ADVERTISEMENT

ಕಲಾ ವಿಭಾಗದತ್ತ ವಿಜ್ಞಾನದ ವಿದ್ಯಾರ್ಥಿಗಳು!

ಕಮಲಾಪುರದಲ್ಲಿ ಬಿಎಸ್ಸಿ ಕಲಿಯಲು ಇಲ್ಲ ಅವಕಾಶ; ಜಿಲ್ಲಾ ಕೇಂದ್ರಕ್ಕೆ ತೆರಳಬೇಕಾದ ಅನಿವಾರ್ಯತೆ ಸೃಷ್ಟಿ

ತೀರ್ಥಕುಮಾರ
Published 30 ಜೂನ್ 2022, 5:17 IST
Last Updated 30 ಜೂನ್ 2022, 5:17 IST
ಕಮಲಾಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು
ಕಮಲಾಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು   

ಕಮಲಾಪುರ: ಅಗತ್ಯ ಮೂಲ ಸೌಕರ್ಯ ಗಳಿದ್ದರೂ ಕಮಲಾಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿಎಸ್‌ಸಿ ಪದವಿ ಕೋರ್ಸ್‌ ಆರಂಭವಾಗದ ಕಾರಣ ಪಿಯು ವಿಜ್ಞಾನದ ವಿದ್ಯಾರ್ಥಿಗಳು ಕಲಾವಿಭಾಗಕ್ಕೆ ಸೇರುವ ಅನಿವಾರ್ಯತೆ ಸೃಷ್ಟಿಯಾಗಿದೆ.

ತಾಲ್ಲೂಕು ಕೇಂದ್ರವಾದ ಕಮಲಾಪುರದಲ್ಲಿ ಎರಡು ಸರ್ಕಾರಿ ಪದವಿ ಪೂರ್ವ ಕಾಲೇಜುಗಳಿವೆ. ಮಹಾಗಾಂವದಲ್ಲಿ 1 ಖಾಸಗಿ, ಸರ್ಕಾರಿ ಪದವಿ ಪೂರ್ವ ಕಾಲೇಜು ಇವೆ. ಇಲ್ಲಿನ ವಿಜ್ಞಾನ ವಿಭಾಗದಿಂದ ಪ್ರತಿ ವರ್ಷ ಸುಮಾರು 50 ವಿದ್ಯಾರ್ಥಿಗಳು ಹೊರ ಬರುತ್ತಾರೆ. ಕೋವಿಡ್‌ನಿಂದಾಗಿ ಕಳೆದ ಬಾರಿ ಎಲ್ಲರೂ ತೇರ್ಗಡೆ ಹೊಂದಿದ್ದಾರೆ. ಇವರಲ್ಲಿ ಬಹುತೇಕರು ವಿಜ್ಞಾನ ಪದವಿ ಓದಲು ಆಸಕ್ತಿ ಉಳ್ಳವರಾಗಿದ್ದರು. ಗ್ರಾಮೀಣ ಪ್ರದೇಶದ ಈ ವಿದ್ಯಾರ್ಥಿಗಳಿಗೆ ಕಲಬುರಗಿಗೆ ತೆರಳಲು ಸಾಧ್ಯವಾಗದೇ ಕಲಾವಿಭಾಗಕ್ಕೆ ಸೇರಿದ್ದಾರೆ.

ಕಮಲಾಪುರದಲ್ಲಿ ವಿಜ್ಞಾನ ವಿಭಾಗ ವಿಷಯಗಳ ಆಯ್ಕೆಗೆ ಅವಕಾಶವಿಲ್ಲ. ಅನೇಕ ವಿದ್ಯಾರ್ಥಿಗಳು ಅನಿವಾರ್ಯವಾಗಿ ಕಲಾ ವಿಭಾಗದಲ್ಲಿ ದಾಖಲಾತಿ ಪಡೆದುಕೊಂಡು ತಮ್ಮ ವಿದ್ಯಾಭ್ಯಾಸ ಮುಂದು ವರೆಸಿದ್ದಾರೆ. ತಮಗಿಷ್ಟದ ವಿಷಯದ ಆಯ್ಕೆಗೆ ಅವಕಾಶ ನೀಡದ ಸರ್ಕಾರ, ವ್ಯವಸ್ಥೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ADVERTISEMENT

1992 ರಲ್ಲಿ ಆರಂಭಗೊಂಡಿರುವ ಕಮಲಾಪುರದ ಪ್ರಥಮ ದರ್ಜೆ ಕಾಲೇಜು 2018 ರಲ್ಲೆ ನ್ಯಾಕ್‌ನಿಂದ ಬಿ ಗ್ರೇಡ್‌ ಮಾನ್ಯತೆ ಪಡೆದಿದೆ. ಯುಜಿಸಿಯ 12 ಬಿ, 2ಎಫ್ ಹೊಂದಿದೆ. ಈ ಕಾಲೇಜಿನಲ್ಲಿ ಬಿಎ, ಬಿಕಾಂ, ಬಿಬಿಎಂ ಪದವಿ ಕೋರ್ಸ್‌, ಕನ್ನಡ, ಇಂಗ್ಲಿಷ್‌, ಹಿಂದಿ, ಸಮಾಜಶಾಸ್ತ್ರ, ಅರ್ಥಶಾಸ್ತ್ರ ಸ್ನಾತಕೋತ್ತರ ಪದವಿ ಕೋರ್ಸ್‌ ಹಾಗೂ ಎಂ.ಕಾಂ ಕೋರ್ಸ್‌ ಆರಂಭಿಸಲಾಗಿದೆ.

