ಕಲಬುರಗಿಯಲ್ಲಿ ಭಾನುವಾರ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಶಾಖಾ ಕಟ್ಟಡವನ್ನು ಉದ್ಘಾಟಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಜಯದೇವ ಸಂಸ್ಥೆಯ ನಿರ್ದೇಶಕ ಡಾ.ಕೆ.ಎಸ್. ರವೀಂದ್ರನಾಥ್ ಮಾಹಿತಿ ನೀಡಿದರು.
ಕಲಬುರಗಿ: ಎಐಸಿಸಿ ಅಧ್ಯಕ್ಷ, ರಾಜ್ಯಸಭೆ ವಿರೋಧ ಪಕ್ಷದ ನಾಯಕರೂ ಆದ ಮಲ್ಲಿಕಾರ್ಜುನ ಖರ್ಗೆ ಅವರ ಬೇಡಿಕೆಯ ಮೇರೆಗೆ ಕಲಬುರಗಿಯಲ್ಲಿ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆಯ (ನಿಮ್ಹಾನ್ಸ್) ಶಾಖೆ ಆರಂಭಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಜೊತೆಗೆ ಕಲ್ಯಾಣ ಕರ್ನಾಟಕದಲ್ಲಿನ ಖಾಲಿ ಹುದ್ದೆಗಳನ್ನು ಶೀಘ್ರ ಭರ್ತಿ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.
ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಕಲಬುರಗಿ ಶಾಖೆಯ ನೂತನ ಕಟ್ಟಡವನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದ ಅವರು, ‘ಕಲಬುರಗಿಯಲ್ಲಿ ನೂತನ ಡಯಾಬಿಟಾಲಜಿ ಘಟಕ ಸ್ಥಾಪನೆ ಮಾಡಲಾಗುವುದು. ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ದಶಕಗಳಿಂದ ಖಾಲಿ ಉಳಿದಿರುವ ಬೋಧಕ– ಬೋಧಕೇತರ ಸಿಬ್ಬಂದಿ ನೇಮಕ ಮಾಡಲಾಗುವುದು’ ಎಂದರು.
ನಿಮ್ಹಾನ್ಸ್ ಶಾಖೆ ಕಲಬುರಗಿಯಲ್ಲಿ ಆರಂಭಿಸುವ ಬಗ್ಗೆ ಬೇಗ ತೀರ್ಮಾನ ತೆಗೆದುಕೊಳ್ಳುವಂತೆ ವೇದಿಕೆಯಲ್ಲಿದ್ದ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ ಅವರಿಗೆ ಸೂಚಿಸಿದ ಮುಖ್ಯಮಂತ್ರಿ, ‘ಮೈಸೂರಿಗೂ ನಿಮ್ಹಾನ್ಸ್ ಘಟಕದ ಅಗತ್ಯವಿದ್ದು ಅದನ್ನು ಮರೆಯಬೇಡ’ ಎಂದು ಹೇಳಿದರು. ಆ ಮೂಲಕ ಮೈಸೂರಿನಲ್ಲೂ ಒಂದು ಶಾಖೆ ಆರಂಭಿಸುವ ಇಂಗಿತ ವ್ಯಕ್ತಪಡಿಸಿದರು.
‘ನಮ್ಮ ಸರ್ಕಾರ ಹಳೆ ಮೈಸೂರು, ಕಲ್ಯಾಣ ಕರ್ನಾಟಕ, ಮುಂಬೈ ಕರ್ನಾಟಕ, ಕರಾವಳಿ ಕರ್ನಾಟಕದ ಮಧ್ಯೆ ಯಾವುದೇ ಭೇದ ಭಾವ ಮಾಡುವುದಿಲ್ಲ. ಪ್ರಾದೇಶಿಕ ಅಸಮಾನತೆ ನಿವಾರಿಸಲು ನಾವು ಬದ್ಧರಾಗಿದ್ದೇವೆ. ಅದಕ್ಕೆಂದೇ ಮಲ್ಲಿಕಾರ್ಜುನ ಖರ್ಗೆ, ದಿ. ಧರ್ಮಸಿಂಗ್ ಅವರ ಪ್ರಯತ್ನದ ಫಲವಾಗಿ 371 (ಜೆ) ಕಲಂ ಜಾರಿಗೆ ಬಂದಿದೆ. ಅದಾದ ಬಳಿಕ ಇದುವರೆಗೆ 80 ಸಾವಿರ ಹುದ್ದೆಗಳನ್ನು ಈ ಭಾಗದಲ್ಲಿ ನೇಮಕ ಮಾಡಿಕೊಳ್ಳಲಾಗಿದೆ’ ಎಂದರು.
‘ನಮ್ಮ ಸರ್ಕಾರ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದ್ದು, ಅವರು ನೆಲೆಸಿದ್ದ ಬಸವಕಲ್ಯಾಣದಲ್ಲಿ ಅನುಭವ ಮಂಟಪ ನಿರ್ಮಿಸುವ ಕಾರ್ಯ ಅರ್ಧ ಪೂರ್ಣಗೊಂಡಿದೆ. ಉಳಿದ ಕೆಲಸಕ್ಕೆ ಅಗತ್ಯವಿರುವ ಹಣವನ್ನೂ ಒದಗಿಸಿ ಶೀಘ್ರ ಪೂರ್ಣಗೊಳಿಸಲಾಗುವುದು’ ಎಂದು ಸಿದ್ದರಾಮಯ್ಯ ಅವರು ಭರವಸೆ ನೀಡಿದರು.
ತೊಗರಿ ಬೆಳೆ ನೆಟೆ ರೋಗದಿಂದ ಹಾನಿಯಾಗಿದ್ದಕ್ಕೆ ಪರಿಹಾರಕ್ಕೆ ಈ ಭಾಗದ ಸಚಿವರು ಶಾಸಕರು ಬೇಡಿಕೆ ಇಟ್ಟಿದ್ದಾರೆ. ಈ ಬಗ್ಗೆ ಅಧಿಕಾರಿಗಳಿಂದ ವರದಿ ಕೇಳಿದ್ದೇನೆ. ವರದಿ ಬಂದ ಕೂಡಲೇ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದುಸಿದ್ದರಾಮಯ್ಯ ಮುಖ್ಯಮಂತ್ರಿ
ಕಲ್ಯಾಣ ಕರ್ನಾಟಕ ಭಾಗದ ಸಚಿವರು ಅಭಿವೃದ್ಧಿ ಕೆಲಸಗಳಿಗಾಗಿ ಸದಾ ಮುಖ್ಯಮಂತ್ರಿ ಅವರ ಬೆನ್ನು ಹತ್ತಬೇಕು. ಅವರು ಸಿಟ್ಟು ಮಾಡಿಕೊಂಡರೂ ಬೇಸರಿಸಿಕೊಳ್ಳದೇ ವಿವಿಧ ಕೆಲಸಗಳನ್ನು ಹೇಳುತ್ತಿರಬೇಕುಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷ ರಾಜ್ಯಸಭೆ ವಿರೋಧ ಪಕ್ಷದ ನಾಯಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.