ADVERTISEMENT

ಕಲಬುರಗಿ: ಸರ್ಕಾರಿ, ಅನುದಾನಿತ ಐಟಿಐ ಕಾಲೇಜುಗಳ ತರಬೇತಿದಾರರ ಕ್ರೀಡಾಕೂಟ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2026, 5:53 IST
Last Updated 17 ಫೆಬ್ರುವರಿ 2026, 5:53 IST
ಕಲಬುರಗಿಯ ಚಂದ್ರಶೇಖರ ಪಾಟೀಲ ಕ್ರೀಡಾಂಗಣದಲ್ಲಿ ಸೋಮವಾರ ಐಟಿಯ ತರಬೇತಿದಾರರ ಜಿಲ್ಲಾ ಮಟ್ಟದ ಕ್ರೀಡಾಕೂಟಕ್ಕೆ ಐಟಿಒಟಿ ಜಂಟಿ ನಿರ್ದೇಶಕ ರವೀಂದ್ರನಾಥ ಬಾಳಿ ಚಾಲನೆ ನೀಡಿದರು. ಗಣ್ಯರು ಇದ್ದರು. ಪ್ರಜಾವಾಣಿ ಚಿತ್ರ
ಕಲಬುರಗಿಯ ಚಂದ್ರಶೇಖರ ಪಾಟೀಲ ಕ್ರೀಡಾಂಗಣದಲ್ಲಿ ಸೋಮವಾರ ಐಟಿಯ ತರಬೇತಿದಾರರ ಜಿಲ್ಲಾ ಮಟ್ಟದ ಕ್ರೀಡಾಕೂಟಕ್ಕೆ ಐಟಿಒಟಿ ಜಂಟಿ ನಿರ್ದೇಶಕ ರವೀಂದ್ರನಾಥ ಬಾಳಿ ಚಾಲನೆ ನೀಡಿದರು. ಗಣ್ಯರು ಇದ್ದರು. ಪ್ರಜಾವಾಣಿ ಚಿತ್ರ   

ಕಲಬುರಗಿ: ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ ಪಾಲ್ಗೊಂಡು ಅದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಐಟಿಐ ತರಬೇತಿದಾರರ ತರಬೇತಿ ಸಂಸ್ಥೆಯ (ಐಟಿಒಟಿ) ಜಂಟಿ ನಿರ್ದೇಶಕ ರವೀಂದ್ರನಾಥ ಬಾಳಿ ಹೇಳಿದರು.

ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ, ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ (ಪುರುಷ) ಕಲಬುರಗಿ ನೋಡಲ್ ಅಧೀನದಲ್ಲಿ ಜಿಲ್ಲೆಯ ಸರ್ಕಾರಿ ಮತ್ತು ಅನುದಾನಿತ ಕೈಗಾರಿಕಾ ತರಬೇತಿ ಸಂಸ್ಥೆಗಳ ತರಬೇತಿದಾರರ ಜಿಲ್ಲಾಮಟ್ಟದ ಕ್ರೀಡಾಕೂಟ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

‘ವಿದ್ಯಾರ್ಥಿಗಳ ಜೀವನ ಅಮೂಲ್ಯವಾದದ್ದು. ಅದನ್ನು ಚೆನ್ನಾಗಿ ಉಪಯೋಗಿಸಿಕೊಳ್ಳಬೇಕು. ಕ್ರೀಡಾ ಸ್ಫೂರ್ತಿಯಿಂದ ಆಟದಲ್ಲಿ ಪಾಲ್ಗೊಳ್ಳಬೇಕು’ ಎಂದರು.

