ADVERTISEMENT

ಅಂಬೇಡ್ಕರ್‌ ಕುರಿತು ಗೃಹ ಸಚಿವ ಅಮಿತ್ ಶಾ ಹೇಳಿಕೆಗೆ ಖಂಡನೆ: ಕಲಬುರಗಿ, ಗದಗ ಬಂದ್‌

ಅಣಕು ಶವಯಾತ್ರೆ, ಪ್ರತಿಕೃತಿ ದಹನ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2024, 0:09 IST
Last Updated 25 ಡಿಸೆಂಬರ್ 2024, 0:09 IST
ಕಲಬುರಗಿ ನಗರದಲ್ಲಿ ಮಂಗಳವಾರ ನಡೆದ ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಜನಸ್ತೋಮ  ಪ್ರಜಾವಾಣಿ ಚಿತ್ರ: ತಾಜುದ್ದೀನ್ ಆಜಾದ್‌
ಕಲಬುರಗಿ ನಗರದಲ್ಲಿ ಮಂಗಳವಾರ ನಡೆದ ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಜನಸ್ತೋಮ  ಪ್ರಜಾವಾಣಿ ಚಿತ್ರ: ತಾಜುದ್ದೀನ್ ಆಜಾದ್‌   

ಕಲಬುರಗಿ/ಗದಗ: ಡಾ.ಬಿ.ಆರ್.ಅಂಬೇಡ್ಕರ್ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ನೀಡಿದ್ದ ಹೇಳಿಕೆ ಖಂಡಿಸಿ ಮಂಗಳವಾರ ಕರೆ ನೀಡಲಾಗಿದ್ದ ಕಲಬುರಗಿ ಮತ್ತು ಗದಗ ಬಂದ್‌ ನಡೆದಿದೆ. 

ಕಲಬುರಗಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಅಮಿತ್‌ ಶಾ ಅವರ ಅಣಕು ಶವಯಾತ್ರೆ ನಡೆಸಿ, ಭಾವಚಿತ್ರ ಹಾಗೂ ಪ್ರತಿಕೃತಿ ದಹಿಸಲಾಯಿತು. ಸಂವಿಧಾನ ರಕ್ಷಣಾ ಸಮಿತಿ ನೀಡಿದ್ದ ಕರೆಗೆ ಹಲವು ಸಂಘಟನೆಗಳು ಬೆಂಬಲಿಸಿದವು. ಬೆಳಿಗ್ಗೆ 6ರಿಂದ ಪ್ರತಿಭಟನೆ ಆರಂಭಿಸಿದ ಹೋರಾಟಗಾರರು, ಸಂಜೆ 4ರವರೆಗೆ ಬೈಕ್ ರ್‍ಯಾಲಿ, ಪಾದಯಾತ್ರೆ, ರಸ್ತೆ ತಡೆ ನಡೆಸಿ, ಟೈರ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. 

ಬಹುತೇಕ ಕಡೆ ವ್ಯಾಪಾರಸ್ಥರು ಸ್ವಯಂಪ್ರೇರಣೆಯಿಂದ ಅಂಗಡಿಗಳನ್ನು ಮುಚ್ಚಿದ್ದರು. ಸಾರಿಗೆ ಸಂಸ್ಥೆಯ ಬಸ್‌ಗಳ ಸಂಚಾರ ಸ್ಥಗಿತಗೊಂಡಿತ್ತು. ಆಟೊ ಸಂಚಾರವೂ ವಿರಳವಾಗಿತ್ತು. ಮುನ್ನೆಚ್ಚರಿಕಾ ಕ್ರಮವಾಗಿ ಶಾಲೆಗಳಿಗೆ ರಜೆ ನೀಡಲಾಗಿತ್ತು.

ADVERTISEMENT

ಶಹಬಜಾರ್‌ನಲ್ಲಿ ಬಡಿಗೆಗಳನ್ನು ಹಿಡಿದ ಯುವಕರ ಗುಂಪೊಂದು ಬಲವಂತವಾಗಿ ಅಂಗಡಿ ಮುಚ್ಚಿಸಿತು. ಕಾಕಡೆ ಚೌಕ್‌ನಲ್ಲಿ ಬೈಕ್‌, ಬೇಲೂರ ಕ್ರಾಸ್‌ನಲ್ಲಿ ಲಾರಿ ಮೇಲೆ ಪ್ರತಿಭಟನಕಾರರಿಂದ ದಾಳಿ ನಡೆದು, ವಾಹನಗಳು ಜಖಂಗೊಂಡವು. 

