ADVERTISEMENT

ಕಲಬುರಗಿ: 1–8ನೇ ತರಗತಿ ಮಕ್ಕಳಿಗೆ ಮೂರೇ ಕೋಣೆ!

ಸತತ ಮಳೆಗೆ ಸೋರುತ್ತಿರುವ ಜಂಬಗಾ(ಬಿ) ಶಾಲೆಯ ನಾಲ್ಕು ಕೊಠಡಿಗಳು

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2025, 6:58 IST
Last Updated 30 ಆಗಸ್ಟ್ 2025, 6:58 IST
ಕಲಬುರಗಿ ತಾಲ್ಲೂಕಿನ ಜಂಬಗಾ(ಬಿ) ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಥಿಲ ಕೊಠಡಿಯ ನೋಟ
ಕಲಬುರಗಿ ತಾಲ್ಲೂಕಿನ ಜಂಬಗಾ(ಬಿ) ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಥಿಲ ಕೊಠಡಿಯ ನೋಟ   

ಕಲಬುರಗಿ: ತಾಲ್ಲೂಕಿನ ಜಂಬಗಾ(ಬಿ) ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನಾಲ್ಕು ಕೊಠಡಿಗಳು ಸತತ ಮಳೆಯಿಂದಾಗಿ ಸೋರುತ್ತಿದ್ದು, ಕನ್ನಡ ಮಾಧ್ಯಮದ 1ರಿಂದ 8ನೇ ತರಗತಿ ಮಕ್ಕಳಿಗೆ ಕೇವಲ ಮೂರು ಕೊಠಡಿಗಳಲ್ಲೇ ಪಾಠ ಮಾಡಬೇಕಾಗಿದೆ.

ಶಾಲೆಯಲ್ಲಿ ಒಟ್ಟು 10 ಕೊಠಡಿಗಳಿವೆ. ಅವುಗಳಲ್ಲಿ ನಾಲ್ಕು ಕೋಣೆಗಳು ಹಳೆಯದಾಗಿದ್ದು, ಶಿಥಿಲಗೊಂಡಿವೆ. ಗೋಡೆಗಳಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಚಾವಣಿಗಳ ಸಿಮೆಂಟ್‌ ಪದರು ಕಳಚಿ ಬೀಳುತ್ತಿದೆ. ಒಂದು ಕೊಠಡಿ ಮುಖ್ಯಶಿಕ್ಷಕರ ಕಾರ್ಯಾಲಯಕ್ಕೆ ಉಪಯೋಗವಾಗುತ್ತಿದೆ.

ಶಾಲೆಯಲ್ಲಿ ಇಂಗ್ಲಿಷ್‌ ಮಾಧ್ಯಮದ ಶಿಕ್ಷಣ ಕೂಡ ನೀಡಲಾಗುತ್ತಿದ್ದು, ಇದರಿಂದಾಗಿ ಮಕ್ಕಳ ದಾಖಲಾತಿ ಸಂಖ್ಯೆ ಹೆಚ್ಚಾಗಿದೆ. ಎರಡೂ ಮಾಧ್ಯಮದ ಒಟ್ಟು 226 ಮಕ್ಕಳಿದ್ದು, ಪ್ರತಿದಿನ ಸರಾಸರಿ 210ಕ್ಕೂ ಹೆಚ್ಚು ಮಕ್ಕಳು ಶಾಲೆಗೆ ಹಾಜರಾಗುತ್ತಾರೆ. ಆದರೆ, ಅವರಿಗೆ ಪಾಠ ಮಾಡಲು ಕೊಠಡಿಗಳ ಅಭಾವ ಎದುರಾಗಿದೆ.

ADVERTISEMENT

ಐದು ಕೊಠಡಿಗಳಲ್ಲಿ ಒಂದು ಎಲ್‌ಕೆಜಿ, ಯುಕೆಜಿಯ 26 ಮಕ್ಕಳಿಗೆ ಬಳಕೆ ಆಗುತ್ತಿದೆ. ಮತ್ತೊಂದು ಕೊಠಡಿಯಲ್ಲಿ ಆಂಗ್ಲ ಮಾಧ್ಯಮದ 1 ಮತ್ತು 2ನೇ ತರಗತಿಯ 33 ಮಕ್ಕಳಿಗೆ ಪಾಠ ಮಾಡಲಾಗುತ್ತಿದೆ. ಬಾಕಿ ಉಳಿದ ಮೂರೇ ಕೋಣೆಗಳಲ್ಲಿ ಕನ್ನಡ ಮಾಧ್ಯಮದ 1ರಿಂದ 8ನೇ ತರಗತಿಯ ಮಕ್ಕಳಿಗೆ ಬೋಧನೆ ಮಾಡುವ ಅನಿವಾರ್ಯತೆ ಎದುರಾಗಿದೆ. ಮಳೆ ಇಲ್ಲವಾದರೆ ಕಾರಿಡಾರ್‌ನಲ್ಲಿ ಮಕ್ಕಳನ್ನು ಕೂರಿಸಿ ಪಾಠ ಮಾಡಲಾಗುತ್ತಿದೆ.

