ADVERTISEMENT

ಜಾತ್ರೆಗಳು ಜ್ಞಾನವಾಹಿನಿಗೆ ವೇದಿಕೆಯಾಗಲಿ: ವೈಜನಾಥ ತಡಕಲ್

ಅಂಕಲಗಾ ಮಹಾಲಕ್ಷ್ಮೀ ಜಾತ್ರೆ: ಮಹಾಲಕ್ಷ್ಮೀ ಚರಿತ್ರೆ ಪುಸ್ತಕ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2025, 6:46 IST
Last Updated 13 ಡಿಸೆಂಬರ್ 2025, 6:46 IST
ಕಮಲಾಪುರ ತಾಲ್ಲೂಕಿನ ಅಂಕಲಗಾ ಗ್ರಾಮದಲ್ಲಿ ಶ್ರೀನಿವಾಸ ಸರಡಗಿಯ ರೇವಣಸಿದ್ದ ಶಿವಾಚಾರ್ಯರು ಶುಕ್ರವಾರ ಅಂಕಲಗಾ ಮಹಾಲಕ್ಷ್ಮೀ ಚರಿತ್ರೆ ಪುಸ್ತಕ ಬಿಡುಗಡೆಗೊಳಿಸಿದರು
ಕಮಲಾಪುರ ತಾಲ್ಲೂಕಿನ ಅಂಕಲಗಾ ಗ್ರಾಮದಲ್ಲಿ ಶ್ರೀನಿವಾಸ ಸರಡಗಿಯ ರೇವಣಸಿದ್ದ ಶಿವಾಚಾರ್ಯರು ಶುಕ್ರವಾರ ಅಂಕಲಗಾ ಮಹಾಲಕ್ಷ್ಮೀ ಚರಿತ್ರೆ ಪುಸ್ತಕ ಬಿಡುಗಡೆಗೊಳಿಸಿದರು   

ಕಮಲಾಪುರ: ‘ಜಾತ್ರೆಗಳು ಕೇವಲ ಧಾರ್ಮಿಕ ಕಾರ್ಯಕ್ರಮ, ವಾದ್ಯಮೇಳ, ಮನೋರಂಜನೆ, ಮೆರವಣಿಗೆಯನ್ನು ಒಳಗೊಂಡ ಉತ್ಸವಕ್ಕೆ ಸೀಮಿತವಾಗದೆ, ಜನರಿಗೆ ಅರಿವು ಮೂಡಿಸುವ ಜ್ಞಾನವಾಹಿನಿಗೆ ವೇದಿಕೆ ಆಗಬೇಕು ಎಂದು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ವೈಜನಾಥ ತಡಕಲ್ ತಿಳಿಸಿದರು.

ತಾಲ್ಲೂಕಿನ ಅಂಕಲಗಿ ಗ್ರಾಮದಲ್ಲಿ ಮಹಾಲಕ್ಷ್ಮೀದೇವಿ ಜಾತ್ರೆ ನಿಮಿತ್ತ ಶುಕ್ರವಾರ ಆಯೋಜಿಸಿದ್ದ ಧಾರ್ಮಿಕ ಸಭೆ ಹಾಗೂ ಶಿಕ್ಷಕ ಅಂಬಾರಾಯ ಮಡ್ಡೆ ಅವರು ರಚಿಸಿದ ‘ಅಂಕಲಗಾ ಗ್ರಾಮ ದೇವತೆ ಮಹಾಲಕ್ಷ್ಮೀ ಚರಿತ್ರೆ’ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದರು.

‘ಪ್ರತಿ ಗ್ರಾಮಕ್ಕೂ ಐತಿಹಾಸಿಕ ಪರಂಪರೆ ಇರುತ್ತದೆ. ಆ ಪರಂಪರೆ ದಾಖಲಾಗಬೇಕಾದರೆ ಪುಸ್ತಕ ರೂಪ ಪಡೆಯಬೇಕು. ಗ್ರಾಮ ದೇವತೆ, ದೈವದ ಕುರಿತು ಪುಸ್ತಕಗಳನ್ನು ಹೊರತರುವುದರಿಂದ ಆಯಾ ಗ್ರಾಮದಲ್ಲಿ ಹಿಂದೆ ನಡೆದ ಘಟನೆಗಳು, ಜನರ ಬದುಕು, ಆಚಾರ, ವಿಚಾರ ಮತ್ತಿತರ ಸಂಗತಿಗಳನ್ನೊಳಗೊಂಡ ಇತಿಹಾಸ ದಾಖಲಾಗುತ್ತದೆ. ಶಿಕ್ಷಕ ಅಂಬಾರಾಯ ಮಡ್ಡೆಯವರ ಮೂಲಕ ಅಂಕಲಗಾ ಗ್ರಾಮಸ್ಥರು ದೇವಿ ಚರಿತ್ರೆ ಜೊತೆಗೆ ತಮ್ಮ ಗ್ರಾಮದ ಚರಿತ್ರೆಯನ್ನು ದಾಖಲಿಸುವ ಕೆಲಸ ಮಾಡಿದ್ದು ಪ್ರಶಂಸನೀಯ’ ಎಂದು ಹೇಳಿದರು.

