ADVERTISEMENT

ಕಲಬುರಗಿ: ಕಸಾಪ ನೌಕರರ ಸಂಬಳಕ್ಕೂ ಪರದಾಟ

ಸಮ್ಮೇಳನದ ಹಣದಲ್ಲಿ ₹ 5 ಲಕ್ಷ ನೀಡುವಂತೆ ಜಿಲ್ಲಾಧಿಕಾರಿಗೆ ಪತ್ರ

ಗಣೇಶ-ಚಂದನಶಿವ
Published 15 ಮೇ 2020, 19:30 IST
Last Updated 15 ಮೇ 2020, 19:30 IST
ಕಲಬುರ್ಗಿಯ ಕನ್ನಡ ಭವನ
ಕಲಬುರ್ಗಿಯ ಕನ್ನಡ ಭವನ   

ಕಲಬುರ್ಗಿ: ತನ್ನ ಒಡೆತನದಲ್ಲಿರುವ ಕನ್ನಡ ಭವನ ಮತ್ತು ಸುವರ್ಣ ಭವನಗಳಲ್ಲಿ ಕಾರ್ಯಕ್ರಮಗಳು ನಡೆಯದಿರುವುದರಿಂದ ಬಾಡಿಗೆ ಬಾರದ ಕಾರಣ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು‌ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿದೆ.

ಮೂವರು ನೌಕರರ ಈ ತಿಂಗಳ ಸಂಬಳಕ್ಕೂ ಹಣ ಇಲ್ಲವಾಗಿದ್ದು,ಅಖಿಲ ಭಾರತ 85ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅನುದಾನದಲ್ಲಿ ₹5 ಲಕ್ಷ ನೆರವು ನೀಡುವಂತೆ ಕಸಾಪ ಜಿಲ್ಲಾ ಘಟಕವು ಸಮ್ಮೇಳನದ ಕೋಶಾಧ್ಯಕ್ಷರೂ ಆದ ಜಿಲ್ಲಾಧಿಕಾರಿ ಶರತ್‌ ಬಿ. ಅವರ ಮೊರೆ ಹೋಗಿದೆ.

ಕನ್ನಡ ಸಾಹಿತ್ಯ ಪರಿಷತ್‌ ಕೇಂದ್ರ ಸಮಿತಿಯು ಜಿಲ್ಲಾ ಘಟಕಕ್ಕೆ ವಾರ್ಷಿಕ ಕಚೇರಿ ನಿರ್ವಹಣೆಗೆ ₹ 1 ಲಕ್ಷ ಹಾಗೂ ಸಂಬಳ ಸಹಾಯಧನ ₹ 36 ಸಾವಿರ ನೀಡುತ್ತದೆ.

ADVERTISEMENT

‘ಕಟ್ಟಡ ನಿರ್ವಹಣೆಗಾಗಿ ನಮ್ಮಲ್ಲಿ ಮೂವರು ಕೆಲಸಗಾರರು ಇದ್ದಾರೆ. ಒಬ್ಬ ಪುರುಷ ಕೆಲಸಗಾರಗೆ ತಿಂಗಳಿಗೆ ₹ 7 ಸಾವಿರ ಹಾಗೂ ಇಬ್ಬರು ಮಹಿಳೆಯರಿಗೆ ತಲಾ ₹ 6,500 ಸಂಬಳ ನೀಡುತ್ತಿದ್ದೇವೆ. ತಿಂಗಳಿಗೆ ₹ 20 ಸಾವಿರದಂತೆ ಇವರ ಸಂಬಳ ವರ್ಷಕ್ಕೆ ₹ 2.40 ಲಕ್ಷ ವೆಚ್ಚವಾಗುತ್ತದೆ. ಇದರ ಜೊತೆಗೆ ವಿದ್ಯುತ್‌ ಬಿಲ್, ಸಣ್ಣಪುಟ್ಟ ರಿಪೇರಿ ವೆಚ್ಚ ಭರಿಸಬೇಕು. ಕೇಂದ್ರ ಸಮಿತಿ ನೀಡುವ ₹ 1.36 ಲಕ್ಷ ಅನುದಾನ ಜೊತೆಗೆ ನಮ್ಮ ಭವನಗಳ ಬಾಡಿಗೆ ಹಣವನ್ನೂ ಇದಕ್ಕೆ ವಿನಿಯೋಗಿಸುತ್ತಿದ್ದೆವು. ಹೀಗಾಗಿ, ಈವರೆಗೆ ಯಾವುದೇ ಸಮಸ್ಯೆ ಆಗಿರಲಿಲ್ಲ’ ಎನ್ನುತ್ತಾರೆ ಜಿಲ್ಲಾ ಕಸಾಪ ಅಧ್ಯಕ್ಷ ವೀರಭದ್ರ ಸಿಂಪಿ.

