ADVERTISEMENT

ಹೂಡಿಕೆಗೆ ಪ್ರಚೋದಿಸಿ ಸೈಬರ್‌ ವಂಚನೆ: ಐಟಿ ಮ್ಯಾನೇಜರ್‌ಗೆ ₹16 ಲಕ್ಷ ದೋಖಾ

​ಪ್ರಜಾವಾಣಿ ವಾರ್ತೆ
Published 21 ಜನವರಿ 2026, 7:09 IST
Last Updated 21 ಜನವರಿ 2026, 7:09 IST
   

ಕಲಬುರಗಿ: ಹೆಚ್ಚಿನ ಹಣ ಗಳಿಕೆಯ ಆಮಿಷವೊಡ್ಡಿ ನಕಲಿ ಟ್ರೇಡಿಂಗ್‌ ಆ್ಯಪ್‌ನಲ್ಲಿ ಹೂಡಿಕೆಗೆ ಪ್ರಚೋದಿಸಿದ ಸೈಬರ್‌ ವಂಚಕರು ನಗರದ ಖಾಸಗಿ ಕಂಪನಿಯೊಂದರ ಐಟಿ ಮ್ಯಾನೇಜರ್‌ಗೆ ₹ 16 ಲಕ್ಷ ವಂಚಿಸಿದ್ದಾರೆ.

ಬಸವೇಶ್ವರ ಕಾಲೊನಿಯ ನ್ಯೂ ಎಕ್ಸ್‌ಟೆನ್ಶನ್ ಪ್ರದೇಶದ ನಿವಾಸಿ ಆನಂದ ಶಿರವಾಳಕರ ವಂಚನೆಗೆ ಒಳಗಾದವರು.

‘ಏಳು ವರ್ಷಗಳಿಂದ ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡುತ್ತಿದ್ದು, 2025ರ ಡಿಸೆಂಬರ್‌ 3ರಂದು ನನ್ನ ಮೊಬೈಲ್‌ ನಂಬರ್‌ ಹೂಡಿಕೆ ಸಂಬಂಧಿತ ವಾಟ್ಸ್‌ಆ್ಯಪ್‌ ಗುಂಪಿಗೆ ಸೇರಿಸಲಾಯಿತು. ಅದರಲ್ಲಿ ಷೇರುಪೇಟೆಯಲ್ಲಿ ಹೂಡಿಕೆ ಮಾಡಿ ಲಾಭ ಗಳಿಸುವ ಆಸೆ ಹುಟ್ಟಿಸಿದರು. ನಾನು ಹೆಚ್ಚಿನ ಮಾಹಿತಿ ಕೇಳಿದಾಗ ಗ್ರೂಪ್‌ ಅಡ್ಮಿನ್‌ ರಾಹುಲ್ ಶರ್ಮಾ ಒಂದು ಲಿಂಕ್‌ ಕಳುಹಿಸಿ ಟ್ರೇಡಿಂಗ್‌ ಖಾತೆ ತೆರೆಯಲು ಹೇಳಿದರು. ಅದರಂತೆ ಖಾತೆ ತೆರೆದು ನಾನು ಹಂತ ಹಂತವಾಗಿ ಡಿಸೆಂಬರ್ 27ರಿಂದ 2026ರ ಜನವರಿ 5ರವರೆಗೆ ₹ 16 ಲಕ್ಷ ಹೂಡಿಕೆ ಮಾಡಿದೆ. ನಾನು ಟ್ರೇಡಿಂಗ್‌ ನಡೆಸುತ್ತ ಹೋದಂತೆ ನನ್ನ ಟ್ರೇಡಿಂಗ್‌ ಖಾತೆಯಲ್ಲಿ ₹ 35 ಲಕ್ಷ ತೋರಿಸುತ್ತಿತು’ ಎಂದು ಆನಂದ ದೂರಿನಲ್ಲಿ ತಿಳಿಸಿದ್ದಾರೆ.

ADVERTISEMENT

‘ಬಳಿಕ ಅದೇ ಟ್ರೇಡಿಂಗ್‌ ಆ್ಯಪ್‌ ಮೂಲಕ ನನಗೆ ₹ 1.20 ಕೋಟಿ ಮೊತ್ತದ ಐಪಿಒ ಸ್ಟಾಕ್‌ಗಳನ್ನು ಅಲಾಟ್‌ ಮಾಡಿದರು. ಆಗ ನಿಮ್ಮ ಖಾತೆಯಲ್ಲಿನ ₹ 35 ಲಕ್ಷ ಬಿಟ್ಟು, ಇನ್ನುಳಿದ ₹ 84.77 ಲಕ್ಷ ಹಣ ಜಮೆ ಮಾಡಿದರೆ ಮಾತ್ರವೇ ನಿಮ್ಮ ಹಣ ನಿಮಗೆ ಸಿಗುತ್ತಲಿದೆ ಎಂದಾಗ ಅನುಮಾನ ಬಂತು. ಬಳಿಕ ಕೆಲವರನ್ನು ವಿಚಾರಿಸಿದಾಗ ವಂಚನೆಗೆ ಒಳಗಾಗಿರುವುದು ತಿಳಿಯಿತು’ ಎಂದು ದೂರಿನಲ್ಲಿ ಆನಂದ ವಿವರಿಸಿದ್ದಾರೆ.

ಈ ಕುರಿತು ಕಲಬುರಗಿಯ ಸೆನ್‌ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.