
ಕಲಬುರಗಿ: ವಿವಿಧ ಕಾರಣಗಳಿಂದ ನಿಧನ ಹೊಂದಿದ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ (ಕೆಕೆಆರ್‌ಟಿಸಿ)ದ 22 ಜನ ನೌಕರರ ಕುಟುಂಬಸ್ಥರಿಗೆ ತಲಾ ₹10 ಲಕ್ಷದಂತೆ ₹2.20 ಕೋಟಿ ಮೊತ್ತದ ಚೆಕ್‌ಗಳನ್ನು ಗುರುವಾರ ವಿತರಿಸಲಾಯಿತು.
ನಗರದ ಕೆಕೆಆರ್‌ಟಿಸಿ ಕೇಂದ್ರ ಕಚೇರಿಯಲ್ಲಿ ನಿಗಮದ ಅಧ್ಯಕ್ಷ ಅರುಣಕುಮಾರ ಪಾಟೀಲ ಅವರು ಕಾರ್ಮಿಕ ಕಲ್ಯಾಣದ ಆಂತರಿಕ ಗುಂಪು ವಿಮಾ ಯೋಜನೆಯಡಿ 22 ಕುಟುಂಬಗಳಿಗೆ ಚೆಕ್ ವಿತರಿಸಿದರು. ಈ ವೇಳೆ ಮೃತ ನೌಕರರ ಕುಟುಂಬಸ್ಥರು ಕಣ್ಣೀರು ಹಾಕಿದರು.
ನಂತರ ಮಾತನಾಡಿದ ಅರುಣಕುಮಾರ ಪಾಟೀಲ, ‘ಸಾರಿಗೆ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರು ಅನಾರೋಗ್ಯ, ಆಕಸ್ಮಿಕ ಮತ್ತು ಅಪಘಾತಗಳಿಂದ ನಿಧನ ಹೊಂದಿದಲ್ಲಿ ಅವರ ಅವಲಂಬಿತರಿಗೆ ಆರ್ಥಿಕ ಭದ್ರತೆ ಒದಗಿಸಲು ಆಂತರಿಕ ಗುಂಪು ವಿಮಾ ಯೋಜನೆಯನ್ನು ಪ್ರಾರಂಭಿಸಲಾಗಿದೆ. 2011ರ ಸೆಪ್ಟೆಂಬರ್‌ನಿಂದ 2021ರ ಡಿಸೆಂಬರ್‌ವರೆಗೆ ಈ ಯೋಜನೆಯಡಿ ಸದಸ್ಯರಾದ ಎಲ್ಲಾ ನೌಕರರ ಮಾಸಿಕ ವೇತನದಲ್ಲಿ ₹100 ಕಡಿತಗೊಳಿಸಿ, ಆಡಳಿತ ವರ್ಗದ ತತ್ಸಮಾನ ಮಾಸಿಕ ವಂತಿಗೆ ₹50 ಸೇರಿಸಿ ಮೃತ ನೌಕರರ ನಾಮನಿರ್ದೇಶಿತರಿಗೆ ₹3 ಲಕ್ಷ ಪರಿಹಾರ ಧನ ವಿತರಿಸಲಾಗುತ್ತಿತ್ತು’ ಎಂದು ತಿಳಿಸಿದರು.
‘2022ರ ಜನವರಿಯಿಂದ ನಿಗಮದ ನೌಕರರ ಕುಟುಂಬದವರಿಗೆ ಇನ್ನೂ ಹೆಚ್ಚಿನ ಆರ್ಥಿಕ ಭದ್ರತೆ ಒದಗಿಸುವ ಉದ್ದೇಶದಿಂದ ನೌಕರರ ಹಾಗೂ ಆಡಳಿತ ವರ್ಗದ ವಂತಿಗೆ ಮೊತ್ತವನ್ನು ₹200 ಮತ್ತು ₹210ಕ್ಕೆ ಹೆಚ್ಚಿಸಿ, ₹10 ಲಕ್ಷ ವಿತರಿಸಲಾಗುತ್ತಿದೆ. 2026ರ ಜನವರಿಯಿಂದ ಈ ಯೋಜನೆಯಡಿ ಮೃತರ ಅವಲಂಬಿತರಿಗೆ ₹12.5 ಲಕ್ಷ ನೀಡಲಾಗುವುದು’ ಎಂದು ಹೇಳಿದರು.
