ADVERTISEMENT

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ಪ್ರೊ.ವಸಂತ ಕುಷ್ಟಗಿ ಇನ್ನಿಲ್ಲ

​ಪ್ರಜಾವಾಣಿ ವಾರ್ತೆ
Published 4 ಜೂನ್ 2021, 5:53 IST
Last Updated 4 ಜೂನ್ 2021, 5:53 IST
ಹಿರಿಯ ಸಾಹಿತಿ, ಚಿಂತಕ ಪ್ರೊ.ವಸಂತ ಕುಷ್ಟಗಿ
ಹಿರಿಯ ಸಾಹಿತಿ, ಚಿಂತಕ ಪ್ರೊ.ವಸಂತ ಕುಷ್ಟಗಿ   

ಕಲಬುರ್ಗಿ: ನಾಡಿನ ಹಿರಿಯ ಸಾಹಿತಿ, ಚಿಂತಕ ಪ್ರೊ.ವಸಂತ ಕುಷ್ಟಗಿ (85) ಅವರು ಶುಕ್ರವಾರ ಬೆಳಿಗ್ಗೆ ಹೃದಯಾಘಾತದಿಂದ ನಿಧನರಾದರು.

ರಕ್ತದೊತ್ತಡ ಕಡಿಮೆಯಾಗಿದ್ದ (ಲೋ ಬಿಪಿ) ಅವರನ್ನು ವಾರದ ಹಿಂದೆ ಇಲ್ಲಿನ ಗುಲಬರ್ಗಾ ಹಾರ್ಟ್‌ ಫೌಂಡೇಷನ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೇ ಅವರು ಕೊನೆಯುಸಿರೆಳೆದರು.

60ಕ್ಕೂ ಹೆಚ್ಚು ಕೃತಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ನೀಡಿದ ಪ್ರೊ.ವಸಂತ ಕುಷ್ಟಗಿ ಅವರು; ದಾಸ ಸಾಹಿತ್ಯ ಕ್ಷೇತ್ರದಲ್ಲಿ ಮಾಡಿದ ಕೃಷಿ ಅಗಾಧವಾದುದು. ಪ್ರಾಧ್ಯಾಪಕ, ಸಾಹಿತಿ, ಲೇಖಕ, ಪತ್ರಕರ್ತ, ವಿದ್ವಾಂಸ, ವಿಮರ್ಶಕ, ಭಾಷಾಜ್ಞಾನಿ, ಹೋರಾಟಗಾರ... ಹೀಗೆ ವೈವಿಧ್ಯಮಯ ವ್ಯಕ್ತಿತ್ವ ಅವರದು. ಕತೆ, ಕವನ, ದಾಸ ಸಾಹಿತ್ಯ, ನಾಟಕ, ಲೇಖನ ಸೇರಿದಂತೆ ಹಲವಾರು ಪ್ರಕಾರಗಳಲ್ಲಿ ಅವರು ಕಲ್ಯಾಣ ಕರ್ನಾಟಕ ಭಾಗದ ಭಾಷೆಗೆ ಗಟ್ಟಿ ನೆಲೆ ತಂದುಕೊಟ್ಟಿದ್ದಾರೆ.

ADVERTISEMENT

ಹೈದರಾಬಾದ್‌ನ ಉಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ ಅವರು ಕನ್ನಡ ಎಂ.ಎ ಪದವಿ ಪಡೆದಿದ್ದರು. 1990ರಿಂದ 94ರವರೆಗೆ ಇಲ್ಲಿನ ನೂತನ ವಿದ್ಯಾಲಯ ಪದವಿ ಕಾಲೇಜಿನ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದರು. ಇದಕ್ಕೂ ಮುನ್ನ ಅವರು ಹೈದರಾಬಾದ್‌ ಕರ್ನಾಟಕ ಶಿಕ್ಷಣ ಸಂಸ್ಥೆಯ ಪದವಿ ಕಾಲೇಜಿನ ಪ್ರಾಧ್ಯಾಪಕರಾಗಿದ್ದರು. ನಾಡಿನ ಉದ್ದಗಲಕ್ಕೂ ಅಪಾರ ಶಿಷ್ಯ ಬಳಗ ಹಾಗೂ ಸಾಹಿತ್ಯಾಭಿಮಾನಿಗಳನ್ನು ಅವರು ಹೊಂದಿದ್ದಾರೆ.

ದಿವಂಗತ ಎನ್‌.ಧರ್ಮಸಿಂಗ್‌ ಅವರು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಅವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಬಂದಿತ್ತು. ಒಂದು ಬಾರಿ ಕಲಬುರ್ಗಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿಕೊಂಡಿದ್ದರು. 2020ರಲ್ಲಿ ಕಲಬುರ್ಗಿಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿಕೊಳ್ಳಲು ಪ್ರೊ.ವಸಂತ ಕುಷ್ಟಗಿ ಅವರ ಹೆಸರೂ ಮುಂಚೂಣಿಯಲ್ಲಿತ್ತು.

ಕಲ್ಯಾಣ ಕರ್ನಾಟಕ ಭಾಗದಲ್ಲಿ ಮರಾಠಿ, ತೆಲಗು, ಉರ್ದು ಭಾಷೆಗಳ ಒತ್ತಡದ ನಡುವೆಯೂ ಕನ್ನಡ ಅಸ್ಮಿತೆಯನ್ನು ಉಳಿಸಿ, ಬೆಳೆಸುವಲ್ಲಿ ಅವರ ಕೊಡುಗೆ ದೊಡ್ಡದು. ಸಾಹಿತ್ಯ, ಐತಿಹಾಸಿಕ ಚಟುವಟಿಕೆ, ಹೋರಾಟಗಳು, ಚಾರಿತ್ರಿಕ ಘಟನೆಗಳಲ್ಲಿ ಅವರ ಹೆಸರು ಯಾವಾಗಲೂ ಮುಂದಿರುತ್ತಿತ್ತು. ಭೀಮಸೇನರಾವ್‌ ತಾವಗೆ ಅವರೊಂದಿಗೆ ಸೇರಿಕೊಂಡು 1935ರಲ್ಲಿಯೇ ಕಲಬುರ್ಗಿಯಲ್ಲಿ ಕನ್ನಡ ಸಂಘ ಕಟ್ಟಿ ಹೋರಾಡಿದ್ದು ಅವರ ಹಿರಿಮೆ.

ಕೊರೊನಾ ಉಪಟಳದ ಸಂದರ್ಭದಲ್ಲಿಯೂ ಅವರು ಕ್ರಿಯಾಶೀಲರಾಗಿದ್ದರು. ಎರಡು ತಿಂಗಳ ಹಿಂದೆಯೇ ನಗರದಲ್ಲಿ ನಡೆದ ಸಾಹಿತ್ಯ ಕಾರ್ಯಕ್ರಮದಲ್ಲಿಯೂ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.