‘ದಿನಕ್ಕೆ ಕನ್ನಡ ಭವನಕ್ಕೆ ₹ 5 ಸಾವಿರದಿಂದ ₹ 6 ಸಾವಿರ, ಸುವರ್ಣ ಸಾಂಸ್ಕೃತಿಕ ಭವನಕ್ಕೆ ₹ 2 ಸಾವಿರದಿಂದ ₹ 3 ಸಾವಿರ ಬಾಡಿಗೆ ವಿಧಿಸುತ್ತಿದ್ದೆವು. ತಿಂಗಳಿಗೆ ನಾಲ್ಕಾರು ದಿನ ಬಾಡಿಗೆ ಹೋಗುತ್ತಿದ್ದವು. ಬಾಡಿಗೆ ಹಣದಲ್ಲಿ ಖರ್ಚು ನಿಭಾಯಿಸುತ್ತಿದ್ದೆವು. ಆದರೆ, ಈ ಬಾರಿ ಅಖಿಲ ಭಾರತ 85ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ನವೆಂಬರ್‌ನಿಂದ ಫೆಬ್ರುವರಿವರೆಗೆ ಈ ಭವನಗಳನ್ನು ಬಾಡಿಗೆಗೆ ನೀಡಲಿಲ್ಲ. ಈಗ ಕೊರೊನಾ ಹಾವಳಿಯಿಂದ ಎಲ್ಲವೂ ಸ್ಥಗಿತಗೊಂಡಿದೆ. ನೌಕರರಿಗೆ ಈ ತಿಂಗಳ ಸಂಬಳ ನೀಡಲೂ ನಮ್ಮ ಬಳಿ ಹಣ ಇಲ್ಲ’ ಎಂದು ಅವರು ಬೇಸರ ವ್ಯಕ್ತಪಡಿಸಿದರು.

‘ಕಸಾಪ ಕೇಂದ್ರ ಸಮಿತಿಯಲ್ಲಿರುವ ಸಿಬ್ಬಂದಿ ವೇತನವನ್ನು ಸರ್ಕಾರವೇ ಭರಿಸುತ್ತದೆ. ನಗರದ ಬಾಪುಗೌಡ ದರ್ಶನಾಪುರ ರಂಗಮಂದಿರದ ಕೆಲಸಗಾರರ ವೇತವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪಾವತಿಸುತ್ತದೆ. ಕನ್ನಡ ಭವನದ ನೌಕರರ ವೇತನವನ್ನು ಕಸಾಪ ಜಿಲ್ಲಾ ಘಟಕವೇ ಪಾವತಿಸಬೇಕಿದೆ. ಇನ್ನೂ ಕೆಲ ತಿಂಗಳು ಸಭೆ–ಸಮಾರಂಭ ನಡೆಯುವುದು ಅನುಮಾನ. ಹೀಗಾಗಿ, ನಮಗೆ ತುರ್ತು ಅನುದಾನದ ಅಗತ್ಯವಿದೆ’ ಎನ್ನುತ್ತಾರೆ ಅವರು.

ಸದಸ್ಯತ್ವ ಶುಲ್ಕವೂ ಕೇಂದ್ರ ಸಮಿತಿಗೆ: ಕನ್ನಡ ಸಾಹಿತ್ಯ ಪರಿಷತ್‌ಗೆ ಆಜೀವ ಸದಸ್ಯರನ್ನು ಮಾಡಿಕೊಳ್ಳಲಾಗುತ್ತದೆ. ಆಜೀವ ಸದಸ್ಯತ್ವ ಶುಲ್ಕ ₹ 500 ಇದ್ದು, ‘ಕನ್ನಡನುಡಿ’ ಪತ್ರಿಕೆ ಬೇಕಿದ್ದರೆ ₹ 500 ಹೆಚ್ಚಿಗೆ ಪಾವತಿಸಬೇಕು. ಈ ಹಣ ಕಸಾಪ ಕೇಂದ್ರ ಸಮಿತಿಗೆ ಜಮೆಯಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.