ಎಪಿಎಂಸಿ ಆವರಣಕ್ಕೆ ನುಗ್ಗಿದ ಗುಂಪೊಂದು, ಕಾರ್ಮಿಕ ಮಲ್ಲಿಕಾರ್ಜುನ ಮೇಲೆ ಹಲ್ಲೆ ನಡೆಸಿ ಗಾಯಗೊಳಿಸಿತು. ಅಂಗಡಿಯ ಬ್ಯಾನರ್‌ ಸಹ ಹರಿಯಿತು. ಇದಕ್ಕೆ ವರ್ತಕರು ಆಕ್ರೋಶ ವ್ಯಕ್ತಪಡಿಸಿದಾಗ, ಸಂಘಟನೆಗಳ ಮುಖಂಡರು ಮಧ್ಯ ಪ್ರವೇಶಿಸಿ ಸಮಾಧಾನಪಡಿಸಿದರು. 

ಹುಮನಾಬಾದ್ ರಸ್ತೆಯ ಪದ್ಮಾವತಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಮದುವೆಗೆ ರಸ್ತೆ ತಡೆಯಿಂದಾಗಿ ಅಡಚಣೆಯಾಯಿತು. ಮದುವೆ ಶಾಸ್ತ್ರ ಮಾಡುವವರು ಮಾರ್ಗ ಮಧ್ಯೆ ಸಿಲುಕಿದ್ದರಿಂದ ಮಧ್ಯಾಹ್ನ 1.30ರ ಬಳಿಕ ಅಕ್ಷತೆ ನೆರವೇರಿತು.

ಗದಗಿನ ಮುಳಗುಂದ ನಾಕಾದಲ್ಲಿ ರಸ್ತೆ ತಡೆ ನಡೆಸಿದ ಪ್ರತಿಭಟನಕಾರರು ಅಮಿತ್‌ ಶಾ ಅವರ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.  ‘ಜೈ ಭೀಮ್‌’ ಘೋಷಣೆ ಕೂಗಿದರು. ಅಂಬೇಡ್ಕರ್‌ ಕುರಿತಾದ ಕ್ರಾಂತಿಗೀತೆ ಮೊಳಗಿಸಿದರು. ನಗರದೆಲ್ಲೆಡೆ ಬೈಕ್‌ ರ‍್ಯಾಲಿ ನಡೆಸಿ, ಗಾಂಧಿ ವೃತ್ತದಲ್ಲಿ ಜಮಾಯಿಸಿದರು. ಬಳಿಕ ಸಾರ್ವಜನಿಕ ಸಮಾವೇಶ ನಡೆಯಿತು.

ಶಾ ಅವರನ್ನು ತಕ್ಷಣವೇ ಸಂಪುಟದಿಂದ ವಜಾಗೊಳಿಸಬೇಕು, ಅಮಿತ್‌ ಶಾ ಅವರು ಅಂಬೇಡ್ಕರ್‌ ಪ್ರತಿಮೆ ಎದುರಿಗೆ ಮಂಡಿಯೂರಿ ಕುಳಿತು ದೇಶದ ಜನರ ಕ್ಷಮೆ ಕೇಳಬೇಕು’ ಎಂದು ಆಗ್ರಹಿಸಿ ದಲಿತ ಸಂಘರ್ಷ ಸಮಿತಿಯು 20ಕ್ಕೂ ಹೆಚ್ಚು ಸಂಘಟನೆಗಳ ಜತೆಗೂಡಿ ಕರೆ ನೀಡಿದ್ದ ಗದಗ ಬಂದ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. 

