ADVERTISEMENT

ಕಲಬುರಗಿ: ಉದ್ಯೋಗಕ್ಕಾಗಿ ಬೀದಿಗಿಳಿದ‌ 'ಆಕಾಂಕ್ಷಿಗಳು'

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2025, 7:34 IST
Last Updated 13 ಅಕ್ಟೋಬರ್ 2025, 7:34 IST
   

ಕಲಬುರಗಿ: 'ಸರ್ಕಾರಿ ಇಲಾಖೆಗಳಲ್ಲಿನ ಖಾಲಿ ಹುದ್ದೆಗಳ ಭರ್ತಿಗೆ ರಾಜ್ಯ ಸರ್ಕಾರ‌ ಕೂಡಲೇ ಕ್ರಮವಹಿಸಬೇಕು' ಎಂದು ಆಗ್ರಹಿಸಿ ಉದ್ಯೋಗಾಕಾಂಕ್ಷಿಗಳ ಹೋರಾಟ‌ ಸಮಿತಿಯಿಂದ ನಗರದಲ್ಲಿ ಸೋಮವಾರ ಪ್ರತಿಭಟನೆ ‌ನಡೆಯಿತು.

ನಗರದ‌ ಸರ್ದಾರ್‌ ವಲ್ಲಭಭಾಯಿ‌ ಪಟೇಲ್ ‌ವೃತ್ತದಲ್ಲಿ‌ ಸೇರಿದ ಉದ್ಯೋಗಾಕಾಂಕ್ಷಿಗಳು ಸರ್ಕಾರದ‌ ವಿರುದ್ಧ ‌ಘೋಷಣೆ‌ ಮೊಳಗಿಸುತ್ತ ಕೈಯಲ್ಲಿ 'ಉದ್ಯೋಗ ನಮ್ಮ ಹಕ್ಕು', 'ನೇಮಕಾತಿಯಲ್ಲಿ ಭ್ರಷ್ಟಾಚಾರ ತಡೆಗಟ್ಟಿ, ಪಾರದರ್ಶಕತೆ ‌ಕಾಪಾಡಿ', 'ಎಲ್ಲ ಹುದ್ದೆಗಳ ನೇಮಕಾತಿಯಲ್ಲಿ ಐದು ವರ್ಷಗಳ ವಯೋಮಿತಿ‌ ಸಡಿಲಿಕೆ‌‌ ನೀಡಿ' ಭಿತ್ತಿ ಪತ್ರಗಳನ್ನು ಹಿಡಿದು ‌ಜಿಲ್ಲಾಧಿಕಾರಿ‌ ಕಚೇರಿ ತನಕ ಪ್ರತಿಭಟನೆ ನಡೆಸಿದರು.

'ನಮ್ಮ ರಾಜ್ಯದಲ್ಲಿ ಹಿಂದೆ ಅಧಿಕಾರ ನಡೆಸಿದ ಬಿಜೆಪಿ ಸರ್ಕಾರ ಖಾಲಿ ಹುದ್ದೆಗಳ ಭರ್ತಿಗೆ ಯಾವುದೇ ಪ್ರಯತ್ನ ಮಾಡಲಿಲ್ಲ. ಬಿಜೆಪಿ ಪಕ್ಷದ ವೈಫಲ್ಯಗಳನ್ನು ಎತ್ತಿತೋರಿಸುತ್ತಾ ಕಾಂಗ್ರೆಸ್ ಪಕ್ಷವು ತಾನು ಅಧಿಕಾರಕ್ಕೆ ಬಂದರೆ ಎಲ್ಲ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ಭರವಸೆಯನ್ನು ನೀಡಿತ್ತು ಆದರೆ ಅಧಿಕಾರಕ್ಕೆ ಬಂದು 2 ವರ್ಷ 4 ತಿಂಗಳು ಕಳೆದರೂ ಯಾವುದೇ ನೇಮಕಾತಿಯನ್ನು ಮಾಡಿಲ್ಲ. ತಾನು ನೀಡಿದ ಉದ್ಯೋಗದ ಗ್ಯಾರಂಟಿಯನ್ನು ಅಧಿಕಾರಕ್ಕೆ ಬಂದ ನಂತರ ನಿರೀಕ್ಷೆಯಲ್ಲಿದ್ದರು. ಆದರೆ, ಅವರ ನಿರೀಕ್ಷೆ ಹುಸಿಯಾಗಿದೆ‌' ಎಂದು ಟೀಕಿಸಿದರು.

