ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲ್ಲೂಕಿನ ಭಂಕಲಗಾ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಮಳೆಯಿಂದ ಗೋಡೆ ಕುಸಿದು ಮೇಕೆಗಳು ಅಸುನೀಗಿರುವುದು
ಚಿತ್ತಾಪುರ (ಕಲಬುರಗಿ ಜಿಲ್ಲೆ): ಧಾರಾಕಾರ ಮಳೆಗೆ ಕೊಟ್ಟಿಗೆ ಸಂಪೂರ್ಣ ಕುಸಿದು ಬಿದ್ದು ಕೊಟ್ಟಿಗೆಯಲ್ಲಿದ್ದ ನಲವತ್ತು ಮೇಕೆಗಳು ಮೃತಪಟ್ಟಿರುವ ಘಟನೆ ತಾಲ್ಲೂಕಿನ ಭಂಕಲಗಾ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಜರುಗಿದೆ.
ಗ್ರಾಮದ ಮಾಳಪ್ಪಾ ಧೂಳಪ್ಪಾ ಪೂಜಾರಿ ಅವರಿಗೆ ಸೇರಿದ ಮೇಕೆಗಳು ಕೊಟ್ಟಿಗೆಯ ಮಾಳಿಗೆ ಮತ್ತು ಕಟ್ಟಡದ ಅವಶೇಷಗಳಡಿ ಸಿಲುಕಿ ಮೃತಪಟ್ಟಿವೆ. ಮೇಕೆಗಳ ಸಾವಿನಿಂದ ಮಾಳಪ್ಪಾ ಅವರು ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸಿದ್ದಾರೆ.
ಘಟನೆಯ ಸುದ್ಧಿ ತಿಳಿದು ಕಂದಾಯ ಇಲಾಖೆಯ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಪಶು ವೈದ್ಯಾಧಿಕಾರಿಗೆ ಮಾಹಿತಿ ನೀಡಿ ಮೃತಪಟ್ಟಿರುವ ಆಡುಗಳ ಶವ ಪರೀಕ್ಷೆ ಮಾಡಿಸಿ ಕಚೇರಿಗೆ ಸಲ್ಲಿಸಬೇಕು ಎಂದು ಸಂಬಂದಿಸಿದವರಿಗೆ ಸೂಚಿಸಿದ್ದಾರೆ.
ಕೊಟ್ಟಿಗೆ ಕುಸಿದು ಮೇಕೆಗಳ ಸಾವಿನಿಂದ ಮಾಳಪ್ಪ ಪೂಜಾರಿ ಅವರ ಕುಟುಂಬ ಕಣ್ಣೀರು ಹಾಕುತ್ತಿದೆ. ಸಾಕಿ-ಸಲುಹಿದ ಮೇಕೆಗಳ ದಾರುಣ ಸಾವು ಮತ್ತು ಲಕ್ಷಾಂತರ ರೂಪಾಯಿ ನಷ್ಟವಾಗಿದ್ದಕ್ಕೆ ಸಂಕಷ್ಟಕ್ಕೆ ಗುರಿಯಾಗಿದೆ.
ಕೊಟ್ಟಿಗೆಯಲ್ಲಿ ಅಂದಾಜು 55 ಆಡುಗಳಿದ್ದವು. ಗಂಭೀರವಾಗಿ ಗಾಯಗೊಂಡಿರುವ ಅಂದಾಜು 15 ಬದುಕುಳಿದಿವೆ. ಕೆಲವಕ್ಕೆ ರಾತ್ರಿಯೆ ಚಿಕಿತ್ಸೆ ನೀಡಲಾಗಿದೆ. ಕಟ್ಟಡದ ಅವಶೇಷಗಳಡಿ ಮೇಕೆಗಳು ಸಿಲುಕಿದ್ದು ಅವಶೇಷ ತೆರವು ಮಾಡಿದ ನಂತರ ಎಷ್ಟು ಆಡುಗಳು ಮೃತಪಟ್ಟಿವೆ. ಎಷ್ಟು ಬದುಕುಳಿದಿವೆ ಎಂದು ನಿಖರ ಮಾಹಿತಿ ಸಿಗಲಿದೆ ಎಂದು ಪಶು ಇಲಾಖೆಯ ಸಹಾಯಕ ನಿರ್ದೇಶಕ ಶಂಕರ ಕಣ್ಣಿ ಅವರು ಶನಿವಾರ ಪ್ರಜಾವಾಣಿಗೆ ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.