ADVERTISEMENT

ಮೀಸಲಾತಿಗಾಗಿ ಕುಡುಒಕ್ಕಲಿಗರ ಬೃಹತ್ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 16 ಜುಲೈ 2022, 14:42 IST
Last Updated 16 ಜುಲೈ 2022, 14:42 IST
ಮೀಸಲಾತಿಗೆ ಒತ್ತಾಯಿಸಿ ಅಖಿಲ ಭಾರತೀಯ ಲಿಂಗಾಯತ ಕುಡುವಕ್ಕಲಿಗ ಮಹಾಸಭಾ ನೇತೃತ್ವದಲ್ಲಿ ಸಮುದಾಯದ ಸಹಸ್ರಾರು ಜನರು ಕಲಬುರಗಿಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು–ಪ್ರಜಾವಾಣಿ ಚಿತ್ರ: ತಾಜುದ್ದೀನ್ ಆಜಾದ್
ಮೀಸಲಾತಿಗೆ ಒತ್ತಾಯಿಸಿ ಅಖಿಲ ಭಾರತೀಯ ಲಿಂಗಾಯತ ಕುಡುವಕ್ಕಲಿಗ ಮಹಾಸಭಾ ನೇತೃತ್ವದಲ್ಲಿ ಸಮುದಾಯದ ಸಹಸ್ರಾರು ಜನರು ಕಲಬುರಗಿಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು–ಪ್ರಜಾವಾಣಿ ಚಿತ್ರ: ತಾಜುದ್ದೀನ್ ಆಜಾದ್   

ಕಲಬುರಗಿ: ಉತ್ತರ ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಹಾಗೂ ಜೀವನೋಪಾಯಕ್ಕೆ ಕೃಷಿ ನಂಬಿರುವ ಕುಡುಒಕ್ಕಲಿಗ ಸಮುದಾಯಕ್ಕೆ ಪ್ರವರ್ಗ 3ಎ ಅಥವಾ 2ಎ ದಲ್ಲಿ ಮೀಸಲಾತಿ ಕಲ್ಪಿಸುವಂತೆ ಆಗ್ರಹಿಸಿ ನಗರದಲ್ಲಿ ಶನಿವಾರ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಯಿತು.

ಸುಮಾರು 15 ಜಿಲ್ಲೆಗಳಿಂದ ಬಂದ ಸಮುದಾಯದ ಪ್ರಮುಖರು ಮತ್ತು ಕಾರ್ಯಕರ್ತರು ಮೊದಲು ಬಹಿರಂಗ ಸಭೆ ನಡೆಸಿ, ನಂತರ ಐವಾನ್–ಇ–ಶಾಹಿ ಅತಿಥಿಗೃಹದವರೆಗೆ ಪ್ರತಿಭಟನಾ ಮೆರವಣಿಗೆ ಕೈಗೊಂಡು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ್ ಹೆಗ್ಡೆಯವರಿಗೆ ಮನವಿಪತ್ರ ಸಲ್ಲಿಸಿದರು.

‌‘ಲಿಂಗಾಯತ ಉಪ ಪಂಗಡವಾದ ಕುಡುಒಕ್ಕಲಿಗ ಸಮುದಾಯವು ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿದೆ. ರಾಜ್ಯ ಸರ್ಕಾರವು ಜಾತಿಪಟ್ಟಿಯಲ್ಲಿ ಲಿಂಗಾಯತ ಕುಡುಒಕ್ಕಲಿಗ ಎಂದು ಉಲ್ಲೇಖಿಸಿ ಪ್ರವರ್ಗ–3ಎ ಅಥವಾ 2ಎ ಅಡಿ ಮೀಸಲಾತಿ ನೀಡಬೇಕು’ ಎಂದು ಸಮುದಾಯದ ಮುಖಂಡರು ಕೋರಿದರು.

ADVERTISEMENT

‘ವಿವಿಧ ಶಾಲಾ ಪ್ರಮಾಣಪತ್ರಗಳು ಮತ್ತು ಇತರ ದಾಖಲೆಪತ್ರಗಳಲ್ಲಿ ಲಿಂಗಾಯತ ಕೂಡಾವಕ್ಕಲ, ಲಿಂಗಾಯತ ಕುಡುವಕ್ಕಲ, ಕುಡೇವಕ್ಕಲಗ, ಕುಡವಕ್ಕಲೇಗರ, ಕುಡುಒಕ್ಕಲ, ಕುಡುವೂಕ್ಕಲ, ಕುಡೊಕ್ಕಲಿಗಾರ, ಹಿಂದೂ ಲಿಂಗಾಯತ ಕುಡು ಒಕ್ಕಲಿಗ, ಹಿಂದು ಕುಡು ಒಕ್ಕಲಿಗ, ವೀರಶೈವ–ಲಿಂಗಾಯತ ಕುಡುಒಕ್ಕಲಿಗ ಮತ್ತು ಇತರ ಮೂಲ ಕುಡವಕ್ಕಲಿಗ ಜಾತಿಯ ವಿವಿಧ ಒಕ್ಕಣಿಕೆಗಳನ್ನು ಮೀಸಲಾತಿಗೆ ಲಿಂಗಾಯತ ಕುಡುಒಕ್ಕಲಿಗ ಜಾತಿ, ಉಪ ಪಂಗಡಕ್ಕೆ ಸಮಾನ ಪದವೆಂದು ಪರಿಗಣಿಸಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.