ಕಲಬುರಗಿ: 'ಸತ್ಯದ ಮಾರ್ಗದಲ್ಲಿ ಹೋಗುವಾಗ ಅಡೆತಡೆಗಳು ಸಹಜ. ನನ್ನ ಹೋರಾಟ ನಿರಂತರವಾಗಿ ಮುಂದುವರೆಯಲಿದೆ' ಎಂದು ಕೆಪಿಸಿಸಿ ವಕ್ತಾರ ಹಾಗೂ ಶಾಸಕ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ತಮ್ಮ ಮೇಲೆ ವೈಯಕ್ತಿಕ ನಿಂದನೆ ಮಾಡಿರುವ ಬಿಜೆಪಿ ಸಂಸದ ಪ್ರತಾಪ ಸಿಂಹ ಸೇರಿದಂತೆ ಬಿಜೆಪಿ ಮುಖಂಡರ ಹೇಳಿಕೆ ಕುರಿತು ಫೇಸ್ ಬುಕ್ ನಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ಸತ್ಯದ ವಿಚಾರ ಮಾತನಾಡುವಾಗ ಅನೇಕ ಅಡೆ-ತಡೆಗಳು ಬರುತ್ತವೆ. ಆದರೆ, ಅದಕ್ಕೆಲ್ಲಾ ಎದೆಗುಂದದೆ ಮುನ್ನುಗ್ಗಲು ಕಲಿತಿದ್ದು ಬುದ್ಧ-ಬಸವ-ಅಂಬೇಡ್ಕರ್ ಅವರ ಜೀವನ ಮತ್ತು ವಿಚಾರಧಾರೆಗಳಿಂದ. ಅವರು ಹಾಕಿಕೊಟ್ಟ ಸತ್ಯ, ಹೋರಾಟದ ಮಾರ್ಗದಲ್ಲಿ ಸಾಗುತ್ತೇನೆ ಮತ್ತು ಇದರಲ್ಲಿ ಗೆಲುವು ಕಾಣುತ್ತೇನೆ ಎಂಬ ಭರವಸೆ ಇದೆ' ಎಂದಿದ್ದಾರೆ.
'ಈ ಸರ್ಕಾರ ಹಾಗೂ ಸರ್ಕಾರದ ಭಾಗವಾಗಿರುವ ಎಷ್ಟೇ ಜನರು ನನ್ನ ವಿರುದ್ಧ ಏನೇ ನಾಲಿಗೆ ಹರಿಬಿಟ್ಟು, ವೈಯಕ್ತಿಕ ನಿಂದನೆ ಮಾಡಿದರೂ ಸತ್ಯ ಹೇಳುವುದನ್ನು ನಾನು ಮುಂದುವರೆಸುತ್ತೇನೆ' ಎಂದಿದ್ದಾರೆ.
'ಬಿಜೆಪಿಯ ನಾಯಕರ ಹೇಳಿಕೆಗಳ ವಿರುದ್ಧವಾಗಿ ಹಾಗೂ ನನಗೆ ಬೆಂಬಲವಾಗಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಜನರು ಪ್ರತಿಭಟನೆ ನಡೆಸಿದ್ದೀರಿ. ನನ್ನ ಹೋರಾಟ ಮುಂದುವರೆಯಲಿದೆ. ಸತ್ಯ ಮೇವ ಜಯತೆ' ಎಂದು ಬರೆದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.