ADVERTISEMENT

ಕಲಬುರಗಿ | ಶಾಲೆಯ ಕೋಣೆ ದುರಸ್ತಿಗೆ ₹70 ಸಾವಿರ ದೇಣಿಗೆ ನೀಡಿದ ಶಿಕ್ಷಕ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2025, 6:45 IST
Last Updated 5 ಸೆಪ್ಟೆಂಬರ್ 2025, 6:45 IST
   

ಜೇವರ್ಗಿ: ಕಳೆದ 28 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಶಿಕ್ಷಕ ಹಣಮಂತ್ರಾಯ ಐನೂಲಿ, ತಾವು ಕರ್ತವ್ಯನಿರ್ವಹಿಸುತ್ತಿರುವ ಶಾಲೆಯ ಮಕ್ಕಳ ಕಲ್ಯಾಣಕ್ಕಾಗಿ ₹70 ಸಾವಿರ ದೇಣಿಗೆ ನೀಡಿ ಮಾದರಿಯಾಗಿದ್ದಾರೆ.

ತಾಲ್ಲೂಕಿನ ಶಖಾಪೂರ ಎಸ್.ಎ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿರುವ ಇವರು, ಅದೇ ಶಾಲೆಯ ಕೋಣೆಯ ಮೇಲ್ಛಾವಣಿ ದುರಸ್ತಿಗೆ ದೇಣಿಗೆ ನೀಡಿದ್ದಾರೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಖಾಸಗಿ ಶಾಲೆ ವಿದ್ಯಾರ್ಥಿಗಳಂತೆ ಸರಕಾರಿ ಶಾಲೆ ವಿದ್ಯಾರ್ಥಿಗಳಿಗೂ ಗುಣಮಟ್ಟದ ಶಿಕ್ಷಣ ಹಾಗೂ ಸೌಲಭ್ಯ ದೊರೆಯಲಿ ಎಂಬ ಉದ್ದೇಶದಿಂದ ಶಿಕ್ಷಕ ಈ ದೇಣಿಗೆಯಾಗಿ ನೀಡಿದ್ದಾರೆ.

ಶಖಾಪೂರ ಎಸ್.ಎ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ 1958 ರಲ್ಲಿ ಪ್ರಾರಂಭವಾಗಿದೆ. 140 ಮಕ್ಕಳ ದಾಖಲಾತಿ ಇದ್ದು, 5 ಜನ ಶಿಕ್ಷಕರು ಮತ್ತು ಒಬ್ಬ ಅತಿಥಿ ಶಿಕ್ಷಕಿ ಕಾರ್ಯನಿರ್ವಹಿಸುತ್ತಿದ್ದಾರೆ. ಶಾಲೆಯಲ್ಲಿ ಒಟ್ಟು 8 ಕೋಣೆಗಳಿದ್ದು, ಮೂರ್ನಾಲ್ಕು ಕೋಣೆಗಳು ಶಿಥಿಲಗೊಂಡು ಸೋರುತ್ತಿವೆ. ಉಳಿದ ಕೋಣೆಗಳಲ್ಲಿ ಮಕ್ಕಳಿಗೆ ಪಾಠ ಭೋದನೆ ಮಾಡಲಾಗುತ್ತಿದೆ.

ADVERTISEMENT

ಒಂದು ತರಗತಿ ಕೋಣೆಯ ಮೇಲ್ಛಾವಣಿ ತೀರಾ ಹಾಳಾಗಿ ಉದುರಿ ಬಿದ್ದು, ಕೋಣೆಯಲ್ಲಿ‌ ನೀರು ನಿಲ್ಲುತ್ತಿತ್ತು. ಈ ಕುರಿತು ಸಂಬಂಧಿಸಿದ ಅಧಿಕಾರಿಗಳ ಬಳಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಹೀಗಾಗಿ ಶಿಕ್ಷಕ ತಮ್ಮ ವೇತನದಲ್ಲಿಯೇ ₹70 ಸಾವಿರ ಖರ್ಚು ಮಾಡಿ ಶಾಲಾ ಕೋಣೆಗೆ ಹೊಸ ಮೇಲ್ಛಾವಣಿ ಹಾಕಿಸಿ ಮಾದರಿಯಾಗಿದ್ದಾರೆ.

ಮಕ್ಕಳಿಗೆ ಅವಶ್ಯವಿರುವ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳ ಸಲಕರಣೆಗೆಗಳನ್ನು ದಾನಿಗಳಿಂದ ಪಡೆದು ಕೊರತೆ ನೀಗಿಸಿದ್ದಾರೆ. ಹೀಗಾಗಿ ಮಕ್ಕಳ ಪೋಷಕರಿಗೆ ಬಡತನವಿದ್ದರು, ಶಾಲೆಯಲ್ಲಿ ಕಲಿಯಲು ಸಮಸ್ಯೆ ಆಗದಂತೆ ಶ್ರಮಿಸುತ್ತಿದ್ದಾರೆ. ಇನ್ನೂ ಯಾವುದೇ ಖಾಸಗಿ ಶಾಲೆಗೆ ಕಡಿಮೆ ಇಲ್ಲದಂತೆ, ದಾನಿಗಳ ಬಳಿ ಸಹಾಯ ಪಡೆದುಕೊಂಡು ಸ್ಮಾರ್ಟ್ ಕ್ಲಾಸ್, ಗ್ರೀನ್‌ಬೋರ್ಡ್, ಸ್ಟೀಲ್ ತಟ್ಟೆಗಳು , ಗ್ಲಾಸ್ ಸೌಲಭ್ಯ ಒದಗಿಸಿದ್ದಾರೆ.

