ADVERTISEMENT

ಕಲಬುರಗಿ: ಚಳಿಗೆ ನಡುಗುತ್ತಿರುವ ಬಿಸಿಲೂರು!

ಕಲ್ಯಾಣ ಕರ್ನಾಟಕದಲ್ಲಿ ಸಾಮಾನ್ಯಕ್ಕಿಂತ ಕಡಿಮೆ ಉಷ್ಣಾಂಶ; ಬೆಚ್ಚಗಿರಲು ವೈದ್ಯರ ಸಲಹೆ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2024, 5:08 IST
Last Updated 17 ಡಿಸೆಂಬರ್ 2024, 5:08 IST
ಚಳಿಯ ಪ್ರಮಾಣ ಹೆಚ್ಚಿದ್ದರಿಂದ ಕಲಬುರಗಿಯ ಮಾರುಕಟ್ಟೆಯಲ್ಲಿ ಜನ ಸ್ವೆಟರ್ ಖರೀದಿಸಿದರು ಪ್ರಜಾವಾಣಿ ಚಿತ್ರ
ಚಳಿಯ ಪ್ರಮಾಣ ಹೆಚ್ಚಿದ್ದರಿಂದ ಕಲಬುರಗಿಯ ಮಾರುಕಟ್ಟೆಯಲ್ಲಿ ಜನ ಸ್ವೆಟರ್ ಖರೀದಿಸಿದರು ಪ್ರಜಾವಾಣಿ ಚಿತ್ರ   

ಕಲಬುರಗಿ: ‘ಈ ಬಾರಿ ಏನ್‌ ಥಂಡಿ ಐತ್ರಿ, ನಾವು ಬಿಸಿಲು ಬೇಕಾದ್ರ ತಡ್ಕೋತಿವಿ, ಆದ್ರ ಈ ಚಳಿ ತಡ್ಕೋಳ್ಳಾಕ ಆಗವಲ್ದು ನೋಡ್ರಿ’ ಎಂದು ಬೆಳಗಿನ 7 ಗಂಟೆಗೆ ನಗರದ ಜೇವರ್ಗಿ ರಸ್ತೆಯಲ್ಲಿ ಕೈ ಉಜ್ಜುತ್ತಾ ಬಿಸಿ ಬಿಸಿ ಚಹಾಗೆ ಆರ್ಡರ್‌ ಮಾಡಿದ ಬಾಬುಶಾ ಭಜಂತ್ರಿ. ಒಂದು ಗುಟುಕು ಕುಡಿದ ನಂತರವೇ ಮುದುಡಿಸಿದ್ದ ಮೈಯನ್ನು ಸಡಿಲಗೊಳಿಸಿ ಅಂಗಡಿ‌ಯವನೊಂದಿಗೆ ಮಾತಿಗೆ ಇಳಿದ. 

‘ಈ ವರ್ಷ ಚೊಲೋ ಮಳಿಯಾಗೈತಿ, ಅದಕ ಚಳಿನೂ ಜಾಸ್ತಿಯಾಗೈತಿ ನೋಡ್ರಿ’ ಎನ್ನುತ್ತಾ ಚಹಾ ಹೀರತೊಡಗಿದ. ‘ಹೊಸ್ತಿಲ ಹುಣ್ಣಿಮೆಗೆ ಚಳಿಗೆ ಮನೆಯ ಹೊಸ್ತಿಲೇ ನಡುಗುತ್ತದಂತೆ, ಇನ್ನು ನಾವು ಯಾವ ಲೆಕ್ಕ’ ಎಂದು ಅಂಗಡಿಯವ ಗಿರಾಕಿಗೆ ಚಹಾ ಕೊಡುತ್ತಲೇ ಉತ್ತರಿಸಿದ.

ಹೌದು‌, ತೊಗರಿ ಕಣಜ ಕಲಬುರಗಿಯಲ್ಲಿ ಈ ಬಾರಿ ಚಳಿ ಸಾಮಾನ್ಯಕ್ಕಿಂತ ಸ್ವಲ್ಪ ಹೆಚ್ಚಾಗಿಯೇ ಇದೆ. ಭಾರತೀಯ ಹವಾಮಾನ ಇಲಾಖೆಯ ವರದಿ ಪ್ರಕಾರ ಕನಿಷ್ಠ ಉಷ್ಣಾಂಶ ಸೋಮವಾರ 13 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದೆ. ಕಳೆದ ಮೂರು ದಿನಗಳಿಂದ ಉಷ್ಣಾಂಶ ಇಳಿಯುತ್ತಲೇ ಬರುತ್ತಿದ್ದು, ಮಂಗಳವಾರ 12 ಡಿಗ್ರಿ ಸೆಲ್ಸಿಯಸ್‌ಗೆ ಇಳಿಯಲಿದೆ’ ಎಂದು ಭಾರತೀಯ ಹವಾಮಾನ ಇಲಾಖೆಯ ತಾಂತ್ರಿಕ ಅಧಿಕಾರಿ ಬಸವರಾಜ್‌ ಬಿರಾದಾರ್‌ ಮಾಹಿತಿ ನೀಡಿದ್ದಾರೆ.

