಬೋಧಕರು ಇಲ್ಲದ ಕಾರಣ ಗುಣಮಟ್ಟದ ಶಿಕ್ಷಣ ಎಂಬುದು ಮರೀಚಿಕೆಯಾಗುತ್ತಿದೆ’ ಎಂದು ಹೆಸರು ಬಹಿರಂಗ ಪಡಿಸಲು ಒಲ್ಲದ ಹಿರಿಯ ಪ್ರಾಧ್ಯಾಪಕರೊಬ್ಬರು ಬೇಸರ ವ್ಯಕ್ತಪಡಿಸಿದರು.

‘ಪೂರ್ಣಾವಧಿ ಕುಲಪತಿ ಇಲ್ಲದಿರುವುದೇ ನಿತ್ಯದ ಆಡಳಿತದಲ್ಲಿ ಸಮಸ್ಯೆ ತಲೆದೋರಲು ಕಾರಣ. ಪ್ರಮುಖ ತೀರ್ಮಾನ ಕೈಗೊಳ್ಳುವ ಅಧಿಕಾರ ಹಂಗಾಮಿ ಕುಲಪತಿ ಅವರಿಗೆ ಇರುವುದಿಲ್ಲ. ಇದು ಆಡಳಿತದ ಮೇಲೆ ದುಷ್ಪರಿಣಾಮಕ್ಕೆ ಕಾರಣವಾಗುತ್ತಿದೆ. ಕುಲಪತಿ ನೇಮಕ ವಿಳಂಬ ಮತ್ತು ಬಹುತೇಕ ಹುದ್ದೆಗಳ ಖಾಲಿಯಿಂದಾಗಿ ವಿಶ್ವವಿದ್ಯಾಲಯದ ಶೈಕ್ಷಣಿಕ ಮುಕುಟವೇ ಕಳಚುತ್ತಿದೆ’ಎನ್ನುತ್ತಾರೆ ಅವರು.

ಅಂಕಿ ಅಂಶ

* 1980ರಲ್ಲಿ ಗುಲಬರ್ಗಾ ವಿವಿ ಸ್ಥಾಪನೆ

* 860 ಎಕರೆ ಜ್ಞಾನಗಂಗಾ ಆವರಣದ ವಿಸ್ತೀರ್ಣ

* 38 ಸ್ನಾತಕೋತ್ತರ ವಿಭಾಗಗಳು

***

ಹುದ್ದೆಗಳು ಖಾಲಿ ಇರುವುದರಿಂದ ಅನಾನುಕೂಲವಾಗುತ್ತಿದೆ. ಆದರೆ, ಅತಿಥಿ ಉಪನ್ಯಾಸಕರು, ಹೊರಗುತ್ತಿಗೆ ಸಿಬ್ಬಂದಿಯ ಸೇವೆ ಪಡೆದು ಶೈಕ್ಷಣಿಕ ಮತ್ತು ಆಡಳಿತಾತ್ಮಕವಾಗಿ ತೊಂದರೆಯಾಗದಂತೆ ನೋಡಿಕೊಳ್ಳಲಾಗುತ್ತಿದೆ. ಸರ್ಕಾರ ಅನುಮತಿ ನೀಡಿದರೆ ನೇಮಕಾತಿ ಪ್ರಕ್ರಿಯೆ ಆರಂಭಿಸಲಾಗುವುದು.
-ಚಂದ್ರಕಾಂತ ಯಾತನೂರ, ಹಂಗಾಮಿ ಕುಲಪತಿ, ಗುಲಬರ್ಗಾ ವಿ.ವಿ

***

ಸರ್ಕಾರ ವಿ.ವಿಯಲ್ಲಿ ಖಾಲಿ ಇರುವ ಬೋಧಕ ಮತ್ತು ಬೋಧಕೇತರ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮ ಕೈಗೊಳ್ಳಬೇಕು. ಆ ಮೂಲಕ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕು
-ಅರುಣಕುಮಾರ ಬಿ. ಕರ್ಣೆ, ಗುಲಬರ್ಗಾ ವಿಶ್ವವಿದ್ಯಾಲಯ ಅತಿಥಿ ಉಪನ್ಯಾಸಕರ ಸಂಘದ ಅಧ್ಯಕ್ಷ

***

ವಿದ್ಯಾರ್ಥಿಗಳ ಹಾಗೂ ಶೈಕ್ಷಣಿಕ ಅಭಿವೃದ್ಧಿಯ ದೃಷ್ಟಿಯಿಂದ ಸರ್ಕಾರ ಕೂಡಲೇ ಕಾಯಂ ಕುಲಪತಿಯನ್ನು ನೇಮಕ ಮಾಡಬೇಕು. ವಿ.ವಿ ಆವರಣದಲ್ಲಿ ವಿದ್ಯಾರ್ಥಿಗಳ ಸುರಕ್ಷತೆಗೆ ಕ್ರಮ ಕೈಗೊಳ್ಳಬೇಕು
-ಮಂಜುನಾಥ ಪಾಟೀಲ, ವಿದ್ಯಾರ್ಥಿ, ಎಂಪಿ.ಇಡಿ, ಅಂತಿಮ ಸೆಮಿಸ್ಟರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.