
ಕಲಬುರಗಿ: ‘ಕಲಬುರಗಿ ಹಾಗೂ ಬೀದರ್ ಜಿಲ್ಲೆಗಳ ಬಹುಗ್ರಾಮ ಕುಡಿಯುವ ನೀರು ಒದಗಿಸುವ ಸಮಗ್ರ ಯೋಜನೆಗೆ ಅನುಮೋದನೆ ತ್ವರಿತ ಅನುಮೋದನೆ ನೀಡಬೇಕು’ ಎಂದು ಕೋರಿ ಎಐಸಿಸಿ ಅಧ್ಯಕ್ಷರೂ ಆಗಿರುವ ರಾಜ್ಯಸಭೆ ವಿರೋಧಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಪ್ರಧಾನಿಗೆ ಪತ್ರ ಬರೆದಿದ್ದಾರೆ.
ಉಭಯ ಜಿಲ್ಲೆಗಳ ಎಲ್ಲ ಗ್ರಾಮೀಣ ಜನವಸತಿ ಪ್ರದೇಶಗಳಿಗೆ ಕುಡಿಯುವ ನೀರು ಒದಗಿಸುವ ವಿನ್ಯಾಸ, ನಿರ್ಮಾಣ, ಕಾರ್ಯ ಹಾಗೂ ವರ್ಗಾವಣೆ ಆಧಾರಿತ ಅಂದಾಜು ₹7,200 ಕೋಟಿ ಮೊತ್ತದ ಯೋಜನೆಗೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ. ಕಲಬುರಗಿ ಜಿಲ್ಲೆಯ 11 ತಾಲ್ಲೂಕುಗಳ 859 ಗ್ರಾಮಗಳು, 1,259 ಜನವಸತಿಗಳಿಗೆ ಹಾಗೂ ಬೀದರ್ ಜಿಲ್ಲೆಯ 8 ತಾಲ್ಲೂಕುಗಳ 597 ಗ್ರಾಮಗಳ 900 ಜನವಸತಿಗಳಿಗೆ ಕುಡಿಯುವ ನೀರು ಒದಗಿಸುವ ಯೋಜನೆ ಇದಾಗಿದೆ.
ಉಭಯ ಜಿಲ್ಲೆಗಳು ಕರ್ನಾಟಕದ ಉತ್ತರ ಭಾಗದ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿವೆ. ಪ್ರಧಾನವಾಗಿ ಎಸ್ಸಿ, ಎಸ್ಟಿ ಸಮುದಾಯದ ಜನಸಂಖ್ಯೆ ಹೊಂದಿವೆ. ಈ ಜಿಲ್ಲೆಗಳು ಪ್ರಸ್ತುತ ನೀರಿನ ಗುಣಮಟ್ಟದ ತೀವ್ರ ಸಮಸ್ಯೆಗಳನ್ನು ಎದುರಿಸುತ್ತಿವೆ. ಈ ಸವಾಲುಗಳನ್ನು ಎದುರಿಸಲು ವಿಜಯಪುರ ಜಿಲ್ಲೆಯ ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಲಾದ ನಾರಾಯಣಪುರ ಜಲಾಶಯದಿಂದ ದೀರ್ಘಕಾಲಿಕ ಮತ್ತು ಸುಸ್ಥಿರ ನೀರಿನ ಮೂಲವನ್ನು ಗುರುತಿಸಲಾಗಿದೆ.
ಅದರಂತೆ, ಜಲ ಜೀವನ ಮಿಷನ್ (ಜೆಜೆಎಂ) ಅಡಿಯಲ್ಲಿ ಕೇಂದ್ರ ಸರ್ಕಾರದಿಂದ ಶೇ50ರಷ್ಟು ಬಂಡವಾಳ ವೆಚ್ಚದ ಬೆಂಬಲ ಸಿಗುವ ನಿರೀಕ್ಷೆಯೊಂದಿಗೆ ರಾಜ್ಯ ಸರ್ಕಾರವು ಯೋಜನಾ ಸ್ಥಿತಿ ವರದಿ ಸಿದ್ಧಪಡಿಸುತ್ತಿದೆ. ಐದು ವರ್ಷಗಳ ಕಾರ್ಯಾಚರಣೆ ಮತ್ತು ನಿರ್ವಹಣೆ ಸೇರಿದಂತೆ ಉಳಿದ ತನ್ನ ಶೇ50ರಷ್ಟು ಪಾಲು ಹಣ ಕೆಕೆಆರ್‌ಡಿಬಿಯಿಂದ ಬಳಸಲು ರಾಜ್ಯ ಸಚಿವ ಸಂಪುಟವು ಸ್ಪಷ್ಟವಾಗಿ ಅನುಮೋದನೆ ನೀಡಿದೆ.
‘ಇದು ಎರಡು ಜಿಲ್ಲೆಗಳ ಎಲ್ಲಾ ಗ್ರಾಮೀಣ ಜನವಸತಿಗಳಿಗೆ ಸುಸ್ಥಿರ ಕುಡಿಯುವ ನೀರು ಒದಗಿಸುವ ದೀಘಕಾಲಿನ ಪರಿಹಾರ ಯೋಜನೆಯಾಗಿದೆ. ಕೇಂದ್ರದ ಶೇ50ರಷ್ಟು ಆರ್ಥಿಕ ನೆರವಿನೊಂದಿಗೆ ಉದ್ದೇಶಿತ ಯೋಜನೆಯನ್ನು ಜೆಜೆಎಂ ಯೋಜನೆಯಡಿ ಆರಂಭಿಸಲು ತ್ವರಿತ ಅನುಮೋದನೆ ನೀಡಲು ಪ್ರಧಾನಿ ಮಧ್ಯಪ್ರವೇಶಿಸಬೇಕು’ ಎಂದು ಡಿ.9ರಂದು ಬರೆದ ಪತ್ರದಲ್ಲಿ ಮಲ್ಲಿಕಾರ್ಜುನ ಖರ್ಗೆ ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.