ಕಲಬುರಗಿ: ನಗರದಿಂದ ಕೂಗಳತೆ ದೂರದಲ್ಲಿರುವ ಮಾಜಿ ಪ್ರಧಾನಿ ‘ಅಟಲ್ ಬಿಹಾರಿ ವಾಜಪೇಯಿ ಬಡಾವಣೆ’ ಅವ್ಯವಸ್ಥೆಗಳ ಆಗರವಾಗಿದೆ. ಬೀದಿ ದೀಪಗಳಿಲ್ಲದೇ ಇಡೀ ಬಡಾವಣೆ ಕಗ್ಗತ್ತಲಲ್ಲಿ ಮುಳುಗಿದ್ದು, ನಿವಾಸಿಗಳು ಜೀವ ಕೈಯಲ್ಲಿ ಹಿಡಿದು ಜೀವಿಸುತ್ತಿದ್ದಾರೆ.
2015ರಲ್ಲಿ ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರ (ಕುಡಾ) ಈ ಬಡಾವಣೆಯನ್ನು ನಿರ್ಮಾಣ ಮಾಡಿತು. ಸುಮಾರು 300 ಎಕರೆ ಪ್ರದೇಶದಲ್ಲಿ 3000ಕ್ಕೂ ಅಧಿಕ ನಿವೇಶನಗಳನ್ನು ನಿರ್ಮಾಣ ಮಾಡಿ ಹಂಚಿಕೆ ಮಾಡಿತು. 20x30 ಅಳತೆಗೆ ₹ 3 ಲಕ್ಷ, 30x40 ಅಳತೆಗೆ ₹ 6 ಲಕ್ಷ ಹಾಗೂ 40x60 ಅಳತೆಯ ನಿವೇಶನಗಳಿಗೆ ₹ 11 ಲಕ್ಷ ನಿಗದಿ ಮಾಡಿ ಮಾರಾಟ ಮಾಡಿತು. ಸರ್ಕಾರಿ ನೌಕರರು, ನಿವೃತ್ತ ನೌಕರರು ಇಲ್ಲಿ ನಿವೇಶನಗಳನ್ನು ಖರೀದಿಸಿದ್ದಾರೆ. ಪ್ರಸ್ತುತ ಸುಮಾರು 35 ಮನೆಗಳು ನಿರ್ಮಾಣವಾಗಿದ್ದು, 150ಕ್ಕೂ ಅಧಿಕ ಜನ ವಾಸಿಸುತ್ತಿದ್ದಾರೆ. ಆದರೆ ಅವರೆಲ್ಲಾ ಕಗ್ಗತ್ತಲಲ್ಲಿ ಕಾಲ ಕಳೆಯುವಂತಾಗಿದೆ.
ಈ ಬಡಾವಣೆ ನಗರಾಭಿವೃದ್ಧಿ ಪ್ರಾಧಿಕಾರದ ಯೋಜನೆ ಆಗಿರುವುದರಿಂದ ಮಹಾನಗರ ಪಾಲಿಕೆಯ ವ್ಯಾಪ್ತಿಗೆ ಒಳಪಟ್ಟಿಲ್ಲ. ಹೀಗಾಗಿ ಇಲ್ಲಿನ ಜನ ಅತಂತ್ರದಲ್ಲಿದ್ದಾರೆ. ಬಡಾವಣೆ ನಿರ್ಮಿಸಿದ ನಗರಾಭಿವೃದ್ಧಿ ಪ್ರಾಧಿಕಾರ ಯಾವುದೇ ಮೂಲಸೌಲಭ್ಯ ಒದಗಿಸಿಲ್ಲ ಎಂದು ಬೇಸರಿಸುತ್ತಾರೆ ಬಡಾವಣೆ ನಿವಾಸಿ, ಶ್ರೀ ಚನ್ನಬಸವೇಶ್ವರ ಪದವಿ ಮಹಾವಿದ್ಯಾಲಯದ ಪ್ರಾಂಶುಪಾಲ ಶಿವಶರಣಪ್ಪ.
ಬೀದಿದೀಪ, ಒಳಚರಂಡಿ, ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಯಾವುದೇ ಮೂಲ ಸೌಲಭ್ಯಗಳೂ ಇಲ್ಲಿಲ್ಲ. ಬೀದಿದೀಪ ಇಲ್ಲದ್ದರಿಂದ ಕತ್ತಲಾಗುತ್ತಲೇ ಕುಡುಕರ ಹಾವಳಿ ಹೆಚ್ಚಿದೆ. ರಸ್ತೆಯಲ್ಲಿಯೇ ಬಾಟಲ್‌ಗಳನ್ನು ಒಡೆದು ಕುಡುಕರು ರಂಪಾಟ ಮಾಡುತ್ತಾರೆ. ಇತ್ತ ಪೊಲೀಸ್ ಸಿಬ್ಬಂದಿ ಸಹ ಸುಳಿಯದ್ದರಿಂದ ಅನೈತಿಕ ಚಟುವಟಿಕೆಗಳು ಹೆಚ್ಚಿವೆ. ಗಾಜಿನ ಚೂರುಗಳು ರಸ್ತೆಯೆಲ್ಲೆಲ್ಲಾ ಬಿದ್ದಿವೆ. ಕಂಡ ಕಂಡಲ್ಲಿ ಕಾಂಡೋಮ್‌ಗಳು ಕಾಣಸಿಗುತ್ತಿವೆ. ಕತ್ತಲಾದರೆ ನಾವು ಅಡ್ಡಾಡುವುದೇ ದುಸ್ತರವಾಗಿದೆ ಎನ್ನುತ್ತಾರೆ ನಿವಾಸಿ ಶರತ್.
