ADVERTISEMENT

ಕಲಬುರಗಿ: ಜಕಣಾಚಾರ್ಯ ಸಂಸ್ಮರಣೆ ನಾಳೆ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2021, 2:42 IST
Last Updated 31 ಡಿಸೆಂಬರ್ 2021, 2:42 IST

ಕಲಬುರಗಿ: ‘ಅಮರಶಿಲ್ಪಿ ಜಕಣಾಚಾರ್ಯ ಅವರ ಸಂಸ್ಮರಣಾ ದಿನಾಚರಣೆಯನ್ನು ಜನವರಿ 1ರಂದು ಬೆಳಿಗ್ಗೆ 11 ಗಂಟೆಗೆ ನಗರದ ಎಸ್.ಎಂ.ಪಂಡಿತ ರಂಗ ಮಂದಿರದಲ್ಲಿ ಆಯೋಜಿಸಲಾಗಿದೆ’ ಎಂದು ಅಮರಶಿಲ್ಪಿ ಜಕಣಾಚಾರ್ಯ ಅವರ ಸಂಸ್ಮರಣಾ ಉತ್ಸವ ಸಮಿತಿ ನಿಕಟಪೂರ್ವ ಅಧ್ಯಕ್ಷ ಅಶೋಕ ಪೋದ್ದಾರ ತಿಳಿಸಿದರು.

‘ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರ ಪಾಲಿಕೆ ಹಾಗೂ ವಿಶ್ವಕರ್ಮ ಸಮಾಜದ ವಿವಿಧ ಸಂಘಟನೆಗಳ ಆಶ್ರಯದಲ್ಲಿ ಈ ಉತ್ಸವ ನಡೆಯಲಿದೆ’ ಎಂದು ಅವರು ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ವಿಶ್ವಕರ್ಮ ಏಕದಂಡಗಿ ಮಠದ ಸುರೇಂದ್ರ ಸ್ವಾಮೀಜಿ, ಸುಲೇಪೇಟ ಏಕದಂಡಗಿ ಮಠದ ದೊಡ್ಡೇಂದ್ರ ಸ್ವಾಮೀಜಿ, ಅಫಜಲಪುರದ ವಿಶ್ವಕರ್ಮ ಮೂರುಜಾವಧೀಶ್ವರ ಮಠದ ಪ್ರಣವನಿರಂಜನ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಜಿಲ್ಲೆಯ ಎಲ್ಲ ಶಾಸಕರು, ಜನಪ್ರತಿನಿಧಿಗಳು, ಅಧಿಕಾರಿಗಳು ಪಾಲ್ಗೊಳ್ಳುವರು. ಸಾಹಿತಿ ರಾಜೇಂದ್ರ ಬಡಿಗೇರ ಉಪನ್ಯಾಸ ನೀಡುವರು’ ಎಂದು ವಿವರಿಸಿದರು.

ADVERTISEMENT

‘ಹಂಪಿ ಉತ್ಸವದಲ್ಲಿ ವಿಶ್ವಕರ್ಮ ಶಿಲ್ಪಿಯೊಬ್ಬರಿಗೆ ‘ಅಮರಶಿಲ್ಪಿ ಜಕಣಾಚಾರ್ಯ’ ಪ್ರಶಸ್ತಿ ನೀಡಬೇಕು, ಬೇಲೂರು ಚನ್ನಕೇಶವ ದೇವಾಲಯ ಆವರಣದಲ್ಲಿ ಜಕಣಾಚಾರ್ಯರ ಮೂರ್ತಿ ಪ್ರತಿಷ್ಠಾಪನೆ ಮಾಡಬೇಕು.ರಾಜ್ಯದ ಒಂದು ವಿಶ್ವವಿದ್ಯಾಲಯಕ್ಕೆ ಜಕಣಾಚಾರ್ಯರ ಹೆಸರಿಡಬೇಕು, ಕಲಬುರಗಿ ವಿಮಾನ ನಿಲ್ದಾಣಕ್ಕೆ ವಿಶ್ವಕರ್ಮ ಹೆಸರಿಡಬೇಕು. ಕಲಬುರಗಿ ರಿಂಗ್‍ರೋಡ್‍ನಲ್ಲಿರುವ ಗಣೇಶ ನಗರ ಸಮೀಪದ ವೃತ್ತಕ್ಕೆ ಭಗವಾನ ವಿಶ್ವಕರ್ಮ ಸಕಲ್ ಎಂದು ನಾಮಕರಣ ಮಾಡಬೇಕು. ಎಸ್.ಎಂ.ಪಂಡಿತರ ಪುತ್ಥಳಿ ಸ್ಥಾಪಿಸಬೇಕು’ಎಂದು ಸುರೇಂದ್ರ ಸ್ವಾಮೀಜಿ ಒತ್ತಾಯಿಸಿದರು.

ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ ದೇವೇಂದ್ರಪ್ಪ ಸುತಾರ ನರೋಣಾ, ಬಿಜೆಪಿ ಒಬಿಸಿ ಮೋರ್ಚಾ ನಗರ ಜಿಲ್ಲಾ ಘಟಕದ ಅಧ್ಯಕ್ಷ ಅರವಿಂದ ಪೋದ್ದಾರ, ಮುಖಂಡ ಮಲ್ಲಿಕಾರ್ಜನ ಪೋದ್ದಾರ ಹರಸೂರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.