ADVERTISEMENT

ಸಾಹಿತಿ ಶರಣಬಸಪ್ಪ ವಡ್ಡನಕೇರಿ ಮಾತನಾಡಿ, ‘ಕಲ್ಯಾಣ ಕರ್ನಾಟಕವನ್ನು ಅನೇಕ ಅರಸರು ಆಳಿದ್ದಾರೆ. ವಾಸ್ತು ಶಿಲ್ಪ, ಜಾನಪದ, ಸಾಹಿತ್ಯ, ಸಂಸ್ಕೃತಿ ಸೇರಿದಂತೆ ಅನೇಕ ಕಲೆಗಳ ಬೀಡಾಗಿದೆ. ಇವೆಲ್ಲವು ನಮಗೆ ಮಠ, ಮಂದಿರಗಳಲ್ಲಿ, ದೈವಿ ಸ್ಥಳಗಳಲ್ಲಿ ನೋಡಲು ಸಿಗುತ್ತವೆ. ಈ ದೈವಗಳ ಚರಿತ್ರೆ ಹೆಕ್ಕಿ ತೆಗೆದರೆ ನಮ್ಮೆಲ್ಲ ಸಂಸ್ಕೃತಿ ಅನಾವರಣಗೊಳ್ಳುತ್ತದೆ. ಈ ನಿಟ್ಟಿನಲ್ಲಿ ಅಂಕಲಗಾ ಮಹಾಲಕ್ಷ್ಮೀ ಚರಿತ್ರೆ ಹೆಕ್ಕಿ ತೆಗೆದಿರುವ ಶಿಕ್ಷಕ ಅಂಬಾರಾಯ ಮಡ್ಡೆ ಅವರು, ಅಂಕಲಗಾ ಗ್ರಾಮದ ಜೊತೆಗೆ ಸುತ್ತಲಿನ ಪರಿಸರದ ಇತಿಹಾಸ ದರ್ಶನ ಮಾಡಿಸಿದ್ದಾರೆ’ ಎಂದು ಹೇಳಿದರು.‌

ಶ್ರೀನಿವಾಸ ಸರಡಗಿಯ ರೇವಣಸಿದ್ದ ಶಿವಾಚಾರ್ಯರು, ಅವರಾದ ಮರುಳಸಿದ್ಧ ಶಿವಾಚಾರ್ಯ, ಮಹಾಗಾಂವ ವಿರೂಪಾಕ್ಷ ದೇವರು, ವಕೀಲರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಶಿವಕುಮಾರ ಪಸಾರ, ಶಿಕ್ಷಕ, ಸಾಹಿತಿ ಅಂಬಾರಾಯ ಮಡ್ಡೆ, ಚೆನ್ನವೀರಪ್ಪ ಸಲಗರ, ಅಶೋಕ ಸಂಗೀತ, ದಿಲೀಪ ಸಂಗೀತಕರ, ಸತೀಶ ಸಾಹು, ಅನಿತಾ ಧನ್ವಂತರಿ, ಗಣೇಶ ಚಿಕ್ಕನಾಗಾಂವ, ಗುಂಡಪ್ಪ ಕುದಮೂಡ, ಜಗದೇವ ಕಮ್ಮನಕರ, ರವೀಂದ್ರ ಬಿ.ಕೆ., ವಿಜಯಕುಮಾರ ಸಂಗೀತಕರ, ಬಸವರಾಜ ಬಿರಾದಾರ ಮತ್ತಿತರರು ಹಾಜರಿದ್ದರು.

ಗ್ರಾಮೀಣ ಬದುಕಿನ ಬಹುತೇಕ ಆಚರಣೆಗಳಿಗೆ ಒಂದೊಂದು ವೈಜ್ಞಾನಿಕ ಹಿನ್ನೆಲೆಯಿದೆ. ಅವುಗಳನ್ನು ಮುಂದುವರಿಸಿಕೊಂಡು ಹೋಗಬೇಕು. ಮೌಢ್ಯಗಳನ್ನು ಮರೆತು ಬಿಡಬೇಕು
ರೇವಣಸಿದ್ಧ ಶಿವಾಚಾರ್ಯರು ಶ್ರೀನಿವಾಸ ಸರಡಗಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.