ADVERTISEMENT

‘ಹಗಲೆಲ್ಲಾ ಬಿಸಿಲಿನ ವಾತಾವರಣ ಕಂಡುಬಂದರೂ ಶೀತಗಾಳಿ ಮೈಕೊರೆಯುತ್ತಲೇ ಇರುತ್ತದೆ. ಜಿಲ್ಲೆಯಲ್ಲಿ ಈಗಿರುವ ವಾತಾವರಣ ಡಿಸೆಂಬರ್‌ 20ರಿಂದ ಆರಂಭವಾಗಬೇಕು. ಆದರೆ, ಒಂದು ವಾರ ಮೊದಲೇ ಆರಂಭವಾಗಿದೆ. ಅದರಲ್ಲೂ ಜನವರಿಯಲ್ಲಿ 10 ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆ ಉಷ್ಣಾಂಶ ಇರಲಿದೆ’ ಎಂದು ಅವರು ಹೇಳಿದ್ದಾರೆ.

ಕಲ್ಯಾಣ ಕರ್ನಾಟಕ ಪ್ರದೇಶದ ಜಿಲ್ಲೆಗಳು ಒಣ ಹವೆ ಪ್ರದೇಶಗಳು. ಬೀದರ್‌, ಆಳಂದ, ಮತ್ತು ಚಿಂಚೋಳಿ ಮಾತ್ರ ಅರೆಮಲೆನಾಡು. ಹೀಗಾಗಿ ಜಿಲ್ಲೆಯಲ್ಲಿ ಡಿಸೆಂಬರ್‌ ಅಂತ್ಯದವರೆಗೂ 15 ಡಿಗ್ರಿ ಸೆಲ್ಸಿಯಸ್‌ ಆಸುಪಾಸಿನಲ್ಲೇ ಉಷ್ಣಾಂಶ ಮುಂದುವರಿಯಲಿದೆ. ಜನವರಿಯಲ್ಲಿ ಇದಕ್ಕಿಂತ ಕಡಿಮೆಯಾಗಲಿದೆ. ಫೆ.10ರಿಂದ ಬದಲಾವಣೆ ಆಗಲಿದೆ. ಅಲ್ಲಿಂದ ಬಿಸಿಲು ಆರಂಭವಾಗಲಿದೆ.

‘ಅಧಿಕ ಚಳಿಯಿಂದಾಗಿ ಮನುಷ್ಯರಲ್ಲಿ ಉಸಿರಾಟದ ತೊಂದರೆ ಕಾಣಿಸಿಕೊಳ್ಳುತ್ತದೆ. ಶೀತಗಾಳಿ ಹೊಟ್ಟೆಯೊಳಗೆ ಹೋದರೆ ತೊಂದರೆಯಾಗುತ್ತದೆ. ಶೀತಗಾಳಿ ಜತೆಗೆ ದೂಳು ಹೊಟ್ಟೆ ಸೇರುತ್ತದೆ. ಹೀಗಾಗಿ ಮೂಗು, ಬಾಯಿ, ಕಿವಿ ಸಂರಕ್ಷಿಸಿಕೊಳ್ಳಬೇಕು. ದೇಹ ವಾತಾವರಣದೊಂದಿಗೆ ಹೊಂದಿಕೊಳ್ಳಬೇಕು ಎಂದರೆ ಬೆಚ್ಚಗಿರಬೇಕು’ ಎನ್ನುತ್ತಾರೆ ವೈದ್ಯರು.‌

ಚಳಿಗಾಲದಲ್ಲಿ ಚರ್ಮದ ಕಾಳಜಿ ಅಗತ್ಯ: ಚಳಿಗಾಲದಲ್ಲಿ ಚರ್ಮದ ಬಗ್ಗೆ ಅತಿ ಹೆಚ್ಚಿನ ಕಾಳಜಿ ವಹಿಸುವುದು ಅಗತ್ಯವಾಗಿದೆ. ಚಳಿಗಾಲದಲ್ಲಿ ದೇಹಕ್ಕೆ ಅಗತ್ಯವಾದ ನೀರು ಸಿಕ್ಕುವುದಿಲ್ಲ. ಬಾಯಾರಿಕೆ ಆಗದಿರುವುದರಿಂದ ಯಾರೂ ಹೆಚ್ಚು ನೀರು ಸೇವಿಸುವುದಿಲ್ಲ. ಇದರಿಂದ ನಾನಾ ಸಮಸ್ಯೆಗಳು ಆರಂಭವಾಗುತ್ತವೆ. ಸೂರ್ಯನ ಬೆಳಕಿನಲ್ಲಿರುವ ‘ಡಿ’ ವಿಟಮಿನ್ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಹೀಗಾಗಿ ಸೂರ್ಯೋದಯದ ನಂತರದ ವಾಕಿಂಗ್‌ ಉತ್ತಮ. ಚರ್ಮಕ್ಕೆ ಕೊಬ್ಬರಿ ಎಣ್ಣೆ ಅಥವಾ ಲೋಳೆಸರದ ರಸವನ್ನು ಹಚ್ಚಿಕೊಳ್ಳಿ. ಇದರಿಂದ ಚರ್ಮ ಒಡೆಯುವುದು ನಿಲ್ಲುತ್ತದೆ.