ಸುಸಜ್ಜಿತ ಕಟ್ಟಡ ಹೊಂದಿರುವ ಈ ಕಾಲೇಜಿನಲ್ಲಿ ಪೀಠೋಪಕರಣಗಳ ಸಹಿತ 34 ತರಗತಿ ಕೋಣೆಗಳಿವೆ. 40 ಗಣಕಯಂತ್ರಗಳಿವೆ.ಇನ್‌ವರ್ಟರ್‌, ಬ್ಯಾಟರಿ, 9 ಸ್ಮಾರ್ಟ್‌ಕ್ಲಾಸ್‌, 11 ಪ್ರೊಜೆಕ್ಟರ್‌, 10 ಸ್ಕ್ರೀನ್‌, ಎಲ್‌ಸಿಡಿ, ಎಜುಸ್ಯಾಟ್ ಯುನಿಟ್‌, ಬ್ರಾಡ್‌ಬ್ಯಾಂಡ್‌ ಸೌಲಭ್ಯ, ಡಿಜಿಟಲ್‌ ಲಾಂಗ್ವೇಸ್‌ ಲ್ಯಾಬ್‌, ಶೌಚಾಲಯ, ಆಟದ ಮೈದಾನ ಸೇರಿದಂತೆ ಎಲ್ಲ ಸೌಲಭ್ಯಗಳಿವೆ.

ಜಂಟಿ ನಿರ್ದೇಶಕರ ನಿರ್ಲಕ್ಷ: ಕಮಲಾಪುರ ಪದವಿ ಕಾಲೇಜಿನಲ್ಲಿ ಬಿಎಸ್‌ಸಿ ಕೋರ್ಸ್‌ ಆರಂಭಿಸಲು ಅನುಮತಿ ನೀಡುವಂತೆ ಒತ್ತಾಯಿಸಿ ಕಳೆದ 2018ರ ಫೆ.27 ರಂದು ಅಂದಿನ ಪ್ರಾಚಾರ್ಯರು ಕಲಬುರಗಿಯ ಜಂಟಿ ನಿರ್ದೇಶಕರು ಹಾಗೂ ಕಾಲೇಜು ಶಿಕ್ಷಣ ಆಯುಕ್ತರಿಗೆ ಪ‍್ರಸ್ತಾವ ಸಲ್ಲಿಸಿದ್ದರು. 2018ರ ಫೆ.28 ರಂದು ಜಂಟಿ ನಿರ್ದೇಶಕರು ಸಹ ಕಾಲೇಜು ಶಿಕ್ಷಣ ಆಯುಕ್ತರಿಗೆ ಯಥಾವತ್ತಾಗಿ ಪತ್ರ ಬರೆದಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಕಾಲೇಜು ಶಿಕ್ಷಣ ಆಯುಕ್ತರು ‘ಕಮಲಾಪುರ ಕಾಲೇಜಿನಲ್ಲಿ ಬಿಎಸ್‌ಸಿ ಕೋರ್ಸ್‌ ಆರಂಭಿಸಲು ಅನುಮತಿ ನೀಡುವಂತೆ ಅಲ್ಲಿನ ಪ್ರಾಚಾರ್ಯರು ಸಲ್ಲಿಸಿದ ಪ್ರಸ್ತಾವನೆಯನ್ನೇ ಯಥಾವತ್ತಾಗಿ ತಮ್ಮ ಮುಂದಿನ ಕ್ರಮಕ್ಕಾಗಿ ಎಂದು ಕಚೇರಿಗೆ ಕಳುಹಿಸಲಾಗಿದೆ. ಕಾಲೇಜಿಗೆ ಖುದ್ದು ಭೇಟಿ ನೀಡಿ ಬಿಎಸ್‌ಸಿ ಕೋರ್ಸ್‌ ಆರಂಭಕ್ಕೆ ಅಗತ್ಯವಿರುವ ಮೂಲ ಸೌಕರ್ಯಗಳ ಪರಿಶೀಲನೆ ನಡೆಸಿ ಸಮಂಜಸವಾದ ವರದಿ ನೀಡಿಲ್ಲ. ಹಾಗಾಗಿ ತಮ್ಮ ಅಭಿಪ್ರಾಯದೊಂದಿಗೆ ವಸ್ತುನಿಷ್ಠ ವರದಿಯನ್ನು ಮತ್ತೆ ಕಚೇರಿಗೆ ಸಲ್ಲಿಸುವಂತೆ ಕಾಲೇಜು ಶಿಕ್ಷಣ ಜಂಟಿ ನಿರ್ದೇಶಕರಿಗೆ ವಾಪಸ್‌ ಪತ್ರ ಬರೆದಿದ್ದರೂ ಅದಕ್ಕೆ ಜಂಟಿ ನಿರ್ದೇಶಕರು ಇದುವರಗೆ ಉತ್ತರ ಕಳುಹಿಸಿಲ್ಲ. ಜಂಟಿ ನಿರ್ದೇಶಕರ ಈ ನಡೆ ಕಮಲಾಪುರ ಜನರ ಆಕ್ರೋಶಕ್ಕೆ ಕಾರಣವಾಗಿದೆ.

’ಸಂಬಂಧಪಟ್ಟವರ ಜತೆ ಚರ್ಚಿಸಿ ಕಮಲಾಪುರದಲ್ಲಿ ಅತೀ ಶೀಘ್ರದಲ್ಲಿ ಬಿಎಸ್‌ಸಿ ಕೋರ್ಸ್‌ ಆರಂಭಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ಶಾಸಕ ಬಸವರಾಜ ಮತ್ತಿಮಡು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.