ADVERTISEMENT

ಜಿಎಸ್‌ಟಿ ಸರಳೀಕರಣ | ಭಾರತೀಯರಿಗೆ ಮೋದಿ ದೀಪಾವಳಿ ಗಿಫ್ಟ್: ಸಂಸದ ಉಮೇಶ್ ಜಾಧವ್

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2025, 6:31 IST
Last Updated 6 ಸೆಪ್ಟೆಂಬರ್ 2025, 6:31 IST
ಉಮೇಶ ಜಾಧವ
ಉಮೇಶ ಜಾಧವ   

ಕಲಬುರಗಿ: ‘ಪ್ರಧಾನಿ ನರೇಂದ್ರ ಮೋದಿ ಮತ್ತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಡವರು, ರೈತರಿಗೆ ಅನುಕೂಲವಾಗುವಂತೆ ಜಿಎಸ್‌ಟಿ ಬಗ್ಗೆ ಕ್ರಾಂತಿಕಾರಿ ಹೆಜ್ಜೆ ಇಟ್ಟಿದ್ದಾರೆ. ಭಾರತೀಯರಿಗೆ ದೀಪಾವಳಿ ಗಿಫ್ಟ್ ನೀಡಿದ್ದಾರೆ’ ಎಂದು ಮಾಜಿ ಸಂಸದ ಡಾ.ಉಮೇಶ್ ಜಾಧವ್ ತಿಳಿಸಿದರು.

ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಎಲ್ಲ ಕ್ಯಾನ್ಸರ್ ಔಷಧಗಳು ಸೇರಿದಂತೆ 33 ಜೀವ ರಕ್ಷಕ ಔಷಧಗಳು, ವೈಯಕ್ತಿಕ ಆರೋಗ್ಯ ವಿಮೆ ಮತ್ತು ಜೀವವಿಮೆಗೆ ಸಂಪೂರ್ಣ ತೆರಿಗೆ ವಿನಾಯಿತಿ ಘೋಷಿಸಿರುವುದು ಬಡವರ, ರೈತರ ಮತ್ತು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವವರ ಬಗ್ಗೆ ಮೋದಿ ಸರ್ಕಾರಕ್ಕಿರುವ ಕಾಳಜಿಯನ್ನು ತೋರಿಸುತ್ತದೆ’ ಎಂದರು.

‘ಜನಸಾಮಾನ್ಯರು ಬಳಸುವ ಎಣ್ಣೆ, ಸಾಬೂನು, ಶುಚಿತ್ವ ಉತ್ಪನ್ನ, ಪಾತ್ರೆಗಳು, ಸಿದ್ಧ ಉಡುಪುಗಳು ಹೀಗೆ ಎಲ್ಲ ವಸ್ತುಗಳಿಗೆ ವಿನಾಯಿತಿ ನೀಡಿ ಜನಸಾಮಾನ್ಯರಿಗೆ ಮೋದಿ ಸರ್ಕಾರ ನೆರವು ನೀಡಿದೆ. ಕೇಂದ್ರ ಸರ್ಕಾರದ ಕ್ರಮದಿಂದ ಸಾಮಾನ್ಯ ನಾಗರಿಕರ ಜೀವನ ಸುಧಾರಣೆಯತ್ತ ಸಾಗುವುದಲ್ಲದೆ, ವ್ಯಾಪಾರೋದ್ಯಮಕ್ಕೆ ಹೆಚ್ಚಿನ ಲಾಭ ತಂದುಕೊಡಲಿದೆ’ ಎಂದು ಹೇಳಿದರು.

ADVERTISEMENT

‘ಎರಡು ಜಿಎಸ್‌ಟಿ ಸ್ಲಾಬ್‌ಗಳನ್ನು ರದ್ದು ಮಾಡಿರುವುದರಿಂದ ಅಗತ್ಯ ಸಾಮಾನ್ಯ ಬಳಕೆಯ ವಸ್ತುಗಳ ಮೇಲಿನ ತೆರಿಗೆ ಕಡಿತ ಉಂಟಾಗುವುದಲ್ಲದೆ, ಸರಕುಗಳು ಹೆಚ್ಚು ಕೈಗೆಟುಕುವಂತಾಗಿದೆ. ಸರ್ಕಾರದ ಕ್ರಮ ಸ್ವಾಗತಾರ್ಹವಾಗಿದೆ’ ಎಂದು ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.