ಸಾಂದರ್ಭಿಕ ಚಿತ್ರ
ಐಸ್ಟಾಕ್ ಚಿತ್ರ
ಕಲಬುರಗಿ: ಕಲ್ಯಾಣ ಕರ್ನಾಟಕಕ್ಕೆ ಕೇಂದ್ರ ಬಜೆಟ್‌ನಲ್ಲಿ ಈ ಬಾರಿಯಾದರೂ ಏನಾದರೂ ‘ಪ್ರಸಾದ’ ಸಿಗಬಹುದೇ ಎಂಬ ಆಸೆ ಹುಸಿಯಾಗಿದ್ದು, ಕಲ್ಯಾಣದ ಆಶೋತ್ತರಗಳ ಬಗ್ಗೆ ಕೇಂದ್ರ ಸರ್ಕಾರವು ಮತ್ತೆ ತಣ್ಣೀರು ಎರಚುವ ಮೂಲಕ ಕಲ್ಯಾಣಕ್ಕೆ ಮತ್ತೆ ಅನ್ಯಾಯದ ಸರಣಿ ಮುಂದುವರೆದಿದೆ.
ಕಲ್ಯಾಣ ಕರ್ನಾಟಕದ ಪ್ರಾದೇಶಿಕ ಕೇಂದ್ರವಾದ ಕಲಬುರಗಿಗೆ ವಿಭಾಗೀಯ ರೈಲ್ವೆ ಕೇಂದ್ರವಾಗಿ ಘೋಷಿಸಿ ಅಗತ್ಯ ಅನುದಾನ ನೀಡಬೇಕು ಎಂಬುದು ನಾಲ್ಕು ದಶಕಗಳ ಬೇಡಿಕೆ. ಆ ಬಗ್ಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಬಜೆಟ್‌ನಲ್ಲಿ ಯಾವುದೇ ಪ್ರಸ್ತಾಪ ಮಾಡಿಲ್ಲ. ಕಲಬುರಗಿಯಲ್ಲಿ ಬೆಳೆಯಲಾಗುವ ತೊಗರಿಯನ್ನು ಸಂಸ್ಕರಿಸಿ ಬೇಳೆ ಮಾಡುವ ದಾಲ್ ಮಿಲ್‌ಗಳನ್ನು ಕೃಷಿ ಆಧಾರಿತ ಉದ್ಯಮ ಎಂದು ಪರಿಗಣಿಸಬೇಕು ಎಂಬುದು ದಶಕಗಳ ಬೇಡಿಕೆ. ಅದಕ್ಕೂ ಮನ್ನಣೆ ಸಿಕ್ಕಿಲ್ಲ.
371 (ಜೆ) ತಿದ್ದುಪಡಿ ಕಾಯ್ದೆ ಜಾರಿಯಾಗಿ 12 ವರ್ಷಗಳಾಗಿದ್ದು, ಕಲ್ಯಾಣ ಕರ್ನಾಟಕದ ಅಭಿವೃದ್ಧಿ ಯೋಜನೆಗಳಿಗೆ ವೇಗ ನೀಡಲು ರಾಜ್ಯ ಸರ್ಕಾರ ನೀಡುವಷ್ಟೇ ಅನುದಾನವನ್ನು ಕೇಂದ್ರವೂ ನೀಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರಕ್ಕೆ ಬೇಡಿಕೆ ಇಟ್ಟಿದ್ದರು. ಅನುದಾನ ನೀಡುವ ಬಗ್ಗೆಯೂ ಘೋಷಣೆ ಹೊರಬಿದ್ದಿಲ್ಲ. ಇದರಿಂದಾಗಿ ರಾಜ್ಯ ಸರ್ಕಾರದ ವಾರ್ಷಿಕ ₹ 5 ಸಾವಿರ ಕೋಟಿ ಅನುದಾನವನ್ನೇ ಕಲ್ಯಾಣ ಭಾಗದ ಏಳು ಜಿಲ್ಲೆಗಳು ಹಂಚಿಕೊಳ್ಳಬೇಕಿದೆ.
ರಾಯಚೂರಿಗೆ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್)ಯನ್ನು ಮಂಜೂರು ಮಾಡಬೇಕು ಎಂದು ರಾಜ್ಯ ಸರ್ಕಾರವೇ ಪ್ರಧಾನಮಂತ್ರಿ ಹಾಗೂ ಕೇಂದ್ರ ಆರೋಗ್ಯ ಸಚಿವರಿಗೆ ಅಧಿಕೃತವಾಗಿ ಮನವಿ ಸಲ್ಲಿಸಿದೆ. ಉತ್ತರ ಪ್ರದೇಶ ಸೇರಿದಂತೆ ಉತ್ತರ ಭಾರತದ ರಾಜ್ಯಗಳಿಗೆ ಏಮ್ಸ್ ಮಂಜೂರಾತಿಯಲ್ಲಿ ತೋರಿಸಿದ ಉತ್ಸುಕತೆಯನ್ನು ಕರ್ನಾಟಕದಲ್ಲಿ ಏಮ್ಸ್ ಸ್ಥಾಪನೆಗೆ ತೋರಿಸಿಲ್ಲ ಎಂಬ ಟೀಕೆಗಳಿಗೆ ಕೇಂದ್ರವೇ ಇಂಬು ಕೊಟ್ಟಂತಾಗಿದೆ.
ಈಗಾಗಲೇ ಪ್ರಗತಿಯಲ್ಲಿರುವ ಗದಗ–ವಾಡಿ ರೈಲ್ವೆ ಮಾರ್ಗ ನಿರ್ಮಾಣಕ್ಕೆ ಕಳೆದ ವರ್ಷ ₹ 549 ಕೋಟಿ ಹಣ ಹಂಚಿಕೆ ಮಾಡಲಾಗಿತ್ತು. ಈ ವರ್ಷ ಎಷ್ಟು ಹಂಚಿಕೆಯಾಗಿದೆ ಎಂಬ ಬಗ್ಗೆ ರೈಲ್ವೆ ಪಿಂಕ್ ಸ್ಲಿಪ್ ಲಭ್ಯವಾದ ಬಳಿಕ ಗೊತ್ತಾಗಲಿದೆ.
ಕಲ್ಯಾಣ ಕರ್ನಾಟಕದ ಕಲಬುರಗಿ, ಬೀದರ್, ಯಾದಗಿರಿ, ವಿಜಯಪುರ ಜಿಲ್ಲೆಗಳಲ್ಲಿ ಹೆಚ್ಚಾಗಿ ಬೆಳೆಯುವ ತೊಗರಿ ಬೆಳೆಗೆ ಉತ್ತೇಜನ ನೀಡಲು ಕ್ರಮಗಳನ್ನು ಪ್ರಕಟಿಸುವ ನಿರೀಕ್ಷೆ ಇತ್ತು. ಆ ಬಗ್ಗೆಯೂ ಪ್ರಸ್ತಾಪವಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.