ಕಲಬುರಗಿಯ ನಗರದಲ್ಲಿ ಚಳಿ ವಾತಾವರಣ ಹೆಚ್ಚಾಗಿರುವುದರಿಂದ ಮಹಿಳೆಯರು ಮಕ್ಕಳು ಮುಂಜಾನೆ ಬೆಂಕಿ ಕಾಯಿಸುತ್ತಿರುವುದು ಪ್ರಜಾವಾಣಿ ಚಿತ್ರ: ತಾಜುದ್ದೀನ್ ಆಜಾದ್
ಚಳಿಯಿಂದ ರಕ್ತನಾಳಗಳು ಸಂಕುಚಿತಗೊಳ್ಳುತ್ತವೆ. ಇದರಿಂದ ಎದೆನೋವು ಹೃದಯಾಘಾತದ ಸಂಭವ ಹೆಚ್ಚು. ಹೀಗಾಗಿ ಚಳಿಯಲ್ಲಿ ವಾಕಿಂಗ್‌ ಮಾಡಬಾರದು. ಅದರಲ್ಲೂ ಬೆಳಿಗ್ಗೆ 3ರಿಂದ 6 ಗಂಟೆಯ ಒಳಗೆ ವಾಕಿಂಗ್‌ ಮಾಡಲೇಬಾರದು
ಡಾ.ಅರುಣಕುಮಾರ ಹರಿದಾಸ್‌ ಹೃದ್ರೋಗ ತಜ್ಞರು
ಚಳಿಯಿಂದ ದೇಹದ ಉಷ್ಣಾಂಶ ಕಡಿಮೆಯಾದರೆ ಹಸುಳೆಗಳ ಜೀವಕ್ಕೆ ಅಪಾಯ. ಹೀಗಾಗಿ ತಾಯಿ ಕಾಂಗರೂ ಕೇರ್‌ ಮಾಡಬೇಕು. ಮಗುವಿನ ನೆತ್ತಿಯಿಂದ ಉಷ್ಣಾಂಶ ಹೆಚ್ಚಾಗಿ ಬಿಡುಗಡೆಯಾಗುತ್ತದೆ. ಹಾಗಾಗಿ ತಲೆಗೆ ವಸ್ತ್ರ ಕಟ್ಟಬೇಕು. ಕೈಕಾಲುಗಳಿಗೂ ಸಾಕ್ಸ್‌ ಹಾಕಿ
ಡಾ.ಪ್ರಶಾಂತ ಕುಲಕರ್ಣಿ ಮಕ್ಕಳ ತಜ್ಞರು

ಚಳಿಗಾಲದ ಮುನ್ನೆಚ್ಚರಿಕಾ ಕ್ರಮಗಳು

*ಫ್ರಿಡ್ಜ್‌ನಲ್ಲಿರುವ ಆಹಾರಗಳನ್ನು ತ್ಯಜಿಸುವುದು ಒಳ್ಳೆಯದು

*ಆದಷ್ಟು ಬಿಸಿ ಇರುವ ಆಹಾರವನ್ನೇ ಸೇವಿಸಬೇಕು

*ಸಕ್ಕರೆ ಚಳಿಗಾಲದಲ್ಲಿ ರೋಗನಿರೋಧಕ ಶಕ್ತಿ ಕುಂಠಿತಗೊಳಿಸುತ್ತದೆ. ಹಾಗಾಗಿ ತ್ಯಜಿಸುವುದು ಉತ್ತಮ

*ವಿಟಮಿನ್ ‘ಸಿ’ ಹೆಚ್ಚಿರುವ ಆಹಾರ ಪದಾರ್ಥ ಸೇವಿಸಿ

*ಸಲ್ಫರ್ ಅಂಶ ದೇಹದ ಉಷ್ಣತೆ ಕಾಪಾಡುವುದರಿಂದ ಬೆಳ್ಳುಳ್ಳಿ ಬಳಸಿ

*ಕಷಾಯ ನಿಂಬೆ ಹಣ್ಣಿನ ಟೀ ಕುಡಿಯುವುದು ಒಳ್ಳೆಯದು 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.