ಕನ್ನಡ ಮಾಧ್ಯಮದ 1, 2 ಮತ್ತು 3ನೇ ತರಗತಿಯ ‘ನಲಿಕಲಿ’ಯ 29 ಮಕ್ಕಳಿಗೆ ಒಂದು ಕೋಣೆ, 4ರಿಂದ 8ನೇ ತರಗತಿಯ ಮಕ್ಕಳಿಗೆ ಎರಡು ಕೊಠಡಿಗಳಲ್ಲಿ ಪಾಠ ಮಾಡಲಾಗುತ್ತಿದೆ. ಇದರಿಂದ ಮಕ್ಕಳು ಯಾವ ತರಗತಿಯ ಪಾಠ ಮಾಡಲಾಗುತ್ತಿದೆ ಎಂಬುದು ತಿಳಿಯದೇ ಗೊಂದಲಕ್ಕೀಡಾಗುತ್ತಾರೆ. ಹಾಗಾಗಿ, ಮಕ್ಕಳ ಸಂಖ್ಯೆ ಮತ್ತು ತರಗತಿಗಳ ಅನುಸಾರ ಹೊಸ ಕೊಠಡಿಗಳನ್ನು ನಿರ್ಮಾಣ ಮಾಡಬೇಕು ಎಂದು ಪಾಲಕರು ಆಗ್ರಹಿಸುತ್ತಾರೆ.

‘ಶಾಲೆಯಲ್ಲಿ ಒಟ್ಟು 10 ಕೊಠಡಿಗಳಿದ್ದು, ಬಿಸಿಯೂಟಕ್ಕೆ ಪ್ರತ್ಯೇಕ ಕೋಣೆ ಇದೆ. ಶಿಥಿಲವಾಗಿ ಸೋರುತ್ತಿರುವ ನಾಲ್ಕು ಕೊಠಡಿಗಳನ್ನು ನೆಲಸಮಗೊಳಿಸಿ ಹೊಸ ಕೊಠಡಿಗಳನ್ನು ನಿರ್ಮಾಣ ಮಾಡುವಂತೆ ಶಿಕ್ಷಣ ಇಲಾಖೆಗೆ ಒತ್ತಾಯಿಸಲಾಗಿದೆ’ ಎಂದು ಎಸ್‌ಡಿಎಂಸಿ ಅಧ್ಯಕ್ಷ ಅಶೋಕ ಹತಗುಂದಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಶಾಲೆಯಲ್ಲಿ 226 ಮಕ್ಕಳ ದಾಖಲಾತಿ ಇದ್ದು, ಮಳೆ ಬಂದಾಗ ಪಾಠ ಬೋಧನೆಗೆ ಸಮಸ್ಯೆ ಆಗುತ್ತಿದೆ. ನಾಲ್ಕು ಕೊಠಡಿಗಳು ಶಿಥಿಲಗೊಂಡಿರುವ ಬಗ್ಗೆ ಮೇಲಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಮಕ್ಕಳ ಸುರಕ್ಷತೆಗೆ ಆದ್ಯತೆ ನೀಡುತ್ತಿದ್ದೇವೆ’ ಎನ್ನುತ್ತಾರೆ ಮುಖ್ಯಶಿಕ್ಷಕ ಚಂದ್ರಕಾಂತ ಬಾಗನ್‌.

ಜಂಬಗಾ(ಬಿ) ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ತರಗತಿ ಕೋಣೆಯೊಂದು ಶಿಥಿಲಗೊಂಡು ಸೋರಿಕೆಯಾಗಿರುವುದು

‘ದುರಸ್ತಿಗಾಗಿ ಮಾಹಿತಿ’

‘ಜಂಬಗಾ(ಬಿ) ಶಾಲೆಯ ಕೊಠಡಿಗಳ ದುರಸ್ತಿಗಾಗಿ ಡಿಡಿಪಿಐ ಅವರಿಗೆ ಮಾಹಿತಿ ನೀಡಲಾಗಿದೆ. ಬಹಳಷ್ಟು ಶಿಥಿಲ ಆಗಿದ್ದರೆ ಲೋಕೋಪಯೋಗಿ ಇಲಾಖೆಯಿಂದ ಪ್ರಮಾಣಪತ್ರ ಪಡೆದು ಹೊಸ ಕೋಣೆಗಳ ನಿರ್ಮಾಣಕ್ಕೆ ಮೇಲಧಿಕಾರಿಗಳಿಗೆ ಪ್ರಸ್ತಾವ ಸಲ್ಲಿಸಲಾಗುವುದು’ ಎಂದು ಕಲಬುರಗಿ ಉತ್ತರ ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಶೇಖರ ಹಂಚಿನಾಳ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.