ADVERTISEMENT

‘ವಿದ್ಯಾರ್ಥಿಗಳು ರಾಜ್ಯಮಟ್ಟದಲ್ಲಿ ಆಡಿ ಬಹುಮಾನ ಪಡೆದರೆ ಉದ್ಯೋಗದಲ್ಲಿ ಮೀಸಲಾತಿ ಸೌಲಭ್ಯಗಳಿವೆ. ರಾಜ್ಯಮಟ್ಟ ಪ್ರತಿನಿಧಿಸುವ ಸರ್ಕಾರಿ ನೌಕರರಿಗೂ ಬಡ್ತಿ, ಸಂಬಳದಲ್ಲಿ ಹೆಚ್ಚಳ ಸೇರಿದಂತೆ ಹಲವು ಸೌಲಭ್ಯಗಳಿವೆ’ ಎಂದು ತಿಳಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕಲಬುರಗಿಯ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ (ಪು) ಪ್ರಥಮ ದರ್ಜೆ ಪ್ರಾಚಾರ್ಯ ಮುರಳೀಧರ ರತ್ನಗಿರಿ, ‘ನಾಲ್ಕು ವರ್ಷಗಳಿಂದ ಕ್ರೀಡಾಕೂಟ ನಡೆಸಿಕೊಂಡು ಬರಲಾಗುತ್ತಿದೆ. ಐಟಿಐ ಕಾಲೇಜುಗಳಿಗೆ ಪ್ರವೇಶ ಪಡೆಯುವ ಬಹುತೇಕರು ಗ್ರಾಮೀಣ ಭಾಗ ಮತ್ತು ಬಡತನ ರೇಖೆಗಿಂತ ಕೆಳಗಿರುವವರು ಆಗಿದ್ದಾರೆ. ಮಾನಸಿಕ ಹಾಗೂ ದೈಹಿಕ ಸದೃಢತೆಗೆ ಸಹಕಾರಿಯಾಗಿರುವ ಕ್ರೀಡೆಗಳಲ್ಲಿ ಸೋಲು–ಗೆಲುವು ಲೆಕ್ಕಿಸದೆ ಪಾಲ್ಗೊಳ್ಳಬೇಕು’ ಎಂದು ಹೇಳಿದರು. 

‘ಪ್ರತಿದಿನ ಒಂದು ಗಂಟೆಯಾದರೂ ಕ್ರೀಡೆಗಳಲ್ಲಿ ಪಾಲ್ಗೊಳ್ಳುವುದರಿಂದ ಆರೋಗ್ಯ ಕಾಪಾಡಿಕೊಳ್ಳಬಹುದು’ ಎಂದರು.

ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯ ವಿಭಾಗೀಯ ಕಾರ್ಯಾಲಯದ ಉಪನಿರ್ದೇಶಕಿ ರುಬಿನಾ ಪರ್ವೀನ್, ವಿಇಎಸ್‌ ಐಟಿಐ ಕಾಲೇಜಿನ ಪ್ರಾಚಾರ್ಯ ಶಕೀಲ್ ಅನ್ಸಾರಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

ಆದರ್ಶ ಶಿಕ್ಷಣ ಸಂಸ್ಥೆಯ ಸಂಯೋಜಕ ಬಸವರಾಜ ಯಲ್ಹೇರಿ, ಸರ್ಕಾರಿ ಐಟಿಐನ ಆಡಳಿತಾಧಿಕಾರಿ ಸುರೇಶ ವಗ್ಗೆ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ವಿಜಯಕುಮಾರ ಮೇಳಕುಂದಿ ನಿರೂಪಿಸಿ, ವಂದಿಸಿದರು.

ಜಿಲ್ಲೆಯ 11 ಐಟಿಐ ಕಾಲೇಜುಗಳ 600ಕ್ಕೂ ಹೆಚ್ಚು ತರಬೇತಿದಾರರು ಭಾಗವಹಿಸಿದ್ದು ಮೂರು ದಿನಗಳ ಕಾಲ ಅಥ್ಲೆಟಿಕ್ಸ್ ವಾಲಿಬಾಲ್ ಕಬಡ್ಡಿ ಕ್ರಿಕೆಟ್‌ ಸೇರಿದಂತೆ ಹಲವು ಕ್ರೀಡೆಗಳನ್ನು ಆಡುವರು
ಮುರಳೀಧರ ರತ್ನಗಿರಿ ಸರ್ಕಾರಿ ಐಟಿಐ (ಪು) ಪ್ರಥಮ ದರ್ಜೆ ಪ್ರಾಚಾರ್ಯ