ಬೆಳಿಗ್ಗೆ 6ಕ್ಕೆ ಆರಂಭಗೊಂಡ ಬಂದ್‌ ಮಧ್ಯಾಹ್ನ 2 ಗಂಟೆವರೆಗೆ ನಡೆಯಿತು. ಅಂಗಡಿ, ಹೋಟೆಲ್‌, ತರಕಾರಿ ಮಾರುಕಟ್ಟೆ ಸೇರಿದಂತೆ ಹಲವು ವ್ಯಾಪಾರಸ್ಥರು ಸ್ವಯಂಪ್ರೇರಿತರಾಗಿ ಅಂಗಡಿಗಳನ್ನು ಬಂದ್‌ ಮಾಡಿ, ಬೆಂಬಲ ಸೂಚಿಸಿದರು. ಬಂದ್‌ ಶಾಂತಿಯುತವಾಗಿ ನಡೆಯಿತು.

ಬಂದ್‌ ಕಾರಣದಿಂದ ನಗರ ವ್ಯಾಪ್ತಿಯ ಎಲ್ಲ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ಸಾರಿಗೆ ಬಸ್‌ಗಳ ಸಂಚಾರ ಮಾರ್ಗ ಬದಲಾಯಿಸಿದ್ದರಿಂದ ಸಾರ್ವಜನಿಕರು ತೊಂದರೆ ಅನುಭವಿಸಿದರು. ಭದ್ರತೆಗೆ 500 ಮಂದಿ ಪೊಲೀಸ್‌ ಸಿಬ್ಬಂದಿ ನಿಯೋಜಿಸಲಾಗಿತ್ತು. ವಿವಿಧ ಸಂಘಟನೆಗಳ ಒಂದು ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು.

ಹುಮನಾಬಾದ್‌ ಬಂದ್‌ ಯಶಸ್ವಿ: ಜನಪರ ಸಂಘಟನೆಗಳ ಒಕ್ಕೂಟದಿಂದ ಕರೆ ನೀಡಿದ್ದ ಹುಮನಾಬಾದ್‌ ಬಂದ್‌ ಯಶಸ್ವಿಗೊಂಡಿತು. ಸಂಘ–ಸಂಸ್ಥೆಗಳು, ವರ್ತಕರೂ ಬೆಂಬಲಿಸಿದ್ದರಿಂದ ವಹಿವಾಟು ನಡೆಯಲಿಲ್ಲ. ವಾಹನಗಳೂ ರಸ್ತೆಗಿಳಿಯಲಿಲ್ಲ.

4 ಕಿ.ಮೀ. ಶವಯಾತ್ರೆ

ಕಲಬುರಗಿಯ ಗಂಜ್ ಪ್ರದೇಶದ ನಗರೇಶ್ವರ ಶಾಲೆಯಿಂದ 4 ಕಿ.ಮೀ. ದೂರದಲ್ಲಿದ್ದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಕಾರರು ಅಮಿತ್ ಶಾ ಅವರ ಅಣಕು ಶವಯಾತ್ರೆ ಮಾಡಿದರು. ‘ದೇಶ ದ್ರೋಹಿ’, ‘ಸಂವಿಧಾನ ವಿರೋಧಿ’ ಎಂದು ಘೋಷಣೆ ಕೂಗಿ, ರಾಜೀನಾಮೆಗೂ ಒತ್ತಾಯಿಸಿದರು.

‘ಕಲಬುರಗಿ ಬಂದ್’ ಕರೆ ನೀಡಿದ್ದರಿಂದ ಕಲಬುರಗಿ ನಗರದಲ್ಲಿ ಮಂಗಳವಾರ ನಡೆದ ಪ್ರತಿಭಟನಾ ಮೆರವಣಿಗೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಅಣಕು ಶವಯಾತ್ರೆ ನಡೆಯಿತು ಪ್ರಜಾವಾಣಿ ಚಿತ್ರ: ತಾಜುದ್ದೀನ್ ಆಜಾದ್‌
ದಲಿತ ಸಂಘರ್ಷ ಸಮಿತಿಯು ವಿವಿಧ ಸಂಘಟನೆಗಳ ಜತೆಗೂಡಿ ಮಂಗಳವಾರ ಕರೆನೀಡಿದ್ದ ಗದಗ ಬಂದ್‌ನಲ್ಲಿ ಸಾವಿರಾರು ಮಂದಿ ಭಾಗವಹಿಸಿದ್ದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.