ನಾಮನಿರ್ದೇಶಿತರು: ಬಳ್ಳಾರಿ ವಿಭಾಗದ ರೇಖಾ ಹಾದಿಮನಿ, ವಿಜಯಲಕ್ಷ್ಮಿಬಾಯಿ, ಕೊಪ್ಪಳ ವಿಭಾಗದ ವಿಜಯಲಕ್ಷ್ಮಿ, ಪಾರ್ವತಿ ಮತ್ತು ವೀಣಾಶ್ರೀ, ಕಲಬುರಗಿ ವಿಭಾಗ–2ರ ಅರ್ಚನಾ, ಶರಣಮ್ಮಾ, ಹೊಸಪೇಟೆ ವಿಭಾಗದ ಪದ್ಮಾವತಿ ಸಿ.ಕೆ., ವಿಜಯಪುರ ವಿಭಾಗದ ರಾಜೇಶ್ವರಿ (ಮಕ್ಕಳಾದ ಪ್ರಿಯಾಂಕಾ, ಶ್ರೀರತ್ನ, ಶ್ರೀನಿಧಿ ತಲಾ ಶೇ 10), ನಿರ್ಮಲಾ, ಅನಿತಾ, ನೀಲಾಬಾಯಿ, ಬೀದರ್ ವಿಭಾಗದ ರುಕ್ಮಿಣಿ, ಅಶ್ವಿನಿ, ಶ್ರೀದೇವಿ, ವಿದ್ಯಾವತಿ, ಲತಾ, ಸತ್ಯಮ್ಮಾ, ಆಫ್ರೀನ್ ಬೇಗಂ, ಮಗ ವಿಠಲ (ಪತ್ನಿ ಅನಿತಾ, ತಾಯಿ ಲಕ್ಷ್ಮಿಬಾಯಿ ತಲಾ ಶೇ 25), ಶೋಭಾ ರಾಣಿ, ವಿಮಲಾಬಾಯಿ, ರಾಯಚೂರು ವಿಭಾಗದ ಪಾರ್ವತಿ ಅವರಿಗೆ ಚೆಕ್ ವಿತರಿಸಲಾಯಿತು.
ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಡಾ.ಸುಶೀಲಾ ಬಿ., ಮುಖ್ಯ ಸಂಚಾರ ವ್ಯವಸ್ಥಾಪಕ ಸಂತೋಷಕುಮಾರ, ಮುಖ್ಯ ಲೆಕ್ಕಾಧಿಕಾರಿ ಹಾಗೂ ಆರ್ಥಿಕ ಸಲಹೆಗಾರ ಬಸವರಾಜ ಬೆಳಗಾವಿ, ಮುಖ್ಯ ಕಾರ್ಮಿಕ ಕಲ್ಯಾಣಾಧಿಕಾರಿ ಚಂದ್ರಕಾಂತ ಎಸ್.ಫುಲೇಕಾರ ಇದ್ದರು.
ಸರ್ಕಾರದ ಬಜೆಟ್‌ನಲ್ಲಿ ಘೋಷಿಸಿದಂತೆ 400 ಬಸ್‌ಗಳ ಖರೀದಿಗೆ ಟೆಂಡರ್ ಕರೆಯಲಾಗಿದೆ. ಈಗಾಗಲೇ 123 ಬಸ್‌ಗಳ ಖರೀದಿ ಆಗಿದೆ. ಜನಸಂಚಾರಕ್ಕೆ ಅನುಗುಣವಾಗಿ ಆ ಮಾರ್ಗಗಳಲ್ಲಿ ಬಸ್ ವ್ಯವಸ್ಥೆಗೆ ಕ್ರಮ ಕೈಗೊಳ್ಳಲಾಗುವುದುಡಾ.ಸುಶೀಲಾ ಬಿ. ವ್ಯವಸ್ಥಾಪಕ ನಿರ್ದೇಶಕಿ ಕೆಕೆಆರ್‌ಟಿಸಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.