ಬಡಾವಣೆಗೆ ನೀರಿನ ಸಂಪರ್ಕ ಇಲ್ಲದ್ದರಿಂದ ಇಲ್ಲಿ ಮನೆ ನಿರ್ಮಿಸಬೇಕೆಂದರೆ ಕೊಳವೆಬಾವಿ ಕೊರೆಯಿಸಲೇಬೇಕು. ಇರುವ ಮನೆಗಳಿಗೆ ಕಾಯಂ ವಿದ್ಯುತ್ ಮೀಟರ್‌ಗಳೂ ಇಲ್ಲ. ತಾತ್ಕಾಲಿಕ ವಿದ್ಯುತ್ ವ್ಯವಸ್ಥೆಗೆ ಮಾಸಿಕ ₹ 3ರಿಂದ ₹ 5 ಸಾವಿರದವರೆಗೆ ಶುಲ್ಕ ಪಾವತಿಸುತ್ತಿದ್ದಾರೆ. ಸರ್ಕಾರದ ಗ್ಯಾರಂಟಿ ಯೋಜನೆಗಳು ಇಲ್ಲಿಗೆ ತಲುಪಿಲ್ಲ. ಕಾಯಂ ವಿದ್ಯುತ್ ಮೀಟರ್ ಅಳವಡಿಸಿ ಎಂದು ಮನವಿ ಕೊಟ್ಟು ಸಾಕಾಗಿದೆ ಎಂದು ನಿಟ್ಟುಸಿರಾದರು ಕೇಂದ್ರೀಯ ವಿದ್ಯಾಲಯದ ನಿವೃತ್ತ ಹಿರಿಯ ಗ್ರಂಥಪಾಲಕ ಕಲ್ಯಾಣರಾವ್ ಚವ್ಹಾಣ.
ನಗರಾಭಿವೃದ್ಧಿ ಪ್ರಾಧಿಕಾರ ಇಲ್ಲಿ ಮೂಲಸೌಲಭ್ಯ ಒದಗಿಸಿಲ್ಲ. ಬಡಾವಣೆಗೆ ಪ್ರತ್ಯೇಕ ವಿದ್ಯುತ್ ಪರಿವರ್ತಕದ ವ್ಯವಸ್ಥೆ ಮಾಡಿ ಮನೆಗಳಿಗೆ ಮೀಟರ್ ಅಳವಡಿಸಬೇಕುಶಿವಶರಣಪ್ಪ ಚನ್ನಬಸವೇಶ್ವರ ಪದವಿ ಕಾಲೇಜು ಪ್ರಾಂಶುಪಾಲ
ನಗರದ ಹೊರವಲಯದ ಈ ಬಡಾವಣೆಯಲ್ಲಿ ಬೀದಿ ದೀಪ ಅಳವಡಿಸಬೇಕು. ಒಳಚರಂಡಿ ವ್ಯವಸ್ಥೆ ಸುಧಾರಿಸಿ ನಾಲೆಗೆ ನೀರು ಹರಿಯುವಂತೆ ಕ್ರಮ ವಹಿಸಬೇಕುಗುರಣ್ಣ ಎಸ್. ನಾಗರಾವತ್ ನಿವೃತ್ತ ಶಿಕ್ಷಕ
ವಾಜಪೇಯಿ ಬಡಾವಣೆ ಭೂವಿವಾದ ಸುಪ್ರೀಂ ಕೋರ್ಟ್‌ನಲ್ಲಿ ಇರುವುದರಿಂದ ಬಡಾವಣೆ ಪಾಲಿಕೆಗೆ ಹಸ್ತಾಂತರವಾಗಿಲ್ಲ. ಅಲ್ಲಿ ನಿರ್ಮಾಣವಾಗಿರುವ ಮನೆಗಳಿಗೆ ಕಾಯಂ ಮೀಟರ್ ಅಳವಡಿಸಬೇಕೆಂದರೆ ಸಬ್ ಸ್ಟೇಷನ್ ಸ್ಥಾಪಿಸಬೇಕು. ಈ ಬೇಡಿಕೆ ಕುರಿತು ಪಾಲಿಕೆಗೆ ಮನವಿ ಸಲ್ಲಿಸಲಾಗಿದೆ. ಜೆಸ್ಕಾಂ ಜತೆಯೂ ಚರ್ಚಿಸಲಾಗಿದೆ. ಭೂವಿವಾದ ಇರುವುದರಿಂದ ಅಭಿವೃದ್ಧಿ ಕಾಮಗಾರಿಗಳು ಮಂದಗತಿಯಲ್ಲಿ ಸಾಗಿವೆ. ಸದ್ಯಕ್ಕೆ ಬೀದಿ ದೀಪ ಅಳವಡಿಸಲು ಕ್ರಮ ವಹಿಸಲಾಗುವುದು ಎಂದು ಕುಡಾ ಆಯುಕ್ತ ಗಂಗಾಧರ ಮಳಗಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.