ಶಖಾಪೂರ ವಿಶ್ವರಾಧ್ಯರ ತಪೋವನಮಠದ ಪೀಠಾಧಿಪತಿ ಸಿದ್ದರಾಮ ಶಿವಾಚಾರ್ಯ ಸ್ವಾಮೀಜಿ ಶಾಲೆಯ ಕಾರ್ಯಕ್ರಮಗಳ ಅನುಕೂಲಕ್ಕಾಗಿ ಮೈಕ್ ಸೆಟ್ ದೇಣಿಗೆ ನೀಡಿ ಶಿಕ್ಷಕರ ಕಾರ್ಯವೈಖರಿ ಶ್ಲಾಘಿಸಿದ್ದಾರೆ. ಹಣಮಂತ್ರಾಯ ಜತೆ ಸಹ ಶಿಕ್ಷಕರಾದ ಗುರುಪಾದಪ್ಪ, ಶಂಕರ, ಚನ್ನಮ್ಮ, ನಂದಾ ಅವರು ಕೂಡ ಶಾಲೆಯ ಅಭಿವೃದ್ಧಿಗೆ ದೇಣಿಗೆ ನೀಡಲು ಮುಂದಾಗಿದ್ದಾರೆ. ಒಟ್ಟಾರೆ ಇವರ ಈ ಅಭಿವೃಧ್ದಿ ಕಾರ್ಯಕ್ಕೆ ಪೋಷಕರಷ್ಟೆ ಅಲ್ಲ, ಮಕ್ಕಳಿಂದಲು ಸಹ ಪ್ರಶಂಸೆ ವ್ಯಕ್ತವಾಗಿದೆ.

ಸ್ಮಾರ್ಟ್ ಕ್ಲಾಸ್ ಅಳವಡಿಸಿರುವುದು
ಮಕ್ಕಳೊಂದಿಗೆ ಶಿಕ್ಷಕರು
ಶಖಾಪೂರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ
ಹಣಮಂತ್ರಾಯ ಐನೂಲಿ
ಇಮಾಮಸಾಬ ಮುಖ್ಯಗುರುಗಳು
ಶಾಲಾ ಮಕ್ಕಳಿಂದಲೇ ಅನ್ನ ದೊರೆತಿದೆ. ಹೀಗಾಗಿ ಶಾಲೆಗೆ ದೇಣಿಗೆ ನೀಡಿದ್ದೇನೆ. ಹಳ್ಳಿಗಳ ಶಾಲೆಗಳು ಅಭಿವೃದ್ಧಿಯಾಗಬೇಕು. ಸಮಾಜ ಕೈಜೋಡಿಸಿದರೆ ಸರ್ಕಾರಿ ಶಾಲೆಗಳು ಉಳಿಯಲು ಸಾಧ್ಯ.
ಹಣಮಂತ್ರಾಯ ಐನೂಲಿ ದೇಣಿಗೆ ನೀಡಿದ ಶಿಕ್ಷಕ
ಸರಕಾರಿ ಶಾಲೆಗೆ ದೇಣಿಗೆ ನೀಡುವ ಮೂಲಕ ಶಿಕ್ಷಕ ಹಣಮಂತ್ರಾಯ ಅವರು ಮಾದರಿಯಾಗಿದ್ದಾರೆ. ಎಲ್ಲ ಶಿಕ್ಷಕರಲ್ಲೂ ಇಂಥ ಮನೋಭಾವನೆ ಬೆಳೆದರೆ ಸರಕಾರಿ ಶಾಲೆಗೆ ಬರುವ ಬಡ ಮಕ್ಕಳ ಶಿಕ್ಷಣಕ್ಕೆ ಮತ್ತಷ್ಟು ಅನುಕೂಲವಾಗಲಿದೆ.
ವೀರಣ್ಣ ಬೊಮ್ಮನಹಳ್ಳಿ ಬಿಇಒ ಜೇವರ್ಗಿ
ಕಳೆದ 5 ವರ್ಷಗಳಿಂದ ಈ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದು ಶಿಕ್ಷಕ ಹಣಮಂತ್ರಾಯ ಅವರಿಗೆ ಈ ಶಾಲೆಯ ಬಗ್ಗೆ ಇರುವ ಕಾಳಜಿ ನೋಡಿ‌ ಬಹಳ ಸಂತಸವಾಗಿದೆ.
ಇಮಾಮಸಾಬ ಮುಖ್ಯ ಗುರುಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.