ADVERTISEMENT

ರಾಜ್ಯದ ಎಲ್ಲೆಡೆ ಲಕ್ಷಾಂತರ ಉದ್ಯೋಗಾಕಾಂಕ್ಷಿ ಯುವಜನರು ಸರ್ಕಾರ ನೇಮಕಾತಿ ಪ್ರಕ್ರಿಯೆ ಪ್ರಾರಂಭಿಸಬಹುದೆಂದು ಹಲವಾರು ವರ್ಷಗಳಿಂದ ಪರೀಕ್ಷೆಗಳ ತಯಾರಿ ನಡೆಸುತ್ತಿದ್ದಾರೆ. 45 ವರ್ಷಗಳಿಂದ ಸರಿಯಾಗಿ ನೇಮಕಾತಿಗಳೇ ನಡೆಯದಿರುವುದರಿಂದ ಅದೆಷ್ಟೋ ಯುವಜನರು ತಮ್ಮ ಅರ್ಹತಾ ವಯಸ್ಸನ್ನು ಮೀರಿದ್ದಾರೆ. ಉದ್ಯೋಗದ ಭರವಸೆಯಿಲ್ಲದೆ ಯುವಜನರು ಆತ್ಮಹತ್ಯೆಯಂತಹ ಕಠಿಣ. ನೋವಿನ ನಿರ್ಧಾರಕ್ಕೆ ಮೊರೆಹೋಗುತ್ತಿದ್ದಾರೆ ಇನ್ನೊಂದೆಡೆ ಕೆಪಿಎಸ್‌ಸಿಯ ಅಧ್ಯಕ್ಷರು, ಸದಸ್ಯರ ಒಳಜಗಳ ಮತ್ತು ಅದರಲ್ಲಿನ ಭ್ರಷ್ಟಾಚಾರವು ನೇಮಕಾತಿಗಾಗಿ ಕಾಯುತ್ತಿರುವ ಆಕಾಂಕ್ಷಿಗಳಿಗೆ ಬೇಸರ ತರಿಸಿದೆ ಎಂದು ‌ಅಸಮಾಧಾನ‌ ವ್ಯಕ್ತಪಡಿಸಿದರು.

ರಾಜ್ಯದ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ 59,454 ಹುದ್ದೆಗಳು ಖಾಲಿ ಬಿದ್ದಿವೆ. ಕಲ್ಯಾಣ ಕರ್ನಾಟಕ ಭಾಗದ 6 ಜಿಲ್ಲೆಗಳಲ್ಲಿ 21,381 ಶಿಕ್ಷಕರ ಹುದ್ದೆಗಳು ಖಾಲಿ ಇವೆ. ಮತ್ತೊಂದೆಡೆ ಆರೋಗ್ಯ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್, ಕಂದಾಯ, ಒಳಾಡಳಿತ ಸೇರಿದಂತೆ ಹಲವಾರು ಇಲಾಖೆಗಳಲ್ಲಿ ಬಹಳ ದೊಡ್ಡ ಸಂಖ್ಯೆಯ ಹುದ್ದೆಗಳು ಖಾಲಿ ಇರುವುದರಿಂದ ಜನಸಾಮಾನ್ಯರಿಗೆ ಸಿಗಬೇಕಾದ ಸೇವೆಗಳು ಸರಿಯಾಗಿ ತಲುಪುತ್ತಿಲ್ಲ' ಎಂದರು.

ಸರ್ಕಾರ ಯಾವುದೇ ನೆಪಗಳನ್ನು ಹೇಳದೆ ಕೆಲವೇ ಸಾವಿರ ಹುದ್ದೆಗಳ ಭರ್ತಿಗೆ ಸೀಮಿತಗೊಳಿಸದೇ ಎಲ್ಲ ಖಾಲಿ ಹುದ್ದೆಗಳ ಭರ್ತಿಗೆ ಕೂಡಲೇ ಶುರ್ತು ಕ್ರಮಗಳನ್ನು ಕೈಗೊಳ್ಳಬೇಕು. ಮುಖ್ಯವಾಗಿ ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮಗಳನ್ನು ತಡೆಗಟ್ಟಿ ಪಾರದರ್ಶಕತೆಯನ್ನು ತರುವ ಮೂಲಕ ಅರ್ಹ ಅಭ್ಯರ್ಥಿಗಳಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಬೇಕು. ನಾಲೈದು ವರ್ಷಗಳಿಂದ ನೇಮಕಾತಿಗಳು ನಡೆಯದ ಕಾರಣ ಅರ್ಹತಾ ವಯೋಮಿತಿಯಲ್ಲಿಯೂ ಕನಿಷ್ಠ ಐದು ವರ್ಷಗಳ ಸಡಿಲಿಕೆ ಮಾಡಬೇಕು. ಇಂತಹ ಪರಿಸ್ಥಿತಿಯಲ್ಲಿ ಇತ್ತೀಚಿಗೆ ಕೆ ಇ ಎ ಮೂಲಕ ಹೊರಡಿಸಿರುವ ಅಧಿಸೂಚನೆಯಲ್ಲಿ ವಿವಿಧ ಹುದ್ದೆಗಳಿಗೆ ದುಬಾರಿ ಅರ್ಜಿ ಶುಲ್ಕವನ್ನು ನಿಗದಿಪಡಿಸಿದ್ದು ಅದನ್ನು ಕೈ ಬಿಡಬೇಕು ಎಂದು ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.