ADVERTISEMENT

ಕಲಬುರಗಿ | ಕಾಡುತ್ತಿರುವ ಸಿಬ್ಬಂದಿ ಕೊರತೆ: KKRTCಗೆ ಬೇಕಿದೆ 1,437 ಕಂಡಕ್ಟರ್

ಹೊಸ ಬಸ್‌ಗೆ ತಕ್ಕಂತೆ ಹೆಚ್ಚಿದ ಶೆಡ್ಯೂಲ್‌ಗಳ ಸಂಖ್ಯೆ

ಮನೋಜ ಕುಮಾರ್ ಗುದ್ದಿ
Published 1 ಡಿಸೆಂಬರ್ 2024, 5:17 IST
Last Updated 1 ಡಿಸೆಂಬರ್ 2024, 5:17 IST
<div class="paragraphs"><p>  ಕೆಕೆಆರ್‌ಟಿಸಿ ಬಸ್‌ಗಳು</p></div>

ಕೆಕೆಆರ್‌ಟಿಸಿ ಬಸ್‌ಗಳು

   

ಕಲಬುರಗಿ: ರಾಜ್ಯ ಸರ್ಕಾರ ‘ಶಕ್ತಿ’ ಯೋಜನೆ ಜಾರಿಗೊಳಿಸಿದ ಬಳಿಕ ಹೆಚ್ಚಿದ ಬೇಡಿಕೆಗೆ ತಕ್ಕಂತೆ ಹೆಚ್ಚುವರಿ ಶೆಡ್ಯೂಲ್‌ಗಳಲ್ಲಿ ಬಸ್‌ ಸಂಚಾರ ಆರಂಭಿಸಿರುವ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮವು (ಕೆಕೆಆರ್‌ಟಿಸಿ) ಕಂಡಕ್ಟರ್‌ಗಳ ಕೊರತೆಯಿಂದಾಗಿ ಸಂಕಷ್ಟಕ್ಕೆ ಸಿಲುಕಿದೆ.

ಕೆಕೆಆರ್‌ಟಿಸಿಯು ವರ್ಷದ ಹಿಂದೆ 1,619 ಡ್ರೈವರ್ ಕಂ ಕಂಟಕ್ಟರ್‌ ಹುದ್ದೆಗಳನ್ನು ಭರ್ತಿ ಮಾಡಿಕೊಂಡಿತ್ತು. ಆದರೆ, ನಿವೃತ್ತಿ ಹೊಂದುವವರ ಸಂಖ್ಯೆ ಹೆಚ್ಚುತ್ತಿರುವ ಪರಿಣಾಮ ನಿಗಮಕ್ಕೆ ಹೆಚ್ಚುವರಿ ಬಸ್‌ಗಳನ್ನು ಓಡಿಸುವುದು ಕಷ್ಟವಾಗುತ್ತಿದೆ. ಹೀಗಾಗಿ ಖಾಲಿ ಇರುವ 1,437 ಹುದ್ದೆ ಸೇರಿ ಚಾಲಕರು, ತಾಂತ್ರಿಕ ಸಿಬ್ಬಂದಿ ಸೇರಿ ಒಟ್ಟು 1,773 ಸಿಬ್ಬಂದಿಯನ್ನು ಹೊಸದಾಗಿ ನೇಮಕ ಮಾಡಿಕೊಳ್ಳಲು ನಿಗಮವು ಆಡಳಿತ ಮಂಡಳಿ ಸಭೆಯಲ್ಲಿ ತೀರ್ಮಾನ ಕೈಗೊಂಡಿದೆ. ಅನುಮೋದನೆಗಾಗಿ ರಾಜ್ಯ ಸರ್ಕಾರಕ್ಕೆ ಪ್ರಸ್ತಾವ ಕಳುಹಿಸಿದೆ.

ADVERTISEMENT

ಈ ಮೊದಲು ನಿಗಮದ ಹಂತದಲ್ಲಿಯೇ ಸಿಬ್ಬಂದಿ ನೇಮಕಾತಿಗೆ ಅವಕಾಶ ಇತ್ತು. ಆದರೆ, ಕೋವಿಡ್ ಕಾಲದಲ್ಲಿ ರಾಜ್ಯ ಸರ್ಕಾರ ನಿಗಮದ ಸಿಬ್ಬಂದಿ ವೇತನಕ್ಕಾಗಿ ಆರ್ಥಿಕ ನೆರವು ನೀಡಿದ್ದರಿಂದ ಅನುಮೋದನೆಗಾಗಿ ಕಳುಹಿಸಬೇಕು ಎಂದು ಸೂಚನೆ ನೀಡಿದೆ ಎಂದು ನಿಗಮದ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯು ನೀಡಿದ ಅನುದಾನದಲ್ಲಿ ಒಂದು ಬಾರಿ 113 ಹಾಗೂ ಮತ್ತೊಂದು ಬಾರಿ 109 ಬಸ್‌ಗಳನ್ನು ಖರೀದಿಸಲಾಗಿದೆ. ಜೊತೆಗೆ ನಿಗಮವು ಬ್ಯಾಂಕ್‌ನಿಂದ ಸಾಲ ಪಡೆದು 850 ಬಸ್‌ಗಳನ್ನು ಖರಿದಿಸಿರುವುದರಿಂದ ಅಗತ್ಯವಿರುವಷ್ಟು ಬಸ್‌ಗಳಿವೆ. ಹೀಗಾಗಿ ಬೇಡಿಕೆಗೆ ಅನುಗುಣವಾಗಿ ನಿಗಮವು 600 ಶೆಡ್ಯೂಲ್‌ಗಳನ್ನು ಹೊಸದಾಗಿ ಆರಂಭಿಸಿದೆ.

ಒಂದು ಅಂದಾಜಿನ ಪ್ರಕಾರ ಪ್ರತಿ ಶೆಡ್ಯೂಲ್‌ಗೆ 3 ಸಿಬ್ಬಂದಿಯಂತೆ 600 ಶೆಡ್ಯೂಲ್‌ಗಳಿಗೆ 1,800 ಸಿಬ್ಬಂದಿ ಅಗತ್ಯವಿದೆ. ಚಾಲಕರನ್ನು ಗುತ್ತಿಗೆ ಆಧಾರದ ಮೇಲೆ ತೆಗೆದುಕೊಳ್ಳಬಹುದು. ಆದರೆ, ನಿರ್ವಾಹಕರ ಬಳಿ ಟಿಕೆಟ್ ಮಾರಾಟದ ಹಣ ಇರಿಸಿಕೊಳ್ಳಬೇಕಿರುವುದರಿಂದ ಸಂಸ್ಥೆಯ ಸಿಬ್ಬಂದಿಯೇ ಇರಬೇಕು. ಹಾಗಾಗಿ, ಕಂಡಕ್ಟರ್‌ಗಳ ನೇಮಕಾತಿ ಶೀಘ್ರವಾಗಿ ನಡೆಯಬೇಕಿದೆ. ಈ ಕುರಿತು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರಿಗೂ ಮನವಿ ಮಾಡಲಾಗಿದೆ ಎನ್ನುತ್ತಾರೆ ಕೆಕೆಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಎಂ. ರಾಚಪ್ಪ.

115 ಬಸ್‌ಗಳ ನವೀಕರಣ: ಸಾರ್ವಜನಿಕರಿಂದ ಸಾರಿಗೆ ಸೌಲಭ್ಯಕ್ಕೆ ಬೇಡಿಕೆ ಹೆಚ್ಚುತ್ತಿರುವುದರಿಂದ 15 ವರ್ಷ ಮೀರದ, ಗ್ಯಾರೇಜಿನಲ್ಲಿ ನಿಂತಿರುವ ಬಸ್‌ಗಳ ನವೀಕರಣಕ್ಕೆ ಮುಂದಾಗಿದೆ. ಅಂತಹ 115 ಬಸ್‌ಗಳನ್ನು ದುರಸ್ತಿ ಮಾಡಿ ರಸ್ತೆಗಿಳಿಸುತ್ತಿದೆ. ಪ್ರತಿ ತಿಂಗಳೂ 50 ಬಸ್‌ಗಳನ್ನು ನವೀಕರಣ ಮಾಡುವಂತೆ ಸಿಬ್ಬಂದಿಗೆ ಸೂಚನೆ ನೀಡಲಾಗಿದೆ ಎಂದು ರಾಚಪ್ಪ ಅವರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

36 ಹುದ್ದೆಗಳಿಗೆ 3485 ಅರ್ಜಿ!

ಕಲ್ಯಾಣ ಕರ್ನಾಟಕ ಭಾಗದಲ್ಲಿ ನಿರುದ್ಯೋಗ ಎಷ್ಟು ಪ್ರಮಾಣದಲ್ಲಿದೆ ಎಂಬುದಕ್ಕೆ ಸಾಕ್ಷಿಯಾಗಿ ಕೆಕೆಆರ್‌ಟಿಸಿಯ 36 ಬ್ಯಾಕ್‌ಲಾಗ್‌ ಹುದ್ದೆಗಳಿಗೆ 3485 ಉದ್ಯೋಗಾಕಾಂಕ್ಷಿಗಳು ಅರ್ಜಿ ಸಲ್ಲಿಸಿರುವುದೇ ಸಾಕ್ಷಿಯಾಗಿದೆ. ನಿಗಮದಲ್ಲಿ ಖಾಲಿ ಉಳಿದಿದ್ದ 36 ಹುದ್ದೆಗಳಿಗೆ 2022ರಲ್ಲಿ ಕರ್ನಾಟಕ ಪರೀಕ್ಷಾ ಮಂಡಳಿ ಸ್ಪರ್ಧಾತ್ಮಕ ಪರೀಕ್ಷೆ ನಡೆಸಿತ್ತು. ಕೆಇಎ ಪರೀಕ್ಷೆಯಲ್ಲಿ ಅಭ್ಯರ್ಥಿಗಳು ಗಳಿಸಿದ ಫಲಿತಾಂಶವನ್ನು ಆಧರಿಸಿ ಒಂದು ಹುದ್ದೆಗೆ ಐವರಂತೆ ಸಂದರ್ಶನಕ್ಕೆ ಕರೆಯಲಾಗಿದೆ. ಅಭ್ಯರ್ಥಿಗಳು ಗುರುವಾರ ನಿಗಮದ ಕೇಂದ್ರ ಕಚೇರಿಯಲ್ಲಿ ನಡೆದ ಸಂದರ್ಶನಕ್ಕೆ ಹಾಜರಾಗಿದ್ದರು.

300 ಸಿಬ್ಬಂದಿ ನೇಮಕಾತಿಗೆ ಬ್ರೇಕ್

ಕೆಕೆಆರ್‌ಟಿಸಿಯು 300 ವಿವಿಧ ಹಂತದ ಸಿಬ್ಬಂದಿಗಳ ನೇಮಕಾತಿಗೆ ತಯಾರಿ ನಡೆಸಿತ್ತು. ಅಷ್ಟರಲ್ಲಿ ಒಳಮೀಸಲಾತಿ ಇತ್ಯರ್ಥವಾಗುವವರೆಗೂ ಯಾವುದೇ ಸರ್ಕಾರಿ ಹುದ್ದೆಗಳ ನೇಮಕಾತಿ ಮಾಡದಂತೆ ಸರ್ಕಾರ ಸೂಚನೆ ನೀಡಿದ್ದರಿಂದ ಈ ನೇಮಕ ಪ್ರಕ್ರಿಯೆಯೂ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ. ಸಿಬ್ಬಂದಿ ಕೊರತೆ ನೀಗಿಸಲು ಗುತ್ತಿಗೆ ಆಧಾರದ ಮೇಲೆ ಒಂದು ಸಾವಿರ ಚಾಲಕರನ್ನು ನೇಮಕಾತಿ ಮಾಡಿಕೊಳ್ಳಲಾಗಿದೆ.

1437 ಕಂಡಕ್ಟರ್ ಹುದ್ದೆಗಳು ಭರ್ತಿಯಾದರೆ ನಿಶ್ಚಿಂತೆಯಾಗಿ ಬಸ್‌ಗಳನ್ನು ಓಡಿಸಬಹುದು. ಶೀಘ್ರ ಅನುಮೋದನೆ ನೀಡಿದರೆ ನೇಮಕ ಪ್ರಕ್ರಿಯೆ ಶುರುವಾಗಲಿದೆ
-ಎಂ. ರಾಚಪ್ಪ, ವ್ಯವಸ್ಥಾಪಕ ನಿರ್ದೇಶಕ ಕೆಕೆಆರ್‌ಟಿಸಿ
ಕಲ್ಯಾಣ ಕರ್ನಾಟಕ ಭಾಗದ ಹುದ್ದೆಗಳ ನೇಮಕಾತಿಗೆ ಆರ್ಥಿಕ ಇಲಾಖೆಯ ಅನುಮತಿ ಬೇಕಿಲ್ಲ. ಕೆಕೆಆರ್‌ಟಿಸಿ ಖಾಲಿ ಹುದ್ದೆಗಳ ಭರ್ತಿಗೆ ಅನುಮೋದನೆ ನೀಡಿಲ್ಲದಿರುವ ಬಗ್ಗೆ ಪರಿಶೀಲಿಸುತ್ತೇನೆ
-ಪ್ರಿಯಾಂಕ್ ಖರ್ಗೆ, ಜಿಲ್ಲಾ ಉಸ್